ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಕ್ಕೂರು: ಮಾರ್ಚ್‌ ಅಂತ್ಯದೊಳಗೆ ಕಾವೇರಿ ನೀರು

ಜನರ ಬವಣೆಗಳಿಗೆ ದನಿಯಾದ ‘ಪ್ರಜಾವಾಣಿ’ ಜನಸ್ಪಂದನ l ಕಾಲಮಿತಿಯಲ್ಲಿ ಸಮಸ್ಯೆ ಇತ್ಯರ್ಥ: ಪಾಲಿಕೆ ಸದಸ್ಯ ಮುನೀಂದ್ರ ಕುಮಾರ್ ಭರವಸೆ
Last Updated 30 ನವೆಂಬರ್ 2019, 20:03 IST
ಅಕ್ಷರ ಗಾತ್ರ

ಬೆಂಗಳೂರು: ‘20 ವರ್ಷಗಳಿಂದ ನಮಗೆ ಕುಡಿಯುವ ನೀರಿನ ಬಗ್ಗೆ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಎರಡು ವರ್ಷಗಳಿಂದ ಸರಿಯಾಗಿ ನೀರೇ ಬರುತ್ತಿಲ್ಲ... ವಾರಕ್ಕೆರಡು ದಿನವೂ ನೀರು ಪೂರೈಕೆ ಆಗುತ್ತಿಲ್ಲ’

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಜಕ್ಕೂರು ವಾರ್ಡ್‌ನಲ್ಲಿ ಶನಿವಾರ ಏರ್ಪಡಿಸಿದ್ದ ‘ಜನಸ್ಪಂದನ’ ಕಾರ್ಯಕ್ರಮದಲ್ಲಿ ಅಗ್ರಹಾರ ಬಡಾವಣೆ ನಿವಾಸಿ ಲಿಂಗಪ್ಪ ನೀರಿನ ಸಮಸ್ಯೆಯನ್ನು ಹೇಳಿಕೊಂಡರು.

ಇದು ಅವರೊಬ್ಬರದೇ ಅಲ್ಲ, ಈ ವಾರ್ಡ್‌ನ ವಿನಾಯಕನಗರ, ದ್ವಾರಕಾನಗರ, ಕೋಗಿಲು, ಕಟ್ಟಿಗೇನಹಳ್ಳಿ, ನಿಸರ್ಗ ಬಡಾವಣೆ, ಪಾಲನಹಳ್ಳಿ ನಿವಾಸಿಗಳೂ ನೀರಿನ ಬವಣೆ ಬಗ್ಗೆ ಹೇಳಿಕೊಂಡರು.

ವರ್ಷದಿಂದ ವರ್ಷಕ್ಕೆ ಈ ಸಮಸ್ಯೆ ಹೆಚ್ಚುತ್ತಿರುವುದರ ಹಿಂದಿನ ಕಾರಣ ಹಾಗೂ ಅದಕ್ಕಿರುವ ಪರಿಹಾರವನ್ನು ಆಡಳಿತ ಪಕ್ಷದ ನಾಯಕರೂ ಆಗಿರುವ ವಾರ್ಡ್‌ನ ಪಾಲಿಕೆ ಸದಸ್ಯ ಕೆ.ಎ. ಮುನೀಂದ್ರ ಕುಮಾರ್‌ ವಿವರಿಸಿದರು. ‘ಈ ಪ್ರದೇಶದಲ್ಲಿ ಹಿಂದೆ ಬೆರಳೆಣಿಕೆಯಷ್ಟು ಮನೆಗಳಿದ್ದವು. ಈಗ ಪ್ರತಿದಿನವೂ ಹೊಸ ಮನೆಗಳು ತಲೆ ಎತ್ತುತ್ತಿವೆ. ನಾನು ಸದಸ್ಯನಾದ ಬಳಿಕವೇ 6,200ಕ್ಕೂ ಹೆಚ್ಚು ಹೊಸ ಮನೆಗಳು ನಿರ್ಮಾಣವಾಗಿವೆ. ಇದಕ್ಕೆ ವ್ಯತಿರಿಕ್ತವಾಗಿ ಅಂತರ್ಜಲ ಮಟ್ಟ ತೀವ್ರ ಕುಸಿತ ಕಂಡಿದೆ. 1,300 ಅಡಿ ಆಳದ ಕೊಳವೆಬಾವಿಗಳಲ್ಲೂ ನೀರು ಸಿಗುತ್ತಿಲ್ಲ. 90 ದಿನದಲ್ಲಿ 73 ಬೋರ್‌ವೆಲ್‌ ಕೊರೆಸಿದ್ದೇವೆ. ಬೆರಳೆಣಿಕೆ ಕೊಳವೆ
ಬಾವಿಗಳಲ್ಲಷ್ಟೇ ನೀರು ಸಿಕ್ಕಿದೆ. ಹಾಗಾಗಿ, ನೀರಿನ ಸಮಸ್ಯೆ ಆಗಿರುವುದು ನಿಜ. ಈ ಪ್ರದೇಶಕ್ಕೂ ಕಾವೇರಿ ನೀರಿನ ಸಂಪರ್ಕ ಪಡೆಯುವುದೊಂದೇ ಈ ಸಮಸ್ಯೆಗೆ ಪರಿಹಾರ’ ಎಂದರು.

‘ಕಾವೇರಿ ನೀರು ಪೂರೈಕೆಗೆ ಜಲಮಂಡಳಿ ಮೂಲಸೌಕರ್ಯ ಅಳವಡಿಸಿದೆ. ಮುಂದಿನ ವರ್ಷದ ಮಾರ್ಚ್‌ ವೇಳೆಗೆ ಕೋಗಿಲು ಹಾಗೂ ಅಗ್ರಹಾರ ಬಡಾವಣೆಗೆ ಕಾವೇರಿ ನೀರು ಪೂರೈಕೆ ಆಗಲಿದೆ. ಇಲ್ಲಿನ ನಿವಾಸಿಗಳು ದಾಖಲಾತಿಗಳನ್ನು ಸಲ್ಲಿಸಿ ನಲ್ಲಿ ಸಂಪರ್ಕ ಪಡೆಯಬೇಕು’ ಎಂದು ಸಲಹೆ ನೀಡಿದರು.

ಬೆಳಗುತ್ತಿಲ್ಲ ಬೀದಿದೀಪ: ಬೀದಿದೀಪ ಸಮರ್ಪಕವಾಗಿ ಕಾರ್ಯನಿರ್ವಹಿಸದ ಬಗ್ಗೆಯೂ ಅನೇಕರು ಗಮನ ಸೆಳೆದರು. ‘ನಗರದ ಎಲ್ಲ ಬೀದಿದೀಪಗಳನ್ನು ಎಲ್‌ಇಡಿ ದೀಪಗಳನ್ನಾಗಿ ಪರಿವರ್ತಿಸಲು ಜಾಗತಿಕ ಟೆಂಡರ್ ಕರೆಯಲಾಗಿದೆ. ಹಾಗಾಗಿ, ಹೊಸ ದೀಪ ಅಳವಡಿಸುತ್ತಿಲ್ಲ. ಈಗ ಇರುವ ಬೀದಿದೀಪಗಳ ದುರಸ್ತಿ ಕಾರ್ಯವನ್ನು ತಕ್ಷಣವೇ ಕೈಗೊಳ್ಳುತ್ತೇವೆ’ ಎಂದು ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್‌ ರಾಜೇಂದ್ರ ನಾಯ್ಕ್‌ ಹೇಳಿದರು.

ಬಾರ್‌ ಬಳಿ ಯುವಕರು ಗುಂಪು ಕಟ್ಟಿಕೊಂಡು ಚುಡಾಯಿಸುವುದು, ಯುವಜನರು ಮಾದಕ ವಸ್ತುಗಳ ಚಟಕ್ಕೆ ದಾಸರಾಗುತ್ತಿರುವುದರ ಬಗ್ಗೆಯೂ ಕೆಲವರು ದೂರಿದರು.

ಮಾದಕವಸ್ತು ಮಾರಾಟ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು. ಪುಂಡ ಪೋಕರಿಗಳ ಹಾವಳಿ ಇರುವ ಕಡೆ ಗಸ್ತು ಹೆಚ್ಚಿಸಿ ಇಂತಹ ಚಟುವಟಿಕೆ ತಡೆಯಬೇಕು ಎಂದು ಪೊಲೀಸ್‌ ಇಲಾಖೆ ಅಧಿಕಾರಿಗಳಿಗೆ ಕಾರ್ಪೊರೇಟರ್‌ ಸೂಚಿಸಿದರು.

‘ವಾರ್ಡ್‌ನಲ್ಲಿ ಕಾವೇರಿ ನೀರಿನ ಸಂಪರ್ಕಕ್ಕೆ ಅಗೆದಿರುವ ರಸ್ತೆ ಇನ್ನೂ ಮುಚ್ಚಿಲ್ಲ. ಏಕೆಂದರೆ ಇಲ್ಲಿ ಒಳಚರಂಡಿ ಕೊಳವೆ ಅಳವಡಿಸಬೇಕಿದೆ. ಇದಕ್ಕೆ ಅನುದಾನ ಕೊರತೆಯಾದ ಕಾರಣ ಕಾಮಗಾರಿ ವಿಳಂಬವಾಗಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲಾಗು
ವುದು’ ಎಂದು ಪಾಲಿಕೆ ಸದಸ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೆಚ್ಚಾಗಿದೆ ಬೀದಿನಾಯಿ ಹಾವಳಿ: ಬೀದಿನಾಯಿ ಹಾವಳಿ ಜಾಸ್ತಿಯಾಗಿರುವ ಬಗ್ಗೆಯೂ ಅನೇಕರು ಅಳಲು ತೋಡಿಕೊಂಡರು.

‘ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿ ಅದೇ ಸ್ಥಳದಲ್ಲಿ ಬಿಡಬಹುದು. ನಮ್ಮ ಮನೆಯ ಬಳಿಯೂ 14 ಬೀದಿನಾಯಿಗಳಿವೆ. ಈ ವಿಚಾರದಲ್ಲಿ ನಾನೂ ಅಸಹಾಯಕ’ ಎಂದು ಮುನೀಂದ್ರ ಕುಮಾರ್ ಹೇಳಿದರು.

ಜಕ್ಕೂರು ವಾರ್ಡ್‌ನಲ್ಲಿ ಬಿಎಂಟಿಸಿ ಬಸ್‌ಗಳ ಕೊರತೆ ಇರುವ ಬಗ್ಗೆ ಅನೇಕರು ಗಮನ ಸೆಳೆದರು.

ಅಗ್ರಹಾರ ಬಡಾವಣೆಗೆ ಎರಡು ಬಸ್‌ಗಳು ಮಂಜೂರಾಗಿವೆ. ಶಿವಾಜಿನಗರ ಕಡೆಗೆ ಇನ್ನೂ ಮೂರು ಬಸ್‌ಗಳನ್ನು ಜಕ್ಕೂರು ವಾರ್ಡ್‌ ಮೂಲಕ ಸಂಚರಿಸಲು ಶೀಘ್ರವೇ ಆದೇಶ ಆಗಲಿದೆ ಎಂದು ಮುನೀಂದ್ರ ಕುಮಾರ್‌ ತಿಳಿಸಿದರು.

ಕಸ ವಿಲೇವಾರಿ: ಮಾದರಿ ಆಗಲಿದೆ ಜಕ್ಕೂರು

‘ಕಸ ವಿಲೇವಾರಿ ವಿಚಾರದಲ್ಲಿ ಜಕ್ಕೂರು ವಾರ್ಡ್‌ 3 ತಿಂಗಳಲ್ಲಿ ಮಾದರಿ ಆಗಲಿದೆ’ ಎಂದು ಮುನೀಂದ್ರ ಕುಮಾರ್‌ ತಿಳಿಸಿದರು.

‘ಸ್ವಚ್ಛತೆ ವಿಚಾರದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವ ಇಂದೋರ್‌ಗೆ ಬಿಬಿಎಂಪಿಯಿಂದ ನಿಯೋಗ ತೆರಳಿ ಅಲ್ಲಿನ ಕಸ ವಿಲೇವಾರಿ ವ್ಯವಸ್ಥೆಯನ್ನು ಅಧ್ಯಯನ ಮಾಡಿದೆ. ಅಂತಹದ್ದೇ ವ್ಯವಸ್ಥೆಯನ್ನು ಬಿಬಿಎಂಪಿಯಲ್ಲೂ ಜಾರಿಗೊಳಿಸಲಿದ್ದೇವೆ. ಹೊಸ ವ್ಯವಸ್ಥೆ ಜಕ್ಕೂರು ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳಲಿದೆ. ಆಟೊ ಟಿಪ್ಪರ್‌ ಎಲ್ಲೆಲ್ಲಿ ಸಾಗಿತು, ಎಷ್ಟು ಕೆ.ಜಿ.ಕಸ ಸಂಗ್ರಹಿಸಿತು ಎಂಬ ವಿವರಗಳನ್ನೂ ನಿಯಂತ್ರಣ ಕೊಠಡಿಯಲ್ಲಿ ಕುಳಿತು ತಿಳಿಯುವ ವ್ಯವಸ್ಥೆ ಜಾರಿಯಾಗಲಿದೆ’ ಎಂದರು.

‘24 ಚ.ಕಿ.ಮೀ ವ್ಯಾಪ್ತಿ ಹೊಂದಿರುವ ವಿಶಾಲ ವಾರ್ಡ್ ನಮ್ಮದು. ಇಲ್ಲಿ ಕಸ ಸಾಗಿಸುವ ವಾಹನಗಳ ಕೊರತೆ ಇದೆ. ಅದಕ್ಕೆ ಎರಡು ಆಟೊ ಟಿಪ್ಪರ್‌ಗಳನ್ನು ಹೆಚ್ಚುವರಿಯಾಗಿ ಮಂಜೂರು ಮಾಡಲಾಗಿದೆ. ಇನ್ನೂ ಆರು ಆಟೊ ಟಿಪ್ಪರ್‌ಗಳನ್ನು ಮಂಜೂರು ಮಾಡಲಾಗುತ್ತದೆ’ ಎಂದರು.

‘ಮಿಟಗಾನಹಳ್ಳಿ ಹಾಗೂ ಬೆಳ್ಳಹಳ್ಳಿ ಕಸದ ಭೂಭರ್ತಿ

ಘಟಕದಿಂದ ದುರ್ವಾಸನೆ ಬರುತ್ತಿದೆ. ಬೆಳ್ಳಹಳ್ಳಿ ಭೂಭರ್ತಿ ಘಟಕದಲ್ಲಿ ಅದರ ಸಾಮರ್ಥ್ಯಕ್ಕೂ ಮೀರಿ ಕಸ ಸುರಿಯ
ಲಾಗುತ್ತಿದೆ’ ಎಂದು ಜ್ಞಾನಮೂರ್ತಿ ದೂರಿದರು. ‘ಕಸದ ಲಾರಿ ದುರ್ವಾಸನೆ ಬೀರುತ್ತಾ ಸಾಗುತ್ತದೆ. ಲಾರಿಗೆ ವಾರ್ಡ್ ಮೂಲಕ ಸಾಗಲು ಅವಕಾಶ ನೀಡಬಾರದು’ ಎಂದು ಶ್ರೀ ಸಾಯಿ ಸಮೃದ್ಧಿ ಅಪಾರ್ಟ್‌ಮೆಂಟ್‌ ಸಮುಚ್ಚಯದ ಸಂತೋಷ್‌ ಒತ್ತಾಯಿಸಿದರು.

‘ಸ್ವಚ್ಛ ಭಾರತ’ದ ಪಾಠ ಮಾಡುವುದು ಹೇಗೆ?: ಶಿಕ್ಷಕಿ ಪ್ರಶ್ನೆ

‘ನಮ್ಮ ಶಾಲೆಯ ಬಳಿ ಒಳಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಅರ್ಧಎಕರೆ ಜಾಗದಲ್ಲಿ ಕೊಚ್ಚೆ ನೀರು ನಿಲ್ಲುತ್ತದೆ. ದುರ್ವಾಸನೆಯಿಂದ
ಕೂಡಿದ ಈ ನೀರಿನಿಂದ ವಿದ್ಯಾರ್ಥಿಗಳಿಗೆ ಅನಾರೋಗ್ಯ ಉಂಟಾಗುವಅಪಾಯ ಇದೆ. ಶಾಲೆಯಲ್ಲಿ ಸ್ವಚ್ಛ ಭಾರತದ ಬಗ್ಗೆ ನಾವು ಪಾಠ ಮಾಡುವುದಾದರೂ ಹೇಗೆ?’

ವಿಸ್ಡಮ್‌ ಇಂಟರ್‌ ನ್ಯಾಷನಲ್‌ ಶಾಲೆಯ ಶಿಕ್ಷಕಿಯೊಬ್ಬರು ಮುಂದಿಟ್ಟ ಪ್ರಶ್ನೆ ಇದು. ಇದು ಅವರೊಬ್ಬರ ಪ್ರಶ್ನೆ ಮಾತ್ರವಲ್ಲ. ವಾರ್ಡ್‌ನ ಅನೇಕ ಬಡಾವಣೆಗಳ ನಿವಾಸಿಗಳೂ ಒಳಚರಂಡಿ ವ್ಯವಸ್ಥೆಯ ಲೋಪದ ಬಗ್ಗೆ ಪ್ರಸ್ತಾಪ ಮಾಡಿದರು. ಚಾಮುಂಡಿ ಬಡಾವಣೆಯ ಅರ್ಧ ಎಕರೆಯಷ್ಟು ಜಾಗದಲ್ಲಿ ಒಳಚರಂಡಿ ನೀರು ಬಂದು ಸೇರಿಕೊಳ್ಳುತ್ತಿರುವ ಬಗ್ಗೆ ದಿಲೀಪ್‌ ಕುಮಾರ್‌ ಗಮನ ಸೆಳೆದರು.

‘ವಾರ್ಡ್‌ನಲ್ಲಿ ಅನೇಕ ಹೊಸ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ನಿರ್ಮಾಣವಾಗಿವೆ. 20ಕ್ಕಿಂತ ಹೆಚ್ಚು ಮನೆ ಇರುವ ಅಪಾರ್ಟ್‌ಮೆಂಟ್‌
ಸಮುಚ್ಚಯದವರು ಸ್ವಂತ ಖರ್ಚಿನಲ್ಲಿ ತ್ಯಾಜ್ಯನೀರು ಶುದ್ಧೀಕರಣ ಘಟಕ ಅಳವಡಿಸಿಕೊಳ್ಳಬೇಕು. ಇತ್ತೀಚೆಗೆ ಎಸ್‌ಟಿಪಿಯಲ್ಲಿ ಶುದ್ಧೀಕರಿಸಿದ ನೀರನ್ನು ಕೆರೆಗೆ ಬಿಡದಂತೆ ನಿರ್ಬಂಧಿಸಲಾಗಿದೆ. ಇದರಿಂದಾಗಿ ಸಮಸ್ಯೆ ಸೃಷ್ಟಿಯಾಗಿದೆ. ಅಷ್ಟೇ ಅಲ್ಲ; ಪ್ಲಾಸ್ಟಿಕ್‌ ಸಿಲುಕಿಕೊಳ್ಳುವುದರಿಂದಲೂ ಒಳಚರಂಡಿ ಕಟ್ಟಿಕೊಂಡು ಸಮಸ್ಯೆಗೆ ಕಾರಣವಾಗುತ್ತಿದೆ’ ಎಂದು ಮುನೀಂದ್ರ ಕುಮಾರ್‌ ತಿಳಿಸಿದರು.

‘110 ಹಳ್ಳಿಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಯಡಿ ಒಳಚರಂಡಿ ಜಾಲ ರೂಪಿಸಲಾಗುತ್ತಿದೆ. ಅದನ್ನು ಅಗ್ರಹಾರ ಬಡಾವಣೆಗೂ ಜೋಡಿಸಿ ಶಾಲೆ ಬಳಿ ನೀರು ನಿಲ್ಲುವ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಅವರು ಆಶ್ವಾಸನೆ ನೀಡಿದರು.

‘ಕೆಲವೆಡೆ ಜಾಗದ ಅಭಾವದಿಂದಾಗಿ ಒಳಚರಂಡಿ ಕೊಳವೆ ಅಳವಡಿಕೆ ಪೂರ್ಣಗೊಂಡಿಲ್ಲ. ಚಾಮುಂಡಿ ಬಡಾವಣೆಯ ಸಮಸ್ಯೆಯನ್ನು 15 ದಿನಗಳ ಒಳಗೆ ಸರಿಪಡಿಸುತ್ತೇವೆ’ ಎಂದು ಜಲಮಂಡಳಿಯ ಕಾರ್ಯಪಾಲಕ ಎಂಜಿನಿಯರ್‌ ಜಯಶಂಕರ್‌ ಭರವಸೆ ನೀಡಿದರು.

‘ಎ ಖಾತಾ– ಬಿಕ್ಕಟ್ಟು ಶೀಘ್ರ ಇತ್ಯರ್ಥ’

ಅಗ್ರಹಾರ ಬಡಾವಣೆಯಲ್ಲಿ ಈ ಹಿಂದೆ ಪುರಸಭೆ ಇದ್ದಾಗ ಮಂಜೂರಾದ ಕೆಲವು ನಿವೇಶನಗಳಿಗೆ ಇನ್ನೂ ಎ ಖಾತಾ ನೀಡಲು ಅಧಿಕಾರಿಗಳು ಸತಾಯಿಸುತ್ತಿರುವ ಬಗ್ಗೆ ಸುದರ್ಶನ ಆಕ್ರೋಶ ವ್ಯಕ್ತಪಡಿಸಿದರು.

‘ಮೂಲ ದಾಖಲೆಗಳನ್ನು ಪರಿಶೀಲಿಸಿ ಎ –ಖಾತಾ ನೀಡಬೇಕಾಗುತ್ತದೆ. ಮಂಜೂರಾಗಿದ್ದ ನಿವೇಶನವನ್ನು ನಿಗದಿತ ಅವಧಿ ಒಳಗೆ ಬೇರೆಯವರು ಜಿಪಿಎ ಆಧಾರದಲ್ಲಿ ಖರೀದಿಸಿದ್ದರೆ ಅವರಿಗೆ ಜಾಗದ ಮಾಲೀಕತ್ವ ನೀಡುವ ಅಧಿಕಾರ ನಮಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಇದನ್ನು ಪರಿಶೀಲಿಸಿ ಶೀಘ್ರವೇ ಕ್ರಮಕೈಗೊಳ್ಳುತ್ತೇವೆ’ ಎಂದು ಯಲಹಂಕ ವಲಯದ ಜಂಟಿ ಆಯುಕ್ತ ಅಶೋಕ್‌ ಭರವಸೆ ನೀಡಿದರು.

‘ನೈಜ ವಾರಸುದಾರರನ್ನು ಗುರುತಿಸಲು 2011ರಲ್ಲೇ ಈ ಕುರಿತು ಸರ್ವೆ ನಡೆಸಲಾಗಿದೆ. ಮೂಲದಾಖಲೆ ಒದಗಿಸುವ ಬಗ್ಗೆ ಜಿಲ್ಲಾಧಿಕಾರಿ ಜೊತೆ ಚರ್ಚಿಸುತ್ತೇನೆ’ ಎಂದು ಮುನೀಂದ್ರ ಕುಮಾರ್‌ ತಿಳಿಸಿದರು.

ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ

*ನಾಗರಾಜ್‌: ಜಕ್ಕೂರು ಕೆರೆಗೆ ಕಸ ಹಾಕಬೇಡಿ ಎಂದು ಕೈಮುಗಿದು ಕೋರಿದರೂ ಕೇಳುವುದಿಲ್ಲ. ಕಟ್ಟಡ ತ್ಯಾಜ್ಯ ಹಾಗೂ ಮಾಂಸದ ತ್ಯಾಜ್ಯವನ್ನು ತಂದು ಸುರಿಯುತ್ತಾರೆ.

ಮುನೀಂದ್ರ ಕುಮಾರ್‌: ಕಟ್ಟಡ ತ್ಯಾಜ್ಯ ವಿಲೇವಾರಿಗೆಪಾಲಿಕೆ ಕಣ್ಣೂರು ಹಾಗೂ ಬೆಳ್ಳಹಳ್ಳಿ ಬಳಿ ಎರಡು ಘಟಕ ಸ್ಥಾಪಿಸಲಿದೆ. ಈ ತ್ಯಾಜ್ಯದಿಂದ ಮರಳು ಮತ್ತಿತರ ಸಾಮಗ್ರಿ ಮರಳಿ ಪಡೆಯಲಾಗುತ್ತದೆ. ಕೆರೆ ಬಳಿ ತ್ಯಾಜ್ಯ ಸುರಿದವರಿಗೆ
ದಂಡ ವಿಧಿಸಲಿದ್ದೇವೆ

* ಸುಧಾ ರಾವ್‌: ಶ್ರೀರಾಮಪುರ ಬಡಾವಣೆಯಲ್ಲಿ ಒಳಚರಂಡಿ ನೀರು ಯಾವಾಗಲೂ ಸೋರಿಕೆಯಾಗುತ್ತಿರುತ್ತದೆ. ರಸ್ತೆಗಳೂ ಹದಗೆಟ್ಟಿವೆ.

ಜಯಶಂಕರ್‌, ಜಲಮಂಡಳಿ ಇ.ಇ: ಮೇಸ್ತ್ರಿಪಾಳ್ಯದ ಬಳಿ ತಾಂತ್ರಿಕ ಸಮಸ್ಯೆ ಇದೆ. ಪರ್ಯಾಯ ವಿನ್ಯಾಸ ರೂಪಿಸುವ ಮೂಲಕ ಈ ಸಮಸ್ಯೆ ಬಗೆಹರಿಸುತ್ತೇವೆ.

* ಮುನಿಯಪ್ಪ: ಪಾಲನಹಳ್ಳಿಯಲ್ಲಿ ಸ್ಮಶಾನ ಇಲ್ಲ. ಅಂತ್ಯಕ್ರಿಯೆಗೆ ಬೇರೆ ಕಡೆ ಹೋಗಬೇಕಿದೆ. ಕೆರೆಗಳ ಬಳಿ ಶೌಚಾಲಯಗಳ ಕೊರತೆ ಇದೆ.

ಮುನೀಂದ್ರ ಕುಮಾರ್: ಎಲ್ಲ ಕೆರೆಗಳ ಬಳಿ ಶೌಚಾಲಯ ಸೌಲಭ್ಯ ಒದಗಿಸಲಿದ್ದೇವೆ. ಸ್ಮಶಾನ ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ.

* ವೆಂಕಟೇಶ್‌: ನಮ್ಮ ತೆರಿಗೆ ಹಣದಿಂದಲೇ ಅಧಿಕಾರಿಗಳು ಸಂಬಳ ಪಡೆಯುತ್ತಾರೆ. ನಾವು ಕಚೇರಿಗೆ ಹೋದರೆ ಕನಿಷ್ಠ ಗೌರವವನ್ನು ನೀಡುವುದಿಲ್ಲ. ಸಣ್ಣ ಕೆಲಸವಾಗಬೇಕಿದ್ದರೂ ಲಂಚ ಕೊಡಬೇಕು.

ಮುನೀಂದ್ರ: ಸಾರ್ವಜನಿಕರು ಕಚೇರಿಗೆ ಬಂದ ತಕ್ಷಣ ಅಧಿಕಾರಿಗಳು ಮೊದಲು ಅವರಿಗೆ ಕುಳಿತುಕೊಳ್ಳಲು ಕುರ್ಚಿ ನೀಡಬೇಕು. ಅವರ ಸಮಸ್ಯೆ ಬಗ್ಗೆ ಚರ್ಚಿಸಿ. ಜನರ ಸಮಸ್ಯೆಗೆ ಸ್ಪಂದಿಸದ ಕಂದಾಯ ಅಧಿಕಾರಿಗಳನ್ನು ಬೇರೆ ಕಡೆ ವರ್ಗಾವಣೆ ಮಾಡಲಿದ್ದೇವೆ.

* ಮುನಿರಾಜು: ಈ ವಾರ್ಡ್‌ನಲ್ಲಿ 1300 ನೇಕಾರರಿದ್ದಾರೆ. ವಾರ್ಡ್‌ನಲ್ಲಿ ವಿದ್ಯುತ್‌ ಪೂರೈಕೆ ಪದೇ ಪದೇ
ವ್ಯತ್ಯಯವಾಗುತ್ತಿರುವುದರಿಂದ ಅವರು ಸಮಸ್ಯೆಗೆ ಸಿಲುಕಿದ್ದಾರೆ.

ಬೆಸ್ಕಾಂ ಅಧಿಕಾರಿ: ಕೆಲವು ಕೇಬಲ್‌ಗಳನ್ನು ನೆಲದಡಿ ಅಳವಡಿಸುತ್ತಿರುವುದರಿಂದ ಸ್ವಲ್ಪ ಸಮಸ್ಯೆ ಇದೆ. ಇಲ್ಲಿಗೆ ಪ್ರತ್ಯೇಕ ಸ್ಟೇಷನ್‌ಗೆ ಜಾಗ ಸಿಕ್ಕಲ್ಲಿ ಬೆಸ್ಕಾಂ ₹ 60 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ನಿರ್ಮಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT