ಕೇರಳ ಪರ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಲಾಬಿ: ಆರೋಪ

7
ಕೂರ್ಗ್‌ ವೈಲ್ಡ್‌ಲೈಫ್‌ ಸೊಸೈಟಿ ಆರೋಪ

ಕೇರಳ ಪರ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಲಾಬಿ: ಆರೋಪ

Published:
Updated:

ಬೆಂಗಳೂರು: ಮೂಲಸೌಲಭ್ಯ ಅಭಿವೃದ್ಧಿ ಯೋಜನೆಗಳ ಲಾಭವನ್ನು ಕೇರಳಕ್ಕೆ ಕೊಡಿಸಲು ಆ ರಾಜ್ಯದವರೂ ಹಾಗೂ ಕಾಂಗ್ರೆಸ್‌ ಪಕ್ಷದ ಕರ್ನಾಟಕ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರು ಸಮ್ಮಿಶ್ರ ಸರ್ಕಾರದ ಜತೆಗೆ ಪ್ರಬಲ ಲಾಬಿ ನಡೆಸುತ್ತಿದ್ದಾರೆ ಎಂದು ಕೊಡಗಿನ ಕೂರ್ಗ್‌ ವೈಲ್ಡ್‌ಲೈಫ್‌ ಸೊಸೈಟಿ ಆರೋಪಿಸಿದೆ.

‘ಕೊಡಗು ಮೂಲಕ ಮೈಸೂರು – ತಲಶ್ಶೇರಿ ರೈಲು ಮಾರ್ಗ ನಿರ್ಮಿಸಲು ಕೆಲವು ಸ್ಥಾಪಿತ ಹಿತಾಸಕ್ತಿಗಳ ಪರ ವೇಣುಗೋಪಾಲ್‌ ಲಾಬಿ ನಡೆಸುತ್ತಿದ್ದಾರೆ. ಯಾವುದೇ ಮುನ್ಸೂಚನೆ ಇಲ್ಲದೇ ಯೋಜನೆ ಅನುಷ್ಠಾನಗೊಳಿಸಲು ಪ್ರಯತ್ನ ನಡೆದಿದೆ. ಈ ಯೋಜನೆ ಅನುಷ್ಠಾನಕ್ಕೆ ಬಂದಲ್ಲಿ ಕಾವೇರಿ ಕಣಿವೆ, ಕೊಡಗು, ಮೈಸೂರು ಜಿಲ್ಲೆಗಳ ಭಾಗದಲ್ಲಿ ವ್ಯಾಪಕ ಅರಣ್ಯ ನಾಶ ಉಂಟಾಗಲಿದೆ. ಇದರಿಂದ ಕೃಷ್ಣರಾಜ ಸಾಗರ ಅಣೆಕಟ್ಟೆಗೆ ಶೇ 70ರಷ್ಟು ನೀರು ಪೂರೈಸುವ ಕಾವೇರಿ ಮೂಲಕ್ಕೆ ಧಕ್ಕೆ ಒದಗಲಿದೆ. ಈ ಯೋಜನೆಯನ್ನು ಜಾರಿಗೆ ತಂದು ಸ್ಥಾಪಿತ ಹಿತಾಸಕ್ತಿಗಳಿಗೆ ಲಾಭ ಮಾಡಿಕೊಡಲು ಅವರು ಮುಂದಾಗಿದ್ದಾರೆ. ಕೂಡಲೇ ಅವರನ್ನು ಉಸ್ತುವಾರಿ ಹುದ್ದೆಯಿಂದ ತೆರವು ಮಾಡಬೇಕು’ ಎಂದು ಸಂಸ್ಥೆಯ ಅಧ್ಯಕ್ಷ, ಕಾವೇರಿ ಉಳಿಸಿ ಅಭಿಯಾನದ ಸಂಯೋಜಕ ಕರ್ನಲ್‌ ಸಿ.ಪಿ. ಮುತ್ತಣ್ಣ ಅವರು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

‘ರಾಜ್ಯ ಈಗಾಗಲೇ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ತಮಿಳುನಾಡು ಜತೆ ತಿಕ್ಕಾಟದಲ್ಲಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ಸಾಲದಿಂದ ಸಾವಿಗೆ ಶರಣಾಗಿದ್ದಾರೆ. ಇಂಥ ವಿನಾಶಕಾರಿ ಯೋಜನೆಯನ್ನು ಜಾರಿಗೆ ತರುವ ಮುನ್ನ ಗಂಭೀರವಾಗಿ ಆಲೋಚಿಸಬೇಕು’ ಎಂದು ಅವರು ಪತ್ರದಲ್ಲಿ ಸಲಹೆ ನೀಡಿದ್ದಾರೆ.

‘2011ರಲ್ಲಿ ವೇಣುಗೋಪಾಲ್‌ ಅವರು ಸಾಕಷ್ಟು ಜನವಿರೋಧದ ನಡುವೆಯೂ ಕೊಡಗು ಮೂಲಕ ಮೈಸೂರು – ಕೋಯಿಕ್ಕೋಡ್‌ ನಡುವೆ 400 ಕೆವಿ ಸಾಮರ್ಥ್ಯದ ಹೈಟೆನ್ಷನ್‌ ವಿದ್ಯುತ್‌ ಮಾರ್ಗದ ಕಾಮಗಾರಿ ಅನುಷ್ಠಾನಗೊಳಿಸಲು ಪಾತ್ರ ವಹಿಸಿದ್ದರು. ಪರಿಣಾಮವಾಗಿ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ 60 ಸಾವಿರ ಮರಗಳನ್ನು ಬಲಿಗೊಡಲಾಯಿತು’ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಇದಕ್ಕೂ ಮುನ್ನ ನಂಜನಗೂಡು–ನಿಳಂಬೂರು ರೈಲ್ವೆ ಯೋಜನೆ ಅನುಷ್ಠಾನಕ್ಕೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಮಾತುಕತೆ ನಡೆಸಲು ವೇಣುಗೋಪಾಲ್‌ ನೇತೃತ್ವದಲ್ಲಿ ಕೇರಳ ನಿಯೋಗ ಬಂದಿತ್ತು. ಅವರ ಈ ನಡೆ ಸರಿಯಲ್ಲ ಎಂದು ಸೊಸೈಟಿ ಕಾರ್ಯಕರ್ತರು ಟೀಕಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !