ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಇಎ ಮಾಹಿತಿ ಸೋರಿಕೆ ಪ್ರಕರಣ: ಸೀಟ್‌ ಬ್ಲಾಕ್‌ ದಂಧೆಗೆ ಸಂಬಂಧ?

Last Updated 26 ನವೆಂಬರ್ 2019, 2:33 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವೆಬ್‌ಸೈಟ್‌ನಿಂದ ವಿದ್ಯಾರ್ಥಿಗಳ ಮಾಹಿತಿ ಸೋರಿಕೆ ಪ್ರಕರಣಕ್ಕೂ, ವೈದ್ಯಕೀಯ ಸೀಟ್‌ ಬ್ಲಾಕ್‌ ಮಾಡಿರುವ ದಂಧೆಗೂ ಸಂಬಂಧ ಇದೆಯೇ ಎಂಬ ಬಗ್ಗೆ ಗಮನ ಹರಿಸುವಂತೆ ಸರ್ಕಾರವು ತನಿಖಾಧಿಕಾರಿಗಳಿಗೆ ಸೂಚನೆ ನೀಡಿದೆ.

‌‘ನೀಟ್‌’ ಪರೀಕ್ಷೆ ಬರೆದ ನಮ್ಮನ್ನು ಕೆಲವು ಅನಾಮಧೇಯ ನಂಬರ್‌ ಮೂಲಕ ಸಂಪರ್ಕಿಸಲಾಗುತ್ತಿದೆ ಎಂದು ಹಲವು ವಿದ್ಯಾರ್ಥಿಗಳು ಕೆಇಎ ಅಧಿಕಾರಿಗಳಿಗೆ ತಿಳಿಸಿದ್ದರು. ದಂಧೆಯ ವಾಸನೆ ಆಗಲೇ ಅಧಿಕಾರಿಗಳ ಮೂಗಿಗೆ ಬಡಿದಿತ್ತು ಎನ್ನಲಾಗಿದೆ.

ಕೆಇಎ ಮಾಹಿತಿ ಸೋರಿಕೆ ವಿಷಯ ಬಹಿರಂಗವಾಗುತ್ತಿದ್ದಂತೆಯೇ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದು, ಸೋರಿಕೆ ಮಾಡಿದವರು ಹಲವಾರು ದಂಧೆಗಳಲ್ಲಿ ತೊಡಗಿರುವ ಶಂಕೆಯನ್ನು ಸರ್ಕಾರಕ್ಕೆ ತಿಳಿಸಿದ್ದರು. ಸೀಟ್‌ ಬ್ಲಾಕಿಂಗ್‌ನಲ್ಲಿ ತೊಡಗಿರುವ ಕೆಲವು ಏಜೆಂಟ್‌ಗಳ ಕೈವಾಡ ಇರುವ ಕುರಿತು ಶಂಕಿಸಲಾಗಿತ್ತು ಎಂದು ಕೆಇಎ ಮೂಲಗಳು ತಿಳಿಸಿವೆ.

‘ಹೇಗಾದರೂ ಮಾಡಿ ವೃತ್ತಿಪರ ಕಾಲೇಜುಗಳಲ್ಲಿ ಸೀಟು ಪಡೆಯಲೇಬೇಕು ಎಂದು ಬಯಸುವ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ವಂಚಿಸುವ ಸಲುವಾಗಿಯೂ ಇಂತಹ ಮಾಹಿತಿಗಳನ್ನು ದಲ್ಲಾಳಿಗಳು ಪಡೆದಿರುವ ಸಾಧ್ಯತೆ ಇದೆ’ ಎಂದೂ ಹೇಳಲಾಗುತ್ತಿದೆ.

ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲು, ಭವಿಷ್ಯದಲ್ಲಿ ಇನ್ನಷ್ಟು ಸುಭದ್ರ ವ್ಯವಸ್ಥೆಯನ್ನು ರೂಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದುಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದರು.

ವೆಬ್‌ಸೈಟ್‌ಗೆ ಕನ್ನ ಅಲ್ಲ, ಸೋರಿಕೆ: ‘ವಿದ್ಯಾರ್ಥಿಗಳ ಮಾಹಿತಿ ಕೆಇಎ ವೆಬ್‌ಸೈಟ್‌ನಿಂದ ಹೊರಗಡೆ ಬಂದಿಲ್ಲ. ಸಿಇಟಿಯ ಸಂಪೂರ್ಣ ವ್ಯವಸ್ಥೆಯನ್ನು ರೂಪಿಸಿರುವುದು ನ್ಯಾಷನಲ್‌ ಇನ್‌ಫಾರ್ಮೆಟಿಕ್‌ ಸೆಂಟರ್‌ (ಎನ್‌ಐಸಿ). ಅದು ಬಹಳ ಸುರಕ್ಷಿತ ತಂತ್ರಾಂಶ. ಎನ್‌ಐಸಿ ಈ ಬಗ್ಗೆ ವರದಿ ಸಲ್ಲಿಸಿದೆ. ವಿದ್ಯಾರ್ಥಿಗಳ ಸಂಪರ್ಕ ಸಂಖ್ಯೆ, ಹೆಸರು ಮತ್ತು ಸಿಇಟಿ ನಂಬರ್ ಮಾತ್ರ ಹೊರಗಡೆ ಹೋಗಿದೆ’ ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ.

‘ಪಿಯು ವಿಜ್ಞಾನ ವಿಭಾಗದ ಎಲ್ಲಾ ವಿದ್ಯಾರ್ಥಿಗಳ ಮಾಹಿತಿಯನ್ನು ಕದಿಯಲಾಗಿದೆ. ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಈ ಮಾಹಿತಿ ಸೋರಿಕೆಯಾಗಿರುವ ಸಾಧ್ಯತೆ ಇದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವೈದ್ಯಕೀಯ ಸೀಟ್‌ ಬ್ಲಾಕಿಂಗ್‌ ಹಗರಣಕ್ಕೆ ಸಂಬಂಧಿಸಿದಂತೆಎರಡು ಡೀಮ್ಡ್‌ ವಿಶ್ವವಿದ್ಯಾಲಯಗಳ ಮೇಲೆ ಆದಾಯ ತೆರಿಗೆ ಇಲಾಖೆ ಈಚೆಗೆ ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT