ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಟು ಹಿಂಪಡೆಯಲು ವಿದ್ಯಾರ್ಥಿಗಳ ಒತ್ತಾಯ

ಮಾಪ್‌ ಅಪ್‌ ಸುತ್ತಿನಲ್ಲಿ ಎಂಜಿನಿಯರಿಂಗ್ ಸೀಟು: ಶುಲ್ಕ ಪಾವತಿಸಲು ಹಿಂದೇಟು
Last Updated 29 ಡಿಸೆಂಬರ್ 2020, 21:08 IST
ಅಕ್ಷರ ಗಾತ್ರ

ಬೆಂಗಳೂರು: ಯುಜಿ ಸಿಇಟಿಯ ಮಾಪ್‌ ಅಪ್‌ ಸುತ್ತಿನಲ್ಲಿ ಎಂಜಿನಿಯರಿಂಗ್ ಸೀಟು ಪಡೆದ ಕೆಲವು ವಿದ್ಯಾರ್ಥಿಗಳು, ಈ ಸೀಟುಗಳನ್ನು ಹಿಂಪಡೆದು ಶುಲ್ಕ ಮರುಪಾವತಿಸುವಂತೆ ಒತ್ತಾಯಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸೋಮವಾರ ಪೋಷಕರೊಂದಿಗೆ ಪ್ರತಿಭಟನೆ ನಡೆಸಿದರು.

ಕೆಲವು ವಿದ್ಯಾರ್ಥಿಗಳು ಇನ್ನೂ ಶುಲ್ಕ ಪಾವತಿಸಿಲ್ಲ. ಸೋಮವಾರ ಶುಲ್ಕ ಪಾವತಿಗೆ ಕೊನೆಯ ದಿನವಾಗಿತ್ತು. ಇದನ್ನು ಪಾವತಿಸದ ವಿದ್ಯಾರ್ಥಿಗಳು, ಸೀಟು ಹಿಂಪಡೆಯುವಂತೆ ಒತ್ತಾಯ ಮಾಡಿದರು.

‘ಎಂಜಿನಿಯರಿಂಗ್ ಬದಲು ಆಯುಷ್, ಬಿಎಸ್ಸಿ, ಬಿಕಾಂ ಅಥವಾ ಬೇರೆ ಇನ್ನಿತರ ಕೋರ್ಸ್‌ಗಳನ್ನು ವ್ಯಾಸಂಗ ಮಾಡಲು ಇಚ್ಛಿಸಿದ್ದೇವೆ. ಆಯುಷ್‌ ಕೋರ್ಸ್‌ಗಳಿಗೆ ಇನ್ನೂ ಕೌನ್ಸೆಲಿಂಗ್ ನಡೆಸಿಲ್ಲ. ಎಂಜಿನಿಯರಿಂಗ್ ಸೀಟು ಹಿಂಪಡೆದರೆ ಅನುಕೂಲವಾಗುತ್ತದೆ’ ಎಂದು ವಿದ್ಯಾರ್ಥಿಗಳು ಹೇಳಿದರು.

ಕೊನೆಯ ಸುತ್ತಿನಲ್ಲಿ ಸೀಟು ನಿಗದಿಯಾದ ನಂತರ ಪ್ರವೇಶ ಪಡೆಯದಿದ್ದರೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಶುಲ್ಕದ ಮೊತ್ತದಲ್ಲಿನ ಐದು ಪಟ್ಟು ದಂಡ ವಿಧಿಸಲು ಅವಕಾಶವಿದೆ. ಎಂಜಿನಿಯರಿಂಗ್ ಸೀಟುಗಳ ಶುಲ್ಕ ₹58 ಸಾವಿರದಷ್ಟಿದೆ. ಇನ್ನು, ಶುಲ್ಕ ಪಾವತಿಸದಿದ್ದರೂ ದಂಡ ವಿಧಿಸಲಾಗುತ್ತದೆ.

ಸೀಟು ಹಿಂಪಡೆಯಲು ಪೋಷಕರು ಸಲ್ಲಿಸಿದ ಮನವಿ ಸ್ವೀಕರಿಸಿದ ಅಧಿಕಾರಿಗಳು, ‘ನಿಯಮಗಳ ಪ್ರಕಾರ ಕೊನೆಯ ಸುತ್ತಿನಲ್ಲಿ ಸೀಟುಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸೀಟುಗಳನ್ನು ಹಿಂತಿರುಗಿಸುವ ಅವಕಾಶವಿಲ್ಲ. ಇದನ್ನು ರಾಜ್ಯ ಸರ್ಕಾರ ತೀರ್ಮಾನ ಮಾಡಬೇಕಿದೆ. ಈ ಮನವಿಯನ್ನು ಸರ್ಕಾರದ ಗಮನಕ್ಕೆ ತರಲಾಗುತ್ತದೆ. ಸರ್ಕಾರ ನಿರ್ಣಯ ಕೈಗೊಂಡ ಬಳಿಕ ಮಾಹಿತಿ ತಿಳಿಸಲಾಗುತ್ತದೆ’ ಎಂದು ಭರವಸೆ ನೀಡಿದರು.

‘ಮಾಪ್‌ ಅಪ್‌ ಸುತ್ತಿನಲ್ಲಿ ಸೀಟು ಪಡೆದು ಈಗ ಬೇಡ ಎನ್ನುವುದು ಸರಿಯಲ್ಲ. ಇದರಿಂದ ಹಿಂದಿನ ರ್ಯಾಂಕಿಂಗ್‌ನಲ್ಲಿದ್ದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಇದು ಪರೋಕ್ಷವಾಗಿ ಸೀಟ್ ಬ್ಲಾಕ್ ಮಾಡಿದಂತೆ. ಇದರಿಂದ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗೆ ಅನುಕೂಲವಾಗುತ್ತದೆ. ಆಯ್ಕೆ ದಾಖಲಿಸುವ ಸಂದರ್ಭದಲ್ಲಿಯೇ (ಆಪ್ಷನ್‌ ಎಂಟ್ರಿ) ಸರಿಯಾದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು’ ಎಂದು ಕೆಇಎಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT