ನಾಡಪ್ರಭು ಕೆಂಪೇಗೌಡ ದಿನಾಚರಣೆ

7
ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿಗೆ ಶ್ರದ್ಧಾಂಜಲಿ

ನಾಡಪ್ರಭು ಕೆಂಪೇಗೌಡ ದಿನಾಚರಣೆ

Published:
Updated:

ಬೆಂಗಳೂರು: ಬಿಬಿಎಂಪಿ ವತಿಯಿಂದ ಬುಧವಾರ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ದಿನಾಚರಣೆಯಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಕೆಂಪೇಗೌಡ ಹಾಗೂ ಅವರ ಸೊಸೆ ಲಕ್ಷ್ಮೀದೇವಿ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮೇಯರ್‌ ಆರ್‌.ಸಂಪತ್‌ರಾಜ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಗರದ ನಾಲ್ಕು ಗಡಿಗೋಪುರಗಳಿಂದ ಪಾಲಿಕೆ ಕೇಂದ್ರ ಕಚೇರಿಗೆ ಕೆಂಪೇಗೌಡರ ಜ್ಯೋತಿಯ ಮೆರವಣಿಗೆ ನಡೆಯಿತು. ಪಾಲಿಕೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ 143 ಅಧಿಕಾರಿಗಳಿಗೆ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರು ಪೌರಸೇವಾ ಪ್ರಶಸ್ತಿ  ಪ್ರದಾನ ಮಾಡಿದರು.

ಈ ಕಾರ್ಯಕ್ರಮ ನಡೆಯುತ್ತಿದ್ದಂತೆಯೇ ವಾಜಪೇಯಿ ಅವರು ನಿಧನರಾದ ಸಂದೇಶ ಬಂತು. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಎರಡು ನಿಮಿಷ ಮೌನ ಆಚರಿಸಿ, ಕಾರ್ಯಕ್ರಮವನ್ನು ಮೊಟಕುಗೊಳಿಸಲಾಯಿತು. 

ಮುಂದೂಡಿಕೆ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯನ್ನು ಗುರುವಾರ ಸಂಜೆ ಪ್ರದಾನ ಮಾಡಬೇಕಿತ್ತು. ಆದರೆ, ವಾಜಪೇಯಿ ಅವರ ನಿಧನದಿಂದಾಗಿ ಈ ಕಾರ್ಯಕ್ರಮವನ್ನು ಮುಂದೂಡಲಾಯಿತು. ವಾರದ ಬಳಿಕ ಸರಳ ಸಮಾರಂಭ ಏರ್ಪಡಿಸಿ ಪ್ರಶಸ್ತಿ ಪ್ರದಾನ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ಆಗಸ್ಟ್‌ 8ರಂದು ಕೆಂಪೇಗೌಡ ದಿನಾಚರಣೆಗೆ ದಿನ ನಿಗದಿಯಾಗಿತ್ತು, ತಮಿಳುನಾಡಿನ ಹಿರಿಯ ರಾಜಕಾರಣಿ ಎಂ.ಕರುಣಾನಿಧಿ ಸಾವಿನ ಶೋಕಾಚರಣೆ ಪ್ರಯುಕ್ತ ಸಮಾರಂಭವನ್ನು ಮುಂದೂಡಲಾಗಿತ್ತು.


ಕೆಂಪೇಗೌಡ ಜ್ಯೋತಿಯಾತ್ರೆಯಲ್ಲಿ ಗಮನ ಸೆಳೆದ ಯಕ್ಷಗಾನದ ವೇಷಧಾರಿಗಳು 

***

‘ಕೆಂಪೇಗೌಡರ ಹೆಸರು ದುರ್ಬಳಕೆ ನಿಲ್ಲಿಸಿ’
ಮಾಗಡಿ:
ಕೆಂಪೇಗೌಡರ ಹೆಸರನ್ನು ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ತಿರುಮಲೆ ಕನ್ನಡ ಕೂಟದ ಸಂಚಾಲಕ ಹಾಗೂ ಹಿರಿಯ ಲೇಖಕ ಟಿ.ಎಂ.ಶ್ರೀನಿವಾಸ್‌ ತಿಳಿಸಿದರು.

ಗುರುವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜನಂತೆಯೇ ಪ್ರಜೆಗಳು ಎಂಬ ಸದುದ್ದೇಶದಿಂದ ಕೆಂಪೇಗೌಡರು ಪ್ರಜೆಗಳ ಹಿತಚಿಂತನೆ ಮಾಡಿದ್ದರು.  ಅವರ ವಂಶಜರನ್ನು ಜಾತಿ, ಧರ್ಮಕ್ಕೆ ಸೀಮಿತಗೊಳಿಸದೆ, ವಿಶ್ವಮಾನವರನ್ನಾಗಿಸಲು ಎಲ್ಲರೂ ಶ್ರಮಿಸಬೇಕು ಎಂದರು.

ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೆಂಪೇಗೌಡ ಅಧ್ಯಯನ ಕೇಂದ್ರ ಆರಂಭವಾಗಿ ಹಲವು ವರ್ಷಗಳೇ ಉರುಳಿವೆ. ಇಲ್ಲಿ ಅವರ ಬಗ್ಗೆ ತಲಸ್ಪರ್ಶಿ ಸಂಶೋಧನೆ, ನೆಲೆಗಳ ಬಗ್ಗೆ ಅಧ್ಯಯನ ಮಾಡಿಲ್ಲ. ಸ್ಮಾರಕಗಳನ್ನು ಉಳಿಸುವ ಪ್ರಯತ್ನ ಮಾಡಿಲ್ಲ. ಅವರ ಬಗ್ಗೆ ಕಿಂಚಿತ್ತೂ ಗೊತ್ತಿಲ್ಲದವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಪ್ರಶಸ್ತಿಯ ಮೌಲ್ಯಗಳನ್ನು ಹರಾಜಿಗಿಟ್ಟಿದ್ದಾರೆ ಎಂದು ಆರೋಪಿಸಿದರು.

ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ಮಾತನಾಡಿ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ವರ್ಷಗಳೇ ಉರುಳಿವೆ. ಕೆಂಪಾಪುರದಲ್ಲಿ ಸಾಸಿವೆಯಷ್ಟು ಕೆಲಸವೂ ಆಗಿಲ್ಲ. ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೆಂಪೇಗೌಡರ ಹೆಸರಿನಲ್ಲಿ ದುಡ್ಡು ಮಾಡಿಕೊಳ್ಳುವ ಕೆಟ್ಟ ಕೆಲಸ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

‘ಸ್ಮಾರಕ ನಿರ್ಮಿಸಲು ಕಾರ್ಯಾರಂಭ ಮಾಡದಿದ್ದರೆ ಪ್ರತಿಭಟನೆ ಮಾಡುತ್ತೇವೆ. ಸ್ಮಾರಕದ ಅಭಿವೃದ್ಧಿಗೆ ಜಮೀನು ಕಳೆದುಕೊಳ್ಳುವ ರೈತರಿಗೆ ಸೂಕ್ತ ಪರಿಹಾರ ಕೊಡಬೇಕು. ಸೋಮೇಶ್ವರ ಸ್ವಾಮಿ ದೇಗುಲದ ಬಳಿ ಶಿಥಿಲವಾಗಿರುವ ಕೆಂಪೇಗೌಡ ಗೋಪುರವನ್ನು ಮೊದಲು ದುರಸ್ತಿ ಮಾಡಬೇಕು’ ಎಂದರು.

ರೈತ ಸಂಘದ ಕಾರ್ಯದರ್ಶಿ ಮಧುಗೌಡ, ಮಾಗಡಿ ಸೀಮೆಯ ರೈತಾಪಿವರ್ಗದವರ ಬದುಕನ್ನು ಹಸನು ಮಾಡಲು ಸರ್ಕಾರ ನೀರಾವರಿ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಕೈಗೆತ್ತಿಕೊಳ್ಳಬೇಕು ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !