ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ಅಧಿಕಾರಿಗಳ ತಪಾಸಣೆಗೆ ಸರದಿ ನಿಲ್ಲಬೇಕಿಲ್ಲ

ಹೊಸ ತಂತ್ರಜ್ಞಾನ ಅಳವಡಿಸಲು ಕೆಐಎ ಚಿಂತನೆ
Last Updated 14 ನವೆಂಬರ್ 2019, 22:02 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳ ತಪಾಸಣೆಗಾಗಿ ಪ್ರಯಾಣಿಕರು ನಿಮಿಷಗಟ್ಟಲೇ ಸರದಿಯಲ್ಲಿ ನಿಲ್ಲುವುದು ಸದ್ಯದಲ್ಲೇ ತಪ್ಪಲಿದೆ. ಬಯೋಮೆಟ್ರಿಕ್ ಆಧಾರಿತ ತಂತ್ರಜ್ಞಾನವೊಂದನ್ನು ಪರಿಚಯಿಸಲು ನಿಲ್ದಾಣದ ಆಡಳಿತ ಮಂಡಳಿ ಮುಂದಾಗಿದ್ದು, ಈ ಬಗ್ಗೆ ಯೋಜನೆಯೊಂದನ್ನು ಸಿದ್ಧಪಡಿಸುತ್ತಿದೆ.

‘ಪಾಸ್‌ಪೋರ್ಟ್‌ ಹೊಂದಿರುವ ಭಾರತೀಯ ಪ್ರಜೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಅಧಿಕಾರಿಗಳ ತಪಾಸಣೆಗಾಗಿ ಕಾಯುವಂತಾಗಿದೆ. ಇದಕ್ಕೆ ಪರಿಹಾರ ಸೂಚಿಸಲು ಹೊಸ ತಂತ್ರಜ್ಞಾನ ಅಳವಡಿಸುವ ಸಂಬಂಧ ಚರ್ಚೆ ನಡೆದಿದ್ದು, ಸದ್ಯದಲ್ಲೇ ಆ ಸಂಬಂಧ ನಿರ್ಧಾರ ಪ್ರಕಟಿಸಲಾಗುವುದು’ ಎಂದು ನಿಲ್ದಾಣದ ಮೂಲಗಳು ತಿಳಿಸಿವೆ.

‘ಕೇಂದ್ರ ಸರ್ಕಾರದ ಡಿಜಿ– ಯಾತ್ರಾ ಯೋಜನೆಯಡಿ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಯೋಚಿಸಲಾಗಿದೆ. ಪ್ರಯಾಣಿಕರು ಆಧಾರ್ ಸಂಖ್ಯೆ ಹಾಗೂ ಬೆರಳಚ್ಚು ಮೂಲಕ ಒಂದು ಬಾರಿ ನೋಂದಣಿ ಮಾಡಿಕೊಂಡರೆ ನಂತರ ಯಾವುದೇ ತಪಾಸಣೆಗೆ ಒಳಗಾಗಬೇಕಾದ ಅಗತ್ಯವಿರುವುದಿಲ್ಲ. ನೇರವಾಗಿ ನಿಲ್ದಾಣದ ಒಳಗೆ ಹಾಗೂ ಹೊರಗೆ ಹೋಗಿ ಬರಬಹುದು’ ಎಂದು ಮೂಲಗಳು ಹೇಳಿವೆ.

‘ನಿಲ್ದಾಣ ಬಳಕೆ ಮಾಡುತ್ತಿರುವವರಲ್ಲಿ ಶೇ 80ರಷ್ಟು ಪ್ರಯಾಣಿಕರು ಭಾರತೀಯರು. ದೆಹಲಿ, ಮುಂಬೈ ಸೇರಿದಂತೆ ಹಲವು ನಗರಗಳಿಗೆ ಅವರೆಲ್ಲ ಪ್ರಯಾಣಿಸುತ್ತಿದ್ದಾರೆ. ಅವರಿಗೆ ಈ ತಂತ್ರಜ್ಞಾನ ಅನುಕೂಲವಾಗಲಿದೆ. ಈ ಬಗ್ಗೆ ವಲಸೆ ವಿಭಾಗದ ಅಧಿಕಾರಿಗಳ ಜೊತೆಯೂ ಮಾತುಕತೆ ನಡೆದಿದೆ’ ಎಂದು ತಿಳಿಸಿವೆ.

ಇತ್ತೀಚೆಗಷ್ಟೇ ನಿಲ್ದಾಣದಲ್ಲಿ ‘ಬಯೋಮೆಟ್ರಿಕ್ ಸೆಲ್ಫ್ ಬೋರ್ಡಿಂಗ್’ ವ್ಯವಸ್ಥೆಗೆ ಚಾಲನೆ ನೀಡಲಾಗಿದ್ದು, ಅದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತರಲಾಗಿರುವ ಈ ವ್ಯವಸ್ಥೆಯಿಂದಾಗಿ ಪ್ರಯಾಣಿಕರು ಬಹುಬೇಗನೇ ನಿಲ್ದಾಣದೊಳಗೆ ಪ್ರವೇಶಿಸುತ್ತಿದ್ದಾರೆ. ಅಷ್ಟಾದರೂ ವಲಸೆ ಅಧಿಕಾರಿಗಳ ತಪಾಸಣೆಗಾಗಿ ಸರದಿಯಲ್ಲಿ ನಿಲ್ಲುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT