ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ನಗರ ನಿರ್ಮಾತೃ ಕೆಂಪೇಗೌಡರ ಸ್ಮರಣೆ

ಕೋವಿಡ್ ಕಾರಣದಿಂದ ನಾಡಪ್ರಭುವಿನ ಜಯಂತ್ಯುತ್ಸವ ಸರಳ ಆಚರಣೆ: ಆಹಾರದ ಕಿಟ್‌ ವಿತರಣೆ
Last Updated 27 ಜೂನ್ 2021, 19:40 IST
ಅಕ್ಷರ ಗಾತ್ರ

ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವವನ್ನು ಕೋವಿಡ್‌ ಕಾರಣದಿಂದ ಈ ಬಾರಿ ಸರಳವಾಗಿ ಆಚರಿಸಲಾಯಿತು. ವಿವಿಧ ಸಂಘ–ಸಂಸ್ಥೆಗಳು, ರಾಜಕೀಯ ಪಕ್ಷಗಳು ಜನರಿಗೆ ಆಹಾರದ ಕಿಟ್‌ ವಿತರಿಸುವ ಮೂಲಕ ನಾಡದೊರೆಯ ಜನ್ಮದಿನವನ್ನುಅರ್ಥಪೂರ್ಣವಾಗಿ ಆಚರಿಸಿದವು.

ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗದಲ್ಲಿರುವ ಕೆಂಪೇಗೌಡರ ಪ್ರತಿಮೆ ಹಾಗೂ ಕೆಂಪೇಗೌಡರ ಸೊಸೆ ಮಹಾತ್ಯಾಗಿ ಲಕ್ಷ್ಮೀದೇವಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಮತ್ತು ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ನಾಡಪ್ರಭುವಿನ 512ನೇ ಜಯಂತ್ಯುತ್ಸವಕ್ಕೆ ಚಾಲನೆ ನೀಡಿದರು.

ನಗರ ನಿರ್ಮಾತೃವಾದ ಕೆಂಪೇಗೌಡರ ಜೀವನ ಮತ್ತು ಸಾಧನೆಗಳನ್ನು ಸ್ಮರಿಸಲಾಯಿತು. ಅವರು ನಗರದ ನಾಲ್ಕು ಕಡೆ ನಿರ್ಮಿಸಿದ್ದ ಗಡಿ ಗೋಪುರಗಳಿಗೆ ಪೂಜೆ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಲಾಯಿತು.

ಮುಂದಿನ ವರ್ಷ ಅನಾವರಣ:ನಗರದ ಮೇಖ್ರಿ ವೃತ್ತದ ಬಳಿ ಕೆಂಪೇಗೌಡರು ನಿರ್ಮಿಸಿದ್ದ ಉತ್ತರದ ಗಡಿ ಗೋಪುರದ ಬಳಿಯ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಉಪಮುಖ್ಯಮಂತ್ರಿ, ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ‘ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಾಣ ಆಗುತ್ತಿರುವ ಸೆಂಟ್ರಲ್‌ ಪಾರ್ಕ್‌ನಲ್ಲಿ 108 ಅಡಿ ಎತ್ತರದ ಪ್ರತಿಮೆ ಸ್ಥಾಪನೆ ಮಾಡುವ ಕಾರ್ಯ ಮುಂದಿನ ವರ್ಷಕ್ಕೆ ಮುಗಿದು ಲೋಕಾರ್ಪಣೆಯಾಗಲಿದೆ‘ ಎಂದರು.

‘ಇಡೀ ದೇಶದಲ್ಲೇ ಅತ್ಯುತ್ತಮ ನಗರವನ್ನು ಕಟ್ಟಿ ನಮಗಾಗಿ ಬಿಟ್ಟುಹೋಗಿದ್ದಾರೆ. ಅದರ ಸ್ಮಿತೆಗೆ ಧಕ್ಕೆ ಆಗದಂತೆ ನಗರವನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಲಾಗುವುದು’ ಎಂದು ಹೇಳಿದರು.

ಗಿಡ ನೆಟ್ಟು ಆಚರಣೆ:ಬೆಂಗಳೂರು ವಿಶ್ವವಿದ್ಯಾಲಯ ವತಿಯಿಂದ ಭಾನುವಾರ ಕೆಂಪೇಗೌಡರ ಜಯಂತ್ಯುತ್ಸವಕ್ಕೆ ಕುಲಪತಿ ಪ್ರೊ. ವೇಣುಗೋಪಾಲ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಕುಲಸಚಿವ (ಮೌಲ್ಯಮಾಪನ) ಪ್ರೊ. ದೇವರಾಜ್, ಕೆಂಪೇಗೌಡ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಶೇಖ್ ಮಸ್ತಾನ್ ಹಾಗೂ ವಿಶ್ವವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಕನಸು ನನಸಾಗಿಸಲು ಬದ್ಧ
ಕೆ.ಆರ್.ಪುರ:
‘ಕೆಂಪೇಗೌಡರು ಬೆಂಗಳೂರಿನ ಕುರಿತು ಹೊಂದಿದ್ದ ಕನಸುಗಳನ್ನು ಸಾಕಾರಗೊಳಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬದ್ಧವಾಗಿದ್ದು, ನಗರಕ್ಕೆ ಸೂಕ್ತ ಮೂಲಸೌಕರ್ಯಗಳನ್ನು ಸೃಷ್ಟಿಸಲು ಅಗತ್ಯ ಯೋಜನೆಗಳನ್ನು ಜಾರಿ ತರಲಿವೆ’ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು.

ಕೆ.ಆರ್. ಪುರದಲ್ಲಿ ಭಾನುವಾರ ಕೆಂಪೇಗೌಡ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ‘ಕೆಂಪೇಗೌಡರು ಆಗಲೇ ರೈತರು ಹಾಗೂ ಬಡವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದರು’ ಎಂದು ಸ್ಮರಿಸಿದರು.

ಕೆ.ಆರ್. ಪುರದ ವಿಧಾನಸಭಾ ಕ್ಷೇತ್ರದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ನೇತೃತ್ವದಲ್ಲಿ ಕೋವಿಡ್‌ ಸೋಂಕಿನಿಂದ ನಿಧನರಾದವರ ಕುಟುಂಬದವರಿಗೆ ₹1 ಲಕ್ಷ ಸಹಾಯಧನ ಹಾಗೂ ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ದಿನಸಿ ಕಿಟ್‌ಗಳನ್ನು ವಿತರಿಸಿದರು.

ಕೇಂದ್ರ ಸಚಿವ ಸದಾನಂದಗೌಡ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅರಣ್ಯ ಸಚಿವ ಅರವಿಂದ ಲಿಂಬಾವಳಿ, ಸಹಕಾರ ಸಚಿವ ಎಸ್‌. ಟಿ. ಸೋಮಶೇಖರ, ರಾಜ್ಯ ಮಹಿಳಾ ಬಿಜೆಪಿ ಅಧ್ಯಕ್ಷೆ ಗೀತಾ ವಿವೇಕಾನಂದ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT