ಭಾನುವಾರ, ಸೆಪ್ಟೆಂಬರ್ 26, 2021
21 °C

ಜ್ಞಾನಭಾರತಿಯಲ್ಲಿ ಕೆಂಪೇಗೌಡರ ಭವನ: ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಜ್ಞಾನಭಾರತಿಯ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಭವನ ನಿರ್ಮಾಣ ಹಾಗೂ ನಗರದ ಉಲ್ಲಾಳ ಜಂಕ್ಷನ್‌ನಲ್ಲಿ ಶೀಘ್ರವೇ ಸಬ್‌ ವೇ ನಿರ್ಮಿಸಲು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಕೈಗೊಳ್ಳಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಉನ್ನತ ಅಧಿಕಾರಿಗಳ ಜೊತೆಗೆ ಅವರು ಶುಕ್ರವಾರ ಸಭೆ ನಡೆಸಿದರು.

'ಜ್ಞಾನಭಾರತಿ ಆವರಣದಲ್ಲಿ ಕೆಂಪೇಗೌಡರ ಭವನ ನಿರ್ಮಾಣ ಯೋಜನೆಯನ್ನು ಕೈಗೊಳ್ಳಲಾಗಿದ್ದು, ಮೂರು ಎಕರೆ ಜಾಗ ನೀಡಲಾಗಿದೆ. ಇದರಲ್ಲಿ ಅಧ್ಯಯನ ಕೇಂದ್ರ, ಡಿಜಿಟಲ್‌ ಗ್ರಂಥಾಲಯ ಸೇರಿದಂತೆ ಕೆಂಪೇಗೌಡರಿಗೆ ಸಂಬಂಧಿಸಿದ ಎಲ್ಲ ಮಾಹಿತಿ ಲಭ್ಯವಾಗಲಿದೆ. ಈ ಯೋಜನೆಗೆ ಪಾಲಿಕೆ ಎರಡು ಹಂತಗಳಲ್ಲಿ ತಲಾ ₹50 ಕೋಟಿ ನೀಡಲಿದೆ. ಏಪ್ರಿಲ್‌ ವೇಳೆಗೆ ಕಾಮಗಾರಿ ಆರಂಭವಾಗಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ವಾಹನ ದಟ್ಟಣೆ ಕಿರಿಕಿರಿ ಎದುರಿಸುತ್ತಿರುವ ಉಲ್ಲಾಳ ಜಂಕ್ಷನ್‌ನಲ್ಲಿ ಸಬ್‌ವೇ ನಿರ್ಮಾಣ ಹಾಗೂ ಜಲಮಂಡಳಿಯು ತ್ಯಾಜ್ಯ ನಿರ್ವಹಣಾ ಘಟಕಗಳ (ಎಸ್‌ಟಿಪಿ) ನಿರ್ಮಾಣಕ್ಕೆ  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಜಾಗ ನೀಡುವ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಬೇಕು’ ಎಂದು ಕುಲಪತಿ ಕೆ.ಆರ್‌.ವೇಣುಗೋಪಾಲ್ ಅವರಿಗೆ ಸೂಚಿಸಿದರು. 

‘ಮಲ್ಲೇಶ್ವರ ವ್ಯಾಪ್ತಿಯಲ್ಲಿ ಜಲಮಂಡಳಿಯ ಕೊಳವೆಗಳು ಹಳೆಯದಾಗಿ ನೀರು ಸೋರಿಕೆಯಾಗುತ್ತಿದ್ದು, ಇವುಗಳನ್ನು ತೆರವುಗೊಳಿಸಿ ಹೊಸ ಕೊಳವೆಗಳನ್ನು ಅಳವಡಿಸುವ ಯೋಜನೆಗೆ ₹70 ಕೋಟಿ  ವೆಚ್ಚ ಆಗಬಹುದು. ನಗರೋತ್ಥಾನ ಯೋಜನೆಯಡಿ ₹20 ಕೋಟಿ ಹಣವನ್ನು ಪಾಲಿಕೆಯಿಂದ ಕೊಡಿಸಲಾಗುವುದು’ ಎಂದು ಅಶ್ವತ್ಥನಾರಾಯಣ ಹೇಳಿದರು.

‘ಸ್ಯಾಂಕಿ ಕೆರೆಯ ಟ್ಯಾಂಕ್‌ಬಂಡ್‌ ರಸ್ತೆಯನ್ನು ವಿಸ್ತರಣೆ ಮಾಡುವುದಕ್ಕೆ ನ್ಯಾಯಾಲಯದಲ್ಲಿದ್ದ ತಡೆಯಾಜ್ಞೆ ನಿವಾರಣೆಯಾಗಿದ್ದು, ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಮೇಕ್ರಿ ವೃತ್ತದಿಂದ ಬಿಡಿಎ ಜಂಕ್ಷನ್‌ವರೆಗಿನ ಬಳ್ಳಾರಿ ರಸ್ತೆ ವಿಸ್ತರಣೆಯಿಂದ ದಟ್ಟಣೆ ತಗ್ಗಲಿದೆ. ಮುಂದಿನ ಆರು ತಿಂಗಳಿನಲ್ಲಿ ನಗರದಲ್ಲಿ ಒಂದು ಲಕ್ಷ ಬೀದಿದೀಪಗಳನ್ನು ಅಳವಡಿಸಲಾಗುವುದು. ಮಲ್ಲೇಶ್ವರದಲ್ಲೂ ಈ ಯೋಜನೆ ಜಾರಿಯಾಗಲಿದೆ’ ಎಂದು ಹೇಳಿದರು.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುತ್ತಿದ್ದು, ನೋಟಿಸ್ ನೀಡುವುದಾಗಿ ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು