ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಮೆಟ್ರೊ ರೀಚ್‌ 2: ಏ.15ಕ್ಕೆ ಕೆಂಗೇರಿ ಮಾರ್ಗ ಪರೀಕ್ಷಾರ್ಥ ಸಂಚಾರ ?

ನಮ್ಮ ಮೆಟ್ರೊ ರೀಚ್‌ 2: ಜೂನ್‌ ವೇಳೆಗೆ ವಾಣಿಜ್ಯ ಸಂಚಾರ ಸಾಧ್ಯತೆ
Last Updated 16 ಮಾರ್ಚ್ 2021, 19:38 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ‘ ಎರಡನೇ ಹಂತದಲ್ಲಿನ ಮೈಸೂರು ರಸ್ತೆ–ಕೆಂಗೇರಿ ವಿಸ್ತರಿತ ಮಾರ್ಗದಲ್ಲಿ (ರೀಚ್‌ 2) ಏಪ್ರಿಲ್‌ 15ರಿಂದ ಪರೀಕ್ಷಾರ್ಥ ಸಂಚಾರ ನಡೆಯಲಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಸಿದ್ಧತೆಯ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ಮಂಗಳವಾರ ‘ಚಾರ್ಜಿಂಗ್‌’ ವಾಹನದ (ರೈಲುಗಳಿಗೆ ವಿದ್ಯುತ್‌ ಪೂರೈಸುವ ವಾಹನ) ಪರೀಕ್ಷೆ ನಡೆಸಿದರು. ಈ ಮಾರ್ಗದಲ್ಲಿ ಹಳಿ ಜೋಡಿಸುವ ಕಾರ್ಯ ಫೆಬ್ರುವರಿಯಲ್ಲಿಯೇ ಮುಗಿದಿದೆ.

‘ಈ ಮಾರ್ಗದಲ್ಲಿ ಬರುವ ಆರು ನಿಲ್ದಾಣಗಳಲ್ಲಿ ಏಪ್ರಿಲ್‌ ಮಧ್ಯಭಾಗದಿಂದ ಪರೀಕ್ಷಾರ್ಥ ಸಂಚಾರ ನಡೆಸಲಾಗುವುದು. ಮೇ ತಿಂಗಳಲ್ಲಿ ಮೆಟ್ರೊ ರೈಲು ಸುರಕ್ಷತಾ ಆಯುಕ್ತರಿಗೆ (ಸಿಎಂಆರ್‌ಎಸ್‌) ವಾಣಿಜ್ಯ ಸಂಚಾರಕ್ಕೆ ಅನುಮತಿ ಕೋರಿ ಪತ್ರ ಬರೆಯಲಾಗುವುದು. ಜೂನ್‌ ವೇಳೆಗೆ ವಾಣಿಜ್ಯ ಸಂಚಾರಕ್ಕೆ ಹಸಿರು ನಿಶಾನೆ ದೊರೆಯುವ ಸಾಧ್ಯತೆ ಇದೆ’ ಎಂದು ಅಜಯ್‌ ಸೇಠ್‌ ಹೇಳಿದರು.

ಈ ಮಾರ್ಗದಲ್ಲಿ ಬರುವ ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಜ್ಞಾನಭಾರತಿ, ಪಟ್ಟಣಗೆರೆ, ಕೆಂಗೇರಿ ಬಸ್‌ ಟರ್ಮಿನಲ್‌ ಮತ್ತು ಕೆಂಗೇರಿ ಮೆಟ್ರೊ ನಿಲ್ದಾಣಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ.

‘ನಿಲ್ದಾಣಗಳ ಒಳಾಂಗಣ ಕಾಮಗಾರಿ ಮತ್ತು ಪ್ರಯಾಣಿಕರಿಗೆ ಸೌಲಭ್ಯ ಒದಗಿಸುವ ಕಾರ್ಯಗಳು ಈ ತಿಂಗಳಲ್ಲಿ ಪೂರ್ಣಗೊಳ್ಳಲಿವೆ. ಪರೀಕ್ಷಾರ್ಥ ಸಂಚಾರದ ಜೊತೆ ಜೊತೆಗೆ ಉಳಿದ ಕಾಮಗಾರಿಗಳು ನಡೆಯಲಿವೆ’ ಎಂದು ನಿಗಮದ ಅಧಿಕಾರಿಯೊಬ್ಬರು ಹೇಳಿದರು.

‘ಚಳ್ಳಘಟ್ಟದಲ್ಲಿ ಡಿಪೊ ನಿರ್ಮಾಣ ಕಾರ್ಯ ಇನ್ನೂ ಒಂದು ವರ್ಷ ವಿಳಂಬವಾಗಬಹುದು. ಭೂಸ್ವಾಧೀನ ಬಾಕಿ ಇರುವ ಕಾರಣ ಇದು ತಡವಾಗಲಿದೆ’ ಎಂದೂ ಅವರು ಹೇಳಿದರು.

ಚಳ್ಳಘಟ್ಟದವರೆಗೆ ಮಾರ್ಗ ನಿರ್ಮಾಣಕ್ಕೆ ಬಿಡಿಎದಿಂದ 12 ಎಕರೆ ಜಾಗದ ಅವಶ್ಯಕತೆ ಇದೆ. ಪ್ರಾಧಿಕಾರವು ಮಾರುಕಟ್ಟೆ ಬೆಲೆ ಕೇಳುತ್ತಿರುವುದರಿಂದ ನಿಧಾನವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.

‘ಮಾರ್ಚ್‌ ಕೊನೆಯ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಮೆಟ್ರೊ ರೈಲು ಸಂಚಾರ ಆರಂಭವಾಗಲಿದೆ. ಫೆಬ್ರುವರಿಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಯುವ ಸಾಧ್ಯತೆ ಇದೆ’ ಎಂದು ನಿಗಮ ಈ ಮೊದಲು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT