ಭಾನುವಾರ, ಅಕ್ಟೋಬರ್ 25, 2020
28 °C

ಮುಂಜಾಗ್ರತೆಯಿಂದ ಕೋವಿಡ್ ನಿಯಂತ್ರಣ: ಕೇರಳ ಆರೋಗ್ಯ ಸಚಿವೆ ಶೈಲಜಾ ಟೀಚರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಆದ್ಯತೆ ನೀಡಿದ ಪರಿಣಾಮ ಹಾಗೂ ಸಾರ್ವಜನಿಕರ ಸಹಕಾರದಿಂದ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಯಿತು’ ಎಂದು ಕೇರಳದ ಆರೋಗ್ಯ ಸಚಿವೆ ಶೈಲಜಾ ಟೀಚರ್ ತಿಳಿಸಿದರು. 

ಜನಶಕ್ತಿ ವೆಬ್‌ ಮಿಡಿಯಾ ಮಂಗಳವಾರ ಆಯೋಜಿಸಿದ್ದ ‘ಕೊರೊನಾ ಕಾಲದಲ್ಲಿ ಮತ್ತು ನಂತರ’ ವೆಬಿನಾರ್ ಸರಣಿಯಲ್ಲಿ ‘ಸಾರ್ವಜನಿಕ ಆರೋಗ್ಯ ವ್ಯವಸ್ಥೆ’ ಬಗ್ಗೆ ಮಾತನಾಡಿದರು. 

‘ಚೀನಾದ ವುಹಾನ್‌ ನಗರದಲ್ಲಿ ಕಾಣಿಸಿಕೊಂಡ ವೈರಾಣು ವಿವಿಧೆಡೆ ಹರಡಲು ಪ್ರಾರಂಭಿಸಿದ ಕೂಡಲೇ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಯಿತು. ದೇಶದಲ್ಲಿಯೇ ಮೊದಲ ಬಾರಿಗೆ ವೈರಾಣು ನಮ್ಮಲ್ಲಿ ಕಾಣಿಸಿಕೊಂಡಿತು. ಬಳಿಕ ಸೋಂಕು ಶಂಕಿತರ ಪತ್ತೆ ಕಾರ್ಯ, ಕೋವಿಡ್‌ ಪೀಡಿತರ ಸಂಪರ್ಕಿತರನ್ನು
ಗುರುತಿಸುವುದು, ಕ್ವಾರಂಟೈನ್‌ ವ್ಯವಸ್ಥೆ, ಪರೀಕ್ಷೆಗಳ ಸಂಖ್ಯೆ ಹೆಚ್ಚಳ ಸೇರಿದಂತೆ ವಿವಿಧ ಉಪ ಕ್ರಮಗಳನ್ನು ಕೈಗೊಳ್ಳಲಾಯಿತು. ಈ ಹಿಂದೆ ನಿಫಾ ವೈರಾಣುವನ್ನು ಯಶಸ್ವಿಯಾಗಿ ಎದುರಿಸಿದ್ದೆವು. ಅದರ ಅನುಭವ ಕೂಡ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ನೆರವಾಯಿತು’ ಎಂದರು. 

‘ರಾಜ್ಯದ ಎಲ್ಲ ವಿಮಾನ ನಿಲ್ದಾಣದಲ್ಲಿ ಪರಿಣಾಮಕಾರಿಯಾಗಿ ತಪಾಸಣೆ ನಡೆಸಲಾಯಿತು. ಲಾಕ್‌ಡೌನ್‌ ಅನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಯಿತು. ‘ಬ್ರೇಕ್‌ ದಿ ಚೈನ್‌’ ಅಭಿಯಾನದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಪರಸ್ಪರ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವಂತೆ ಮನವರಿಕೆ ಮಾಡಿಸಲಾಯಿತು. ಸಾಮಾಜಿಕ ಮತ್ತು ಆರ್ಥಿಕವಾಗಿ ಕೂಡ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು. ವಿರೋಧ ಪಕ್ಷದವರು ಪ್ರತಿಭಟನೆ ಮಾಡಿದ ಪರಿಣಾಮ ಈ ನಡುವೆ ಪ್ರಕರಣಗಳ ಸಂಖ್ಯೆಯಲ್ಲಿ ಸ್ವಲ್ಪ ಏರಿಕೆ ಕಂಡಿತು. ಕೊರೊನಾ ಸೋಂಕಿತರಿಗೆ 85 ಸಾವಿರಕ್ಕೂ ಅಧಿಕ ಹಾಸಿಗೆಗಳನ್ನು ಮೀಸಲಿಡಲಾಗಿದೆ’ ಎಂದರು. 

ಮರಣ ಪ್ರಮಾಣದರ ಶೇ 0.5: ಕೇರಳದ ಕೋವಿಡ್‌ ಪರಿಣಿತರ ಸಮಿತಿಯ ಅಧ್ಯಕ್ಷ ಪ್ರೊ.ಬಿ. ಇಕ್ಬಾಲ್, ‘ಕೋವಿಡ್‌ ಹೊಸ ಕಾಯಿಲೆ ಆಗಿರುವುದರಿಂದ ಪ್ರಾರಂಭಿಕ ದಿನಗಳಲ್ಲಿ ಇದನ್ನು ಯಾವ ರೀತಿ ಎದುರಿಸಬೇಕೆಂಬ ಗೊಂದಲ
ಗಳು ಇದ್ದವು. ಆದರೆ, ಸೋಂಕು ಕಾಣಿಸಿಕೊಂಡ ಮೊದಲ ದಿನದಿಂದಲೇ ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳಲಾಯಿತು. ನಮ್ಮ ರಾಜ್ಯದಲ್ಲಿ ಶೇ 50ರಷ್ಟು ಮಂದಿ 60 ವರ್ಷ ಮೇಲ್ಪಟ್ಟವರೇ ಇದ್ದಾರೆ. ಹೀಗಾಗಿ ಮರಣ ಪ್ರಕರಣಗಳನ್ನು ತಡೆಯುವ ಸವಾಲು ಇತ್ತು. ರಿವರ್ಸ್ ಕ್ವಾರಂಟೈನ್‌ ಕೂಡ ಪರಿಣಾಮಕಾರಿಯಾಗಿ ಜಾರಿ ಮಾಡಲಾಯಿತು. ಇದರಿಂದಾಗಿ ಮರಣ ಪ್ರಮಾಣ ದರ ಶೇ 0.5 ರಷ್ಟು ಮಾತ್ರವಿದೆ’ ಎಂದರು. 

‘ದೇಶಕ್ಕೇ ಕೇರಳ ಮಧುಮೇಹದ ರಾಜಧಾನಿಯಾಗಿದೆ. ಶೇ 35ರಷ್ಟು ಮಂದಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಅದೇ ರೀತಿ, ಹಲವರು ಕೋವಿಡೇತರ ಕಾಯಿಲೆಗಳನ್ನು ಎದುರಿಸುತ್ತಿದ್ದಾರೆ. ಆರೋಗ್ಯ ಕ್ಷೇತ್ರವನ್ನು ತಳಮಟ್ಟದಿಂದಲೇ ಸದೃಢಗೊಳಿಸಿರುವ ಕಾರಣ ಕೊರೊನಾ ಸೋಂಕಿನಿಂದ ರಕ್ಷಣೆ ಮಾಡಲು ಸಾಧ್ಯವಾಯಿತು’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು