ಗುರುವಾರ , ಜನವರಿ 23, 2020
26 °C
ಕಲಂ 144ರ ಅನ್ವಯ ನಿಷೇಧಾಜ್ಞೆ ಹೇರಿಕೆ ಪ್ರಶ್ನಿಸಿದ ಪಿಐಎಲ್

ಸಮಾಜಘಾತುಕ ಶಕ್ತಿಗಳಿಂದ ಗಲಭೆ:ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ಕಟಿಬದ್ಧವಾಗಿದೆ. ಆದರೆ, ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಗುರುವಾರ (ಡಿ.19) ನಡೆದ ಪ್ರತಿಭಟನೆಯಲ್ಲಿ ಕೇರಳದ ಸಮಾಜಘಾತುಕ ಶಕ್ತಿಗಳು ನುಸುಳಿ ಗಲಭೆ ಉಂಟು ಮಾಡಿವೆ. ಗಲಭೆಯಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವುದು ಅತ್ಯಂತ ದುರದೃಷ್ಟಕರ ಸಂಗತಿ’ ಎಂದು ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಹೈಕೋರ್ಟ್‌ಗೆ ತಿಳಿಸಿದರು.

ಪೌರತ್ವ (ತಿದ್ದುಪಡಿ) ಕಾಯ್ದೆ ಪ್ರತಿಭಟನೆ ನಡೆಸುವುದಕ್ಕೆ ನೀಡಿದ್ದ ಅನುಮತಿ ರದ್ದುಗೊಳಿಸಿರುವ ಪೊಲೀಸರ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು, ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್‌.
ಓಕಾ ಹಾಗೂ ಪ್ರದೀಪ್‌ ಸಿಂಗ್‌ ಯೆರೂರು ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪ್ರಭುಲಿಂಗ ನಾವದಗಿ, ‘ಬೆಂಗಳೂರಿನಲ್ಲಿ ಪ್ರತಿಭಟನೆ ನಡೆದರೆ ಸಮಾಜ ಘಾತುಕ ಶಕ್ತಿಗಳು ಅದರ ದುರ್ಲಾಭ ಪಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಹಾಗೂ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದಕಾರಣ ಅನುಮತಿ ಹಿಂಪಡೆಯಲಾಗಿದೆ. ಅಷ್ಟೇ ಅಲ್ಲ, ಕಾಯ್ದೆ ಬೆಂಬಲಿಸಿ ನಡೆಸಲು ಉದ್ದೇಶಿಸಿದ್ದ ರ್‍ಯಾಲಿಗೆ ನೀಡಲಾಗಿದ್ದ ಅನುಮತಿ ರದ್ದುಗೊಳಿಸಲಾಗಿದೆ’ ಎಂದು ತಿಳಿಸಿದರು.

‘ರಾಜ್ಯ ಸರ್ಕಾರ ಪ್ರಜೆಗಳ, ಹಕ್ಕುಗಳ ಸಂರಕ್ಷಕ. ಸಾರ್ವಜನಿಕರ ಸ್ವಾತಂತ್ರ್ಯದ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದೆ. ಹಾಗೆಂದೇ, ಪರಿಸ್ಥಿತಿ ಏರುಪೇರಾಗಿರುವುದನ್ನು ಕಂಡ ಮುಖ್ಯಮಂತ್ರಿಗಳು
ಗುರುವಾರ ಮಧ್ಯರಾತ್ರಿ 12 ಗಂಟೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಚರ್ಚೆ ನಡೆಸಿದ್ದಾರೆ. ಎಲ್ಲೂ ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಉಮ್ಮೀದಿನಲ್ಲಿ ಅಹೋರಾತ್ರಿ ಶ್ರಮಿಸುತ್ತಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾಜಿಕ ಸಂಘಟನೆಗಳು, ಪ್ರತಿಭಟನೆಗಳು ನಡೆಯಬಾರದು ಎಂದು ನಿರ್ಬಂಧಿಸಿದರೆ ಹೇಗೆ, ಟೌನ್‌ಹಾಲ್‌ ಮುಂದೆ ಪ್ರತಿಭಟನೆಯಲ್ಲಿ
ಪಾಲ್ಗೊಂಡಿದ್ದ ಇತಿಹಾಸಕಾರರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂಜಾಗ್ರತಾ ಕ್ರಮ ಏಕಪಕ್ಷೀಯವಾಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವಲ್ಲವೇ’ ಎಂದು ಪ್ರಶ್ನಿಸಿತು.

‘ಸರ್ಕಾರ ಸಕಾರಣವಿಲ್ಲದೆ ನಿಷೇಧಾಜ್ಞೆ ಜಾರಿಗೊಳಿಸಿದಂತೆ ಕಂಡು ಬರುತ್ತಿದೆ. ಹಾಗಾಗಿ ಈ ಬಗ್ಗೆ ವಿಸ್ತೃತ ವಿಚಾರಣೆ ನಡೆಸುವ ಅಗತ್ಯವಿದೆ, ನಾಳೆ ರಾತ್ರಿಗೆ ನಿಷೇಧಾಜ್ಞೆ ಜಾರಿ ಅವಧಿ ಮುಕ್ತಾಯವಾಗುತ್ತದೆ, ಒಂದು ವೇಳೆ ಮುಂದುವರಿಸಬೇಕಾದರೆ, ಸೂಕ್ತ ವರದಿ ಪಡೆದು ಕಾರಣವಿದ್ದರೆ ಜಾರಿಗೊಳಿಸಬಹುದು’ ಎಂದು ಸರ್ಕಾರಕ್ಕೆ ಸೂಚಿಸಿತು.

‘ಅರ್ಜಿದಾರರು ಕಾನೂನು ಪ್ರಕಾರ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಲು ಅನುಮತಿ ಕೋರಿ ಹೊಸ
ದಾಗಿ ಅರ್ಜಿಗಳನ್ನು ಸಲ್ಲಿಸಬೇಕು. ಈ ಅರ್ಜಿಗಳನ್ನು ಗೃಹ ಇಲಾಖೆ ಮೂರು ದಿನಗಳ ಒಳಗಾಗಿ ಪರಿಶೀಲಿಸಿ ವಿಲೇವಾರಿ ಮಾಡಬೇಕು. ಅಂತೆಯೇ ಇದೇ 18ರಂದು ಹೇರಲಾಗಿರುವ ನಿಷೇಧಾಜ್ಞೆ ಶನಿವಾರ (ಡಿ.21) ಸಂಜೆಯವರೆಗೂ ಅಬಾಧಿತವಾಗಿ ಮುಂದುವರಿಯಲಿದೆ’ ಎಂದು ನಿರ್ದೇಶಿಸಿ, ವಿಚಾರಣೆಯನ್ನು 2020ರ ಜನವರಿ 7ಕ್ಕೆ ಮುಂದೂಡಿದೆ. ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿದ ನ್ಯಾಯಪೀಠ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ.

ಸಿಆರ್‌ಪಿಸಿ–1973ರ ಕಲಂ 144ರ ಅಡಿಯಲ್ಲಿ ಬೆಂಗಳೂರು ನಗರದಾದ್ಯಂತ ಅನ್ವಯವಾಗುವಂತೆ
ಇದೇ 18ರಿಂದ ಹೇರಲಾಗಿರುವ ನಿಷೇಧಾಜ್ಞೆಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ‘ಪೊಲೀಸರ ಈ ಕ್ರಮ ಸಾಂವಿಧಾನಿಕವಾಗಿ ನಾಗರಿಕರಿಗೆ ಕೊಡಮಾಡಿದ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡಂತಾಗಿದೆ’ ಎಂದು ಆಕ್ಷೇಪಿಸಿದ್ದಾರೆ.‌‌

ರಾಜ್ಯಸಭಾ ಸದಸ್ಯ ಪ್ರೊ.ಎಂ.ವಿ.ರಾಜೀವ್‌ ಗೌಡ, ಶಾಸಕಿ ಸೌಮ್ಯಾ ರೆಡ್ಡಿ, ನಿವೃತ್ತ ಐಎಎಸ್‌ ಅಧಿಕಾರಿ ದಿವ್ಯಾ ಬಾಲಗೋಪಾಲ್‌, ಲಿಯೊ ಎಫ್. ಸಲ್ಡಾನ, ಕವಿತಾ ಲಂಕೇಶ್, ಎಂ.ಡಿ.ಪಲ್ಲವಿ ಮತ್ತು ಅಶ್ವಿನಿ ಓಬುಳೇಶ್‌ ಈ ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು