ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾ. ಸದಾಶಿವ ಆಯೋಗದ ವರದಿ ಯಥಾವತ್ ಜಾರಿಗೊಳಿಸಿ: ಕೆ.ಎಚ್‌. ಮುನಿಯಪ್ಪ

ಎಡಗೈ– ಬಲಗೈ ನಡುವೆ ಕಚ್ಚಾಟ ಇಲ್ಲ– ಕೆ.ಎಚ್‌. ಮುನಿಯಪ್ಪ, ಚಂದ್ರಪ್ಪ, ಧರ್ಮಸೇನಾ
Last Updated 31 ಆಗಸ್ಟ್ 2020, 7:52 IST
ಅಕ್ಷರ ಗಾತ್ರ

ಬೆಂಗಳೂರು: ‘ಒಳ ಮೀಸಲಾತಿ ಕಲ್ಪಿಸುವ ಕುರಿತಂತೆ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ನೀಡಿರುವ ವರದಿಯನ್ನು ಯಥಾವತ್ ಜಾರಿಗೊಳಿಸಬೇಕು’ ಎಂದು ಕಾಂಗ್ರೆಸ್‌ ನಾಯಕ, ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ ಆಗ್ರಹಿಸಿದರು.

ದಲಿತ ಸಮುದಾಯದ ನಾಯಕರ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಒಳ ಮೀಸಲಾತಿಯಿಂದ ಯಾವುದೇ ಸಮಸ್ಯೆ ಆಗುವುದಿಲ್ಲ. ಸದಾಶಿವ ಅವರು ವೈಜ್ಙಾನಿಕವಾಗಿಯೇ ವರದಿ ನೀಡಿದ್ದಾರೆ. ವರದಿ ಜಾರಿಯಾದರೂ ನಾವೆಲ್ಲ ಒಟ್ಟಾಗಿಯೇ ಇರುತ್ತೇವೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳಬೇಕು’ ಎಂದರು.

‘ಉಪ ಮುಖ್ಯಮಂತ್ರಿಯಾಗಿ ಗೋವಿಂದ ಕಾರಜೋಳ ಅವರೇ ಇದ್ದಾರೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಮನಸ್ಸು ಮಾಡಿ ಜಾರಿ ಮಾಡಬೇಕು’ ಎಂದೂ ಮುನಿಯಪ್ಪ ಒತ್ತಾಯಿಸಿದರು.

‘ದಲಿತರಲ್ಲಿ ಪ್ರಸ್ತುತ ಎಡಗೈ, ಬಲಗೈ, ಬೋವಿ, ಲಂಬಾಣಿ ಸಮುದಾಯಗಳಿವೆ. ಯಾವ ಸಮುದಾಯಗಳಿಗೂ ಅನ್ಯಾಯ ಆಗಬಾರದು. ಆ ರೀತಿ ಮೀಸಲಾತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಉಲ್ಲೇಖಿಸಿದೆ. ಒಳಮೀಸಲಾತಿ ಬಗ್ಗೆ ನ್ಯಾಯಮೂರ್ತಿ ಸದಾಶಿವ ಅವರ ಸವಿಸ್ತಾರವಾದ ವರದಿ ತಯಾರಿಸಿ ಸರ್ಕಾರಕ್ಕೆ ನೀಡಿದ್ದಾರೆ’ ಎಂದರು.

‘ಪ್ರಸ್ತುತ ಸರಿಯಾದ ಪ್ರಮಾಣದಲ್ಲಿ ಮೀಸಲಾತಿ ಸಿಗುತ್ತಿಲ್ಲ. ಈ ವರದಿ ಜಾರಿಯಾದರೆ ಮೀಸಲಾತಿಗೆ ನ್ಯಾಯ ಸಿಗಲಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ವರದಿ ಜಾರಿಗೆ ಮುಂದಾಗಿದ್ದರು. ಆದರೆ, ಚುನಾವಣೆ ಎದುರಾದ ಕಾರಣ ಅಲ್ಲಿಗೇ ಕೈಬಿಟ್ಟಿದ್ದರು’ ಎಂದರು.

‘ವರದಿ ಜಾರಿ ವಿಷಯದಲ್ಲಿ ಈ ಹಿಂದೆ ಬಿಜೆಪಿಯವರು ಸರಿಯಾಗಿ ಬೆಂಬಲಿಸಲಿಲ್ಲ. ಈಗ ಸರ್ಕಾರವೂ ಬಿಜೆಪಿಯದ್ದೇ ಇದೆ. ಜೆಡಿಎಸ್, ಕಾಂಗ್ರೆಸ್ ಇದಕ್ಕೆ ವಿರೋಧಿಸಲ್ಲ. ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಕೊಳ್ಳಬೇಕು. ನಂತರ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಬೇಕು’ ಎಂದೂ ಮುನಿಯಪ್ಪ ಒತ್ತಾಯಿಸಿದರು.

‘ಯಡಿಯೂರಪ್ಪ ಅವರು ಬಸವಣ್ಣನವರ ಅನುಯಾಯಿ. ಬಸವಣ್ಣನವರ ಸಿದ್ಧಾಂತ ಅಳವಡಿಸಿಕೊಂಡವರು. ಹೀಗಾಗಿ, ಈ ವರದಿಯನ್ನು ಜಾರಿಗೆ ತರಬೇಕು. ಆಂಧ್ರದಲ್ಲಿ ಮಂದಕೃಷ್ಣ ಮಾದಿಗ ಒಳಮೀಸಲಾತಿ ಬಗ್ಗೆ ಹೋರಾಟ ಮಾಡಿದ್ದರು. ಕೇಂದ್ರ ಸರ್ಕಾರದ ಮುಂದೆಯೂ ಈ ಪ್ರಸ್ತಾಪವಿದೆ. ಈ ಕೆನೆಪದರ ಮೀಸಲಾತಿಯನ್ನು ಶೀಘ್ರ ಜಾರಿಗೊಳಿಸಬೇಕು’ ಎಂದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಮಾಡಿಸಿದ್ದರು. ಆ ವರದಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಜಾತಿ ಗಣತಿ ವರದಿಯನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಬೇಕು. ಇದರಿಂದ ಮೀಸಲಾತಿ ಬಗ್ಗೆಯೂ ತಿಳಿಯಲಿದೆ. ತುಳಿತಕ್ಕೆ ಒಳಗಾದವರಿಗೆ ವಿಶೇಷ ಸವಲತ್ತು ನೀಡಬಹುದು. ಎಸ್‌ಸಿ, ಎಸ್‌ಟಿ, ಒಬಿಸಿ ಯಾರೇ ಆಗಿರಲಿ ಅವರಿಗೂ ಮೀಸಲಾತಿ ಕೊಡಿ’ ಎಂದರು.

ವಿಧಾನಪರಿಷತ್ ಸದಸ್ಯ ಧರ್ಮಸೇನಾ ಮಾತನಾಡಿ, ‘ಹಿಂದೆ, ತಂದೆ ರಾಚಯ್ಯ ಇದರ ಬಗ್ಗೆ ಓಡಾಡಿದ್ದರು. ನಮ್ಮ ಜೊತೆ ಇನ್ನಷ್ಟು ಜಾತಿಗಳನ್ನು ಸೇರಿಸಲಾಯಿತು. ಅವರಿಗೂ ಸಮಾನ ಮೀಸಲಾತಿ ಕಲ್ಪಿಸಲಾಗಿದೆ. ನಾವು ತುಳಿತಕ್ಕೆ ಒಳಗಾದ ಸಮುದಾಯದವರು. ಸ್ಪೃಷ್ಯರನ್ನೂ ನಮ್ಮ ಗುಂಪಿಗೆ ಸೇರಿಸಲಾಗಿದೆ. ಇದರಿಂದ ನಮಗೆ ಮೀಸಲಾತಿಯಲ್ಲಿ ಸಮಸ್ಯೆಯಾಗಿದೆ’ ಎಂದರು.

‘ನಮ್ಮ ಮೀಸಲಾತಿಯಲ್ಲೇ ಸ್ಪೃಷ್ಯರಿಗೂ ಅವಕಾಶ ನೀಡಲಾಗಿದೆ. ಈಗ ಜನಸಂಖ್ಯೆಗೆ ಅನುಗುಣವಾಗಿ ನಮಗೆ ಒಳಮೀಸಲಾತಿ ನೀಡಬೇಕು. ಕೆನೆಪದರದಡಿ ಮೀಸಲಾತಿ ಪರಿಷ್ಕರಿಸಬೇಕು. ಸದಾಶಿವ ಆಯೋಗದ ವರದಿಯನ್ನು ಯಥಾವತ್ ಜಾರಿಗೊಳಿಸುವ ಮೂಲಕ ಹೆಚ್ಚು ತುಳಿತಕ್ಕೆ ಒಳಗಾದವರನ್ನು ಮೇಲಕ್ಕೆತ್ತಬೇಕು’ ಎಂದು ಒತ್ತಾಯಿಸಿದರು.

‘ಶಾಸಕರ ಭವನದಲ್ಲಿ ಸಚಿವ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ಬಲಗೈ, ಎಡಗೈ ಸಮುದಾಯದ ಪ್ರತಿನಿಧಿಗಳು ಸಭೆ ನಡೆಸಿದ್ದೆವು. ಬಳಿಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದೆವು. ವರದಿ ಜಾರಿಗೆ ಅಧಿವೇಶನದವರೆಗೆ ಕಾಯುವುದು ಬೇಡ. ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ, ಕೇಂದ್ರಕ್ಕೆ ಕಳುಹಿಸಿ’ ಎಂದೂ ಸರ್ಕಾರವನ್ನು ಆಗ್ರಹಿಸಿದರು.

‌ಮಾಜಿ ಸಂಸದ ಚಂದ್ರಪ್ಪ ಮಾತನಾಡಿ, ‘ಸದಾಶಿವ ಆಯೋಗ ವರದಿಯನ್ನು 2012ರಲ್ಲಿಯೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ವರದಿಯನ್ನು 24 ಗಂಟೆಯೊಳಗೆ ಜಾರಿಗೆ ತರುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದರು. ಈಗ ಬಿಜೆಪಿ ಸರ್ಕಾರವೇ ಅಸ್ತಿತ್ವದಲ್ಲಿದೆ. ಈಗಲಾದರೂ ವರದಿಯನ್ನು ಜಾರಿಗೊಳಿಸಲಿ. ನಾವು ಎಲ್ಲ ಅಸ್ಪೃಶ್ಯರೂ ಒಟ್ಟಾಗಿ ಒಪ್ಪಿಕೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT