ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣ ಸೇವೆ ಡಿಜಿಟಲೀಕರಣ

ಸೀಮನ್ಸ್ ಪಾರ್ಸಲ್ ಆ್ಯಂಡ್‌ ಏರ್‌ಪೋರ್ಟ್‌ ಲಾಜಿಸ್ಟಿಕ್ಸ್ ಜತೆ ಕೆಐಎ ಒಪ್ಪಂದ
Last Updated 14 ಸೆಪ್ಟೆಂಬರ್ 2018, 17:44 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಕೆಐಎ) ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ನಿಲ್ದಾಣದ ಆಡಳಿತ ಮಂಡಳಿಯು ಸೀಮನ್ಸ್ ಪಾರ್ಸಲ್ ಆ್ಯಂಡ್‌ ಏರ್‌ಪೋರ್ಟ್‌ ಲಾಜಿಸ್ಟಿಕ್ಸ್ (ಎಸ್‍ಪಿಪಿಎಎಲ್) ಕಂಪನಿ ಜೊತೆಯಲ್ಲಿ ಒಪ್ಪಂದ ಮಾಡಿಕೊಂಡಿದೆ.

ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಹಾಗೂ ವಿಮಾನಗಳ ಕಾರ್ಯಾಚರಣೆ ಸುಧಾರಿಸುವ ಉದ್ದೇಶಕ್ಕಾಗಿ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ನಿಲ್ದಾಣವನ್ನು ಡಿಜಿಟಲೀಕರಣ ಮಾಡುವ ಗುರಿಯನ್ನು ಕೆಐಎ ಹೊಂದಿದೆ. ಅದಕ್ಕೆ ಅಗತ್ಯವಾದ ತಂತ್ರಜ್ಞಾನ ಹಾಗೂ ದತ್ತಾಂಶಗಳ ಸಂಗ್ರಹ ವ್ಯವಸ್ಥೆ ರೂಪಿಸಲು ಎಸ್‍ಪಿಪಿಎಎಲ್ ನೆರವಾಗಲಿದೆ. ಜೊತೆಗೆ ‘ಸೀಮನ್ಸ್ ಮೈಂಡ್ ಸ್ಪಿಯರ್‘ ಹಾಗೂ ‘ಓಪನ್ ಕ್ಲೌಡ್‌‘ ಆಧಾರಿತ ವ್ಯವಸ್ಥೆ ಮೂಲಕ ನಿಲ್ದಾಣದ ಪ್ರಕ್ರಿಯೆಗಳ ಸರಳೀಕರಣ ಮಾಡಲಾಗುತ್ತಿದೆ.

‘ನಿಲ್ದಾಣದ ವ್ಯವಸ್ಥೆಗೆ ತಕ್ಕಂತೆ ಡಿಜಿಟಲ್ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಯಾವ್ಯಾವ ಪ್ರಕ್ರಿಯೆಗಳನ್ನು ಡಿಜಿಟಲೀಕರಣ ಮಾಡಬೇಕು ಎಂಬುದನ್ನು ಸದ್ಯದಲ್ಲೇ ನಿರ್ಧರಿಸಲಿದ್ದೇವೆ. ಬಳಿಕವೇ ಆ ಪ್ರಕ್ರಿಯೆಗಳನ್ನು ಪ್ರಯಾಣಿಕರು ಆನ್‌ಲೈನ್‌ ಮೂಲಕ ಪಡೆಯಬಹುದಾಗಿದೆ’ ಎಂದು ನಿಲ್ದಾಣದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರಿ ಮಾರರ್ ತಿಳಿಸಿದರು.

‘ಭವಿಷ್ಯದಲ್ಲಿ ನಿಲ್ದಾಣವನ್ನು ಪ್ರಯಾಣಿಕ ಸ್ನೇಹಿಯನ್ನಾಗಿಸಲು ಒಪ್ಪಂದ ನೆರವಾಗಲಿದೆ. ಹೂಡಿಕೆದಾರರು ಮತ್ತು ತಂತ್ರಜ್ಞಾನ ಪಾಲುದಾರರಾಗಿ ಸೀಮನ್ಸ್ ಕಾರ್ಯನಿರ್ವಹಿಸಲಿದೆ. ನಿಲ್ದಾಣದ ದತ್ತಾಂಶವನ್ನು ಏಕರೂಪದಲ್ಲಿ ಭದ್ರವಾಗಿ ಶೇಖರಿಸಿಡಲು ಅನುಕೂಲವಾಗಿದೆ’ ಎಂದರು.

ಸೀಮನ್ಸ್ ಸಿಇಒ ಮೈಕೆಲ್ ರೀಶ್ಲೆ, ‘ಅತ್ಯಾಧುನಿಕ ದತ್ತಾಂಶ ವಿಶ್ಲೇಷಣೆ ಮತ್ತು ಕೃತಕ ಬುದ್ಧಿಮತ್ತೆ ರೂಪಿಸುವಲ್ಲಿ ನಿಲ್ದಾಣದ ಆಡಳಿತ ಮಂಡಳಿಗೆ ನೆರವಾಗಲಿದ್ದೇವೆ. ನಮ್ಮ ಬಳಿ 900ಕ್ಕೂ ಹೆಚ್ಚು ಸಾಫ್ಟ್‌ವೇರ್‌ ಎಂಜಿನಿಯರ್, ದತ್ತಾಂಶ ವಿಶ್ಲೇಷಕರು ಇದ್ದಾರೆ. ಅವರೆಲ್ಲ ನಿಲ್ದಾಣಕ್ಕೆ ಅಗತ್ಯವಾದ ಡಿಜಿಟಲ್ ಪರಿಹಾರಗಳನ್ನು ಅಭಿವೃದ್ಧಿಪಡಿಸಲಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT