ಬುಧವಾರ, ಜೂನ್ 29, 2022
24 °C

ಭೂಮಂಜೂರಾತಿ ವಿಳಂಬ: ಬಂಡವಾಳ ಹೂಡಿಕೆಗೆ ಹಿಂದೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್ ಎರಡನೇ ಅಲೆಯ ಕಾರಣ ಒಡ್ಡಿ ಭೂಮಂಜೂರಾತಿಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಿಳಂಬ ಮಾಡಿದ್ದು, ಯುದ್ಧ ವಿಮಾನಗಳ ಬಿಡಿಭಾಗ ಉತ್ಪಾದನಾ ಉದ್ದಿಮೆಯು ರಾಜ್ಯದಿಂದಲೇ ಕೈತಪ್ಪುವ ಆತಂಕ ಎದುರಾಗಿದೆ.

ಎಡಿಡಿ ಎಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಇಸಿಪಿಎಲ್) ರಕ್ಷಣಾ ಕ್ಷೇತ್ರಗಳಿಗೆ ಅತ್ಯುನ್ನತ ದರ್ಜೆಯ ಮೆಟಲ್ ಕಟಿಂಗ್ ಟೂಲ್ಸ್ ಪೂರೈಕೆ ಮಾಡುತ್ತಿದೆ. ಇದು ಜರ್ಮನಿಯ ಜಿಎಂಬಿಎಚ್‌ನ ಅಂಗಸಂಸ್ಥೆಯಾಗಿದ್ದು, ತನ್ನ ಉದ್ಯಮವನ್ನು ಬೆಂಗಳೂರಿನಲ್ಲಿ ವಿಸ್ತರಿಸಲು ಮುಂದೆ ಬಂದಿದೆ.

‘ಇದಕ್ಕೆ ಜಮೀನು ಕೋರಿ ಮೂರು ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದೆವು. ಕಚೇರಿಯಿಂದ ಕಚೇರಿಗೆ ಅಲೆದಾಡಿದ ಬಳಿಕ ತುಮಕೂರಿನ ಮಷೀನ್ ಟೂಲ್ ಪಾರ್ಕ್‌ನಲ್ಲಿ ಭೂಮಿ ಮಂಜೂರು ಮಾಡುವ ಭರವಸೆಯನ್ನು ಕೆಐಎಡಿಬಿ ನೀಡಿತ್ತು. ಈಗ ಕೋವಿಡ್‌ ಎರಡನೇ ಅಲೆಯಲ್ಲಿ ಸಿಬ್ಬಂದಿ ಕೊರತೆ ಕಾರಣ ನೀಡಿ ಭೂಮಿ ಮಂಜೂರಾತಿಗೆ ವಿಳಂಬ ಮಾಡಲಾಗುತ್ತಿದೆ. ಉದ್ಯಮ ಆರಂಭಿಸುವ ಕನಸು ಮತ್ತೊಮ್ಮೆ ಮಸುಕಾಗಿದೆ’ ಎಂದು ಎಇಐಪಿಎಲ್ ನಿರ್ದೇಶಕ ಎಲ್‌.ಗಿರೀಶ್ ಹೇಳಿದರು.

‘ಅಗತ್ಯ ಭೂಮಿ ಮಂಜೂರು ಮಾಡುವುದಾಗಿ ಕರ್ನಾಟಕ ಉದ್ಯೋಗ ಮಿತ್ರದಿಂದ ಸಂದೇಶ ಬಂದಿತ್ತು. ಅದಕ್ಕೆ ಪೂರಕವಾಗಿ ಹಣ ಪಾವತಿ ಮಾಡುವಂತೆ ಸೂಚನೆ ಬಂದಿತ್ತು. ಅದರಂತೆ ಜಮೀನಿನ ದರದ ಶೇ 30ರಷ್ಟು ಪಾವತಿಸಿದ್ದೇನೆ. ಆದರೆ, ಜಾಗದ ಮಂಜೂರಾತಿ ಮಾತ್ರ ಆಗಿಲ್ಲ’ ಎಂದು ಹೇಳಿದರು.

‘ಎಇಐಪಿಎಲ್‌ನ ಮಾತೃ ಸಂಸ್ಥೆಯಾದ ಜರ್ಮನ್ ಎಡಿಡಿ ಎಂಜಿನಿಯರಿಂಗ್ ಜಿಎಂಬಿಎಚ್ ಕಂಪನಿಯು ಈ ಯೋಜನೆಗಾಗಿ ಬಂಡವಾಳ ತೊಡಗಿಸಲು ಆಸಕ್ತಿ ಹೊಂದಿತ್ತು. ಭೂಮಿ ಮಂಜೂರಾತಿ ವಿಳಂಬವಾಗುತ್ತಿರುವ ಕಾರಣ ಹೂಡಿಕೆಯಿಂದ ಹಿಂದೆ ಸರಿಯಲು ಅದು ಆಲೋಚಿಸುತ್ತಿದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.

‘ಈ ಉದ್ದಿಮೆ ಆರಂಭವಾದರೆ ಕನಿಷ್ಠ 500 ಜನರಿಗೆ ಉದ್ಯೋಗ ದೊರಕುತ್ತಿತ್ತು. ಕೋವಿಡ್ ಸೃಷ್ಟಿಸುತ್ತಿರುವ ಅವಾಂತರಗಳಿಂದ ಹೂಡಿಕೆದಾರರೂ ಹಿಂದೇಟು ಹಾಕುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು