ಶನಿವಾರ, ಜೂನ್ 25, 2022
24 °C

ಎಡಿಡಿಗೆ ಕೆಐಎಡಿಬಿ ಭೂಮಿ ಮಂಜೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಯುದ್ಧ ವಿಮಾನಗಳಿಗೆ ಮತ್ತು ಇತರೆ ರಕ್ಷಣಾ ಕ್ಷೇತ್ರಕ್ಕೆ ಬೇಕಾದ ಕಟ್ಟಿಂಗ್ ಟೂಲ್ಸ್ ಉತ್ಪಾದನೆಗೆ ಸಂಬಂಧಿಸಿದಂತೆ ಘಟಕ ಸ್ಥಾಪಿಸಲು ಎಡಿಡಿ ಎಂಜಿನಿಯರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ತುಮಕೂರು ಮಷಿನ್ ಟೂಲ್ಸ್ ಪಾರ್ಕ್‌ನಲ್ಲಿ ಕೊನೆಗೂ ಭೂಮಿ ಲಭಿಸಿದೆ.

ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) ಜಾಗ ಮಂಜೂರು ಮಾಡಿದ್ದು, ಇದಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಕೆಐಎಡಿಬಿ ಅಧಿಕಾರಿಗಳು ಎಡಿಡಿ ಎಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಇಐಪಿಎಲ್) ನಿರ್ದೇಶಕ ಗಿರೀಶ್ ಲಿಂಗಣ್ಣ ಅವರಿಗೆ ಹಸ್ತಾಂತರಿಸಿದರು.

‘ಸರ್ಕಾರದಿಂದ ಭೂಮಿಯನ್ನು ಪಡೆದುಕೊಳ್ಳಲು ಈ ಕಂಪನಿ ಕಳೆದ ಎರಡು ವರ್ಷಗಳಿಂದ ಹರಸಾಹಸಪಟ್ಟಿತ್ತು. ಮೊದಲಿಗೆ ನೆಲಮಂಗಲ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ನೀಡುವಂತೆ ಕೆಎಸ್ಎಸ್ಐಡಿಸಿಗೆ ಮನವಿ ಮಾಡಿತ್ತು. ಆದರೆ, ಕೆಎಸ್ಎಸ್ಐಡಿಸಿ ಈ ಮನವಿಗೆ ಎರಡು ವರ್ಷಗಳಿಂದ ಸ್ಪಂದಿಸಲೇ ಇಲ್ಲ. ಭೂಮಿಗಾಗಿ ಕೆಐಎಡಿಬಿಗೆ ಅರ್ಜಿ ಸಲ್ಲಿಸುವಂತೆ ರಾಜ್ಯ ಸರ್ಕಾರದ ಅಧಿಕಾರಿಗಳು ಸಲಹೆ ಮಾಡಿದ್ದರು. ಈಗ ಭೂಮಿ ಮಂಜೂರಾಗಿದೆ’ ಎಂದು ಗಿರೀಶ್ ಲಿಂಗಣ್ಣ ತಿಳಿಸಿದರು.‌

ಕಂಪನಿಯು ಎಚ್ಎಎಲ್, ಬ್ರಹ್ಮೋಸ್ ಮತ್ತು ರಕ್ಷಣಾ ಕ್ಷೇತ್ರದ ಮತ್ತಿತರೆ ವಿಭಾಗಗಳಿಗೆ ಬಿಡಿಭಾಗಗಳ ಪೂರೈಸಲು ಉತ್ಪಾದನಾ ಘಟಕ ಸ್ಥಾಪನೆ ಮಾಡಲು ಮುಂದಾಗಿದೆ. ಇದಕ್ಕಾಗಿ ದೇವನಹಳ್ಳಿ ಏರೋಸ್ಪೇಸ್ ಪಾರ್ಕ್‌ನಲ್ಲಿ ಭೂಮಿ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕಂಪನಿಯು ಈಗಾಗಲೇ ಏರೋ ಇಂಡಿಯಾ 2021ರ ವೇಳೆಯಲ್ಲಿ ರಾಜ್ಯ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

‘ಎಡಿಡಿ ಎಂಜಿನಿಯರಿಂಗ್‌ನ (ಇಂಡಿಯಾ) ಮಾತೃ ಸಂಸ್ಥೆಯಾಗಿರುವ ಎಡಿಡಿ ಎಂಜಿನಿಯರಿಂಗ್ ಜಿಎಂಬಿಎಚ್ ಕಂ‍ಪನಿಯು ಅರಬ್ ರಾಷ್ಟ್ರದ (ಯುಎಇ) ರಕ್ಷಣಾ ಉದ್ಯಮವಾದ ಎಡ್ಜ್‌ ಗ್ರೂಪ್‌ ಪಿಜೆಎಸ್‌ಸಿ ಜತೆ ಒಪ್ಪಂದಕ್ಕೆ ಸಹಿ ಮಾಡಿವೆ. ರಕ್ಷಣಾ ವೈಮಾನಿಕ ಕ್ಷೇತ್ರದಲ್ಲಿನ ನಿರ್ವಹಣೆ, ದುರಸ್ತಿ, ಕಾರ್ಯಕ್ಷಮತೆ ಸುಧಾರಣೆ ಮತ್ತು ಉತ್ಪಾದನೆ ಹೆಚ್ಚಳ ಮಾಡಲು ಈ ಒಪ್ಪಂದ ಸಹಕಾರಿ ಆಗಲಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು