ಬೆಂಗಳೂರು: ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಫಾರೂಕ್ ಖಾನ್ (26) ಅವರನ್ನು ಅಪಹರಣ ಮಾಡಿ ಕತ್ತು ಕೊಯ್ದು ಹತ್ಯೆ ಮಾಡಲಾಗಿದ್ದು, ಈ ಸಂಬಂಧ ಮೂವರು ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದಾರೆ.
‘ಸುಹೇಲ್ ಖಾನ್, ಮುಬಾರಕ್, ಹಾಗೂ ಅಲಿ ಅಕ್ರಂ ಬಂಧಿತರು. ಸಂಪಿಗೆಹಳ್ಳಿ ಬಳಿಯ ಅರ್ಕಾವತಿ ಬಡಾವಣೆಯ 3ನೇ ಹಂತದ ನಿವಾಸಿ ಫಾರೂಕ್ ಖಾನ್ ಅವರನ್ನು ಸೆ. 17ರಂದು ಕೊಲೆ ಮಾಡಲಾಗಿದೆ. ಫಾರೂಕ್ ಸಹೋದರ ನೀಡಿರುವ ದೂರು ಆಧರಿಸಿ, ಮೂವರನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಫಾರೂಕ್ ಹಾಗೂ ಆರೋಪಿಗಳು, ಹಲವು ವರ್ಷಗಳ ಸ್ನೇಹಿತರು. ಸೆ. 17ರಂದು ಮಧ್ಯಾಹ್ನ ಆಟೊದಲ್ಲಿ ಫಾರೂಕ್ ಅವರನ್ನು ಅಪಹರಿಸಿಕೊಂಡು ಹೋಗಿದ್ದ ಆರೋಪಿಗಳು, ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದರು.
ಮೊಬೈಲ್ ಕಸಿದುಕೊಂಡಿದ್ದಕ್ಕೆ ಕೊಲೆ: ‘ಫಾರೂಕ್ ಅವರು ಆರೋಪಿ ಸುಹೇಲ್ ಖಾನ್‌ಗೆ ₹ 10 ಸಾವಿರ ಸಾಲ ನೀಡಿದ್ದರು. ನಿಗದಿತ ಸಮಯಕ್ಕೆ ಸುಹೇಲ್ ಸಾಲ ವಾಪಸು ಕೊಟ್ಟಿರಲಿಲ್ಲ. ಇದೇ ವಿಚಾರವಾಗಿ ಹಲವು ಬಾರಿ ಮಾತುಕತೆ ನಡೆದು, ಜಗಳವಾಗಿತ್ತು. ಹೀಗಾಗಿ, ಇಬ್ಬರ ನಡುವೆ ವೈಷಮ್ಯ ಬೆಳೆದಿತ್ತು’ ಎಂದು ಪೊಲೀಸರು ಹೇಳಿದರು.
‘ಕೆಲದಿನಗಳ ಹಿಂದೆಯಷ್ಟೇ ಸುಹೇಲ್ ಬಳಿ ಹೋಗಿದ್ದ ಫಾರೂಕ್, ಸಾಲ ವಾಪಸು ನೀಡುವಂತೆ ಪಟ್ಟು ಹಿಡಿದಿದ್ದರು. ಆದರೆ, ತನ್ನ ಬಳಿ ಹಣವಿಲ್ಲವೆಂದು ಸುಹೇಲ್ ಹೇಳಿದ್ದ. ಅದಕ್ಕೆ ಒಪ್ಪದ ಫಾರೂಕ್, ಸುಹೇಲ್ ಬಳಿಯ ಮೊಬೈಲ್ ಕಸಿದುಕೊಂಡಿದ್ದ. ಪೊಲೀಸರಿಗೂ ದೂರು ನೀಡುವುದಾಗಿ ಬೆದರಿಸಿದ್ದ.’
‘ಮೊಬೈಲ್‌ನಲ್ಲಿ ತಾಯಿ ಹಾಗೂ ಸಂಬಂಧಿಕರ ಫೋಟೊಗಳಿದ್ದವು. ಹೀಗಾಗಿ, ಮೊಬೈಲ್ ವಾಪಸು ನೀಡುವಂತೆ ಸುಹೇಲ್ ಮನವಿ ಮಾಡಿದ್ದ. ಆದರೆ, ಫಾರೂಕ್ ಮೊಬೈಲ್ ಕೊಟ್ಟಿರಲಿಲ್ಲ. ಹಲವು ದಿನ ತನ್ನ ಬಳಿಯೇ ಮೊಬೈಲ್ ಇಟ್ಟುಕೊಂಡಿದ್ದ’ ಎಂದು ಪೊಲೀಸರು ತಿಳಿಸಿದರು.
‘ಮೊಬೈಲ್ ಕೊಡದಿದ್ದರಿಂದ ಕೋಪಗೊಂಡಿದ್ದ ಸುಹೇಲ್ ತನ್ನ ಸಹಚರರ ಜೊತೆ ಸೇರಿ ಫಾರೂಕ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ. ನಂತರ, ಆರೋಪಿಗಳು ಆಟೊದಲ್ಲಿ ಹೋಗಿ ಮಾತುಕತೆ ನೆಪದಲ್ಲಿ ಫಾರೂಕ್ ಅವರನ್ನು ಅಪಹರಿಸಿದ್ದರು.’
‘ಮೊಬೈಲ್ ವಾಪಸು ನೀಡುವಂತೆ ಕೇಳಿದ್ದ ಆರೋಪಿ, ಆರಂಭದಲ್ಲಿ ಫಾರೂಕ್ ಕೈಗೆ ಚಾಕು ಇರಿದಿದ್ದ. ತಪ್ಪಿಸಿಕೊಳ್ಳಲು ಯತ್ನಿಸಿದ್ದ ಫಾರೂಕ್, ಆರೋಪಿಯನ್ನು ತಳ್ಳಾಡಿದ್ದ. ಇದೇ ಸಂದರ್ಭದಲ್ಲಿ ಆರೋಪಿ ಬಳಿಯ ಚಾಕು ಕುತ್ತಿಗೆಗೆ ತಾಗಿತ್ತು. ತೀವ್ರ ರಕ್ತಸ್ರಾವವಾಗಿ ಫಾರೂಕ್ ಮೃತಪಟ್ಟಿದ್ದಾರೆ. ಈ ಬಗ್ಗೆ ಆರೋಪಿಗಳು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.