ವ್ಯಾಪಾರಿಗೆ ಗುಂಡು ಹೊಡೆದಿದ್ದವರ ಸೆರೆ

7
ಅಪಹರಿಸಿ ₹5 ಕೋಟಿ ವಸೂಲಿ ಮಾಡಲು ಸಂಚು: ಆರು ಕಾರ್ಮಿಕರು ಸೇರಿ ಎಸಗಿದ್ದ ಕೃತ್ಯ

ವ್ಯಾಪಾರಿಗೆ ಗುಂಡು ಹೊಡೆದಿದ್ದವರ ಸೆರೆ

Published:
Updated:
ಜಪ್ತಿಯಾದ ಪಿಸ್ತೂಲ್, ಗುಂಡುಗಳು

ಬೆಂಗಳೂರು: ಪೀಠೋಪಕರಣ ವ್ಯಾಪಾರಿ ಮಸೂದ್ ಅಲಿ ಎಂಬುವರ ಮೇಲೆ ಗುಂಡು ಹಾರಿಸಿ ಅಪಹರಿಸಲು ಯತ್ನಿಸಿದ್ದ ಪ್ರಕರಣದಲ್ಲಿ ಇನ್ನೂ ಮೂವರನ್ನು ಬಂಧಿಸಿರುವ ಪುಲಕೇಶಿನಗರ ಪೊಲೀಸರು, ಮೂರು ನಾಡಪಿಸ್ತೂಲು ಹಾಗೂ ಜೀವಂತ ಗುಂಡುಗಳನ್ನು ಜಪ್ತಿ ಮಾಡಿದ್ದಾರೆ.

ಮೇ 21ರ ಬೆಳಿಗ್ಗೆ 11.30ರ ಸುಮಾರಿಗೆ ಪುಲಕೇಶಿನಗರದ ಅಸ್ಸಾಯಿ ರಸ್ತೆಯಲ್ಲಿ ಮಸೂದ್ ಮೇಲೆ ದಾಳಿ ನಡೆದಿತ್ತು. ಈ ಸಂಬಂಧ ಪೊಲೀಸರು ಜೂನ್ 3ರಂದು ಶೇಖ್ ಜುಬೇರ್, ಎನ್‌.ಮೆಹ್ತಾಬ್, ನಿಯಾಮತ್‌ವುಲ್ಲಾ ಹಾಗೂ ಸೈಯದ್ ಇಸ್ರಾರ್ ಎಂಬು
ವರನ್ನು ಬಂಧಿಸಿದ್ದರು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಕೃತ್ಯದಲ್ಲಿ ಇನ್ನೂ ಮೂವರು ಭಾಗಿಯಾಗಿರುವ ವಿಚಾರ ಗೊತ್ತಾಗಿತ್ತು. ಮೊಬೈಲ್ ಕರೆ ವಿವರ ಆಧರಿಸಿ ಜೂನ್ 19ರಂದು ಅವರನ್ನೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

‘ಉತ್ತರಪ್ರದೇಶದ ಶಬಾಜ್ ಅಸಾದ್ ಅಲಿಯಾಸ್ ಶಾನ್, ಫರ್ಖಾನ್ ಅಲಿಯಾಸ್ ಕಲ್ಲು ಹಾಗೂ ನಿತಿನ್ ಶರ್ಮಾ ಅಲಿಯಾಸ್ ತಿಟು ಎಂಬುವರನ್ನು ಬಂಧಿಸಲಾಗಿದೆ. ಎರಡು ವರ್ಷಗಳಿಂದ ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಇವರು, ಯಶವಂತ ಪುರದಲ್ಲಿ ಮನೆ ಬಾಡಿಗೆ ಪಡೆದು ವಾಸವಿದ್ದರು’ ಎಂದು ಪೊಲೀಸರು ಹೇಳಿದರು.

ತಪ್ಪಿಸಿಕೊಂಡಾಗ ಗುಂಡೇಟು: ಜುಬೇರ್‌ನ ಸಂಬಂಧಿಯೊಬ್ಬರು ಆರು ತಿಂಗಳ ಹಿಂದೆ ಮಸೂದ್ ಬಳಿ ಫ್ಲ್ಯಾಟ್ ಖರೀದಿಸಿದ್ದರು. ಆಗ ಸಂಬಂಧಿ ಜತೆ ಜುಬೇರ್ ಸಹ ಮಾತುಕತೆಗೆ ಹೋಗಿದ್ದರಿಂದ ಆತನಿಗೆ ಮಸೂದ್ ಅವರ ಪರಿಚಯವಾಗಿತ್ತು.

ಕೆಲ ದಿನಗಳ ನಂತರ ಅವರನ್ನು ಅಪಹರಿಸಿ ₹ 5 ಕೋಟಿ ಸುಲಿಗೆ ಮಾಡಲು ನಿರ್ಧರಿಸಿದ ಜುಬೇರ್‌, ತನ್ನ ಸಂಚನ್ನು ಸ್ನೇಹಿತರ ಬಳಿ ಹೇಳಿ
ಕೊಂಡಿದ್ದ. ಅದಕ್ಕೆ ಒಪ್ಪಿಕೊಂಡ ಅವರು, ತಮಗೆ ಪರಿಚಯವಿದ್ದ ಉತ್ತರ ಪ್ರದೇಶದ ಕಾರ್ಮಿಕರನ್ನೂ ಕರೆದುಕೊಂಡು ಬಂದಿದ್ದರು.

ಮೇ 21ರ ಬೆಳಿಗ್ಗೆ 11.30ರ ಸುಮಾರಿಗೆ ಮಸೂದ್, ಕಾಕ್ಸ್‌ಟೌನ್‌ನಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ ಸಮುಚ್ಚಯದಿಂದ ಕಚೇರಿಗೆ ಹೊರಟಿ
ದ್ದರು. ಈ ವೇಳೆ ಕಾರಿನಲ್ಲಿ ಅವರ ಕಾರನ್ನು ಹಿಂಬಾಲಿಸಿದ್ದ ಆರೋಪಿಗಳು, ಅಸ್ಸಾಯಿ ರಸ್ತೆಯಲ್ಲಿ ವಾಹನ ಗುದ್ದಿಸಿದ್ದರು. ನಂತರ ಚಾಲಕನನ್ನು ಹೊರಗೆ ಎಳೆದು ಹಾಕಿ, ತಾವು ಆ ಕಾರನ್ನು ಏರಿದ್ದರು. ಪಿಸ್ತೂಲ್ ಇದ್ದುದರಿಂದ ಹೆದರಿದ ಮಸೂದ್, ವಾಹನದಿಂದ ಇಳಿದು ಓಡಲಾರಂಭಿಸಿದ್ದರು. ಆಗ ಅವರನ್ನು ಬೆನ್ನಟ್ಟಿದ ಆರೋಪಿಗಳು, ಪಿಸ್ತೂಲ್‌ನಿಂದ ಒಂದು ಸುತ್ತು ಗುಂಡು ಹಾರಿಸಿದ್ದರು. ಅದು ಬೆನ್ನಿಗೆ ತಾಕಿತ್ತು. ಈ ಸಂದರ್ಭದಲ್ಲಿ ಮಸೂದ್ ಚಾಲಕ, ಕಾರು ತೆಗೆದುಕೊಂಡು ಪಕ್ಕದ ರಸ್ತೆಯಿಂದ ಮಾಲೀಕನ ರಕ್ಷಣೆಗೆ ಧಾವಿಸಿದ್ದರು. ಅವರನ್ನು ಕಾರಿನಲ್ಲಿ ಕೂರಿಸಿಕೊಂಡು, ವಿಕ್ರಂ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು.

ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಮೆಹ್ತಾಬ್‌ನ ಚಹರೆ ಸೆರೆಯಾಗಿತ್ತು. ಆತನನ್ನು ವಶಕ್ಕೆ ಪ‍ಡೆದು ವಿಚಾರಣೆಗೆ ಒಳಪಡಿಸಿದಾಗ ಜುಬೇರ್‌ನೇ ಸೂತ್ರಧಾರ ಎಂಬುದು ಗೊತ್ತಾಯಿತು. ‘ಕೊಲ್ಲುವ ಉದ್ದೇಶ ಇರಲಿಲ್ಲ. ಅಪಹರಿಸಿ ಸುಲಿಗೆ ಮಾಡುವುದಷ್ಟೇ ನಮ್ಮ ಗುರಿಯಾಗಿತ್ತು’ ಎಂದು ಜುಬೇರ್ ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದರು.

ಪಿಸ್ತೂಲ್‌ಗಳನ್ನು ಪಂಪ್‌ಸೆಟ್‌ನಲ್ಲಿ ಇಟ್ಟಿದ್ದ!

ಉತ್ತರಪ್ರದೇಶದ ಕಾರ್ಮಿಕರು, ಜುಬೇರ್‌ನ ಸೂಚನೆಯಂತೆ ರಾಜ್ಯದಿಂದ ಪಿಸ್ತೂಲ್‌ಗಳನ್ನು ತರಿಸಿಕೊಂಡಿದ್ದರು. ಕೃತ್ಯಕ್ಕೆ ನೆರವಾಗಲು ಅವರಿಗೆ ₹ 85 ಸಾವಿರ ಕೊಟ್ಟಿದ್ದ ಜುಬೇರ್, ಅಪಹರಣ ಸಂಚು ವಿಫಲವಾಗಿದ್ದರಿಂದ ಕೆಲ ದಿನಗಳ ಬಳಿಕ ಆ ಹಣ ವಾಪಸ್ ಕೇಳಿದ್ದ. ಹಣ ಖರ್ಚಾಗಿದ್ದಾಗಿ ಕಾರ್ಮಿಕರು ಹೇಳಿದಾಗ, ‘ಹಾಗಿದ್ದರೆ ಪಿಸ್ತೂಲ್‌ಗಳನ್ನೇ ಕೊಡಿ. ಅವುಗಳನ್ನು ಮಾರಾಟ ಮಾಡುತ್ತೇನೆ’ ಎಂದು ಪಿಸ್ತೂಲ್ ಹಾಗೂ ಗುಂಡುಗಳನ್ನು ಅವರಿಂದ ಕಿತ್ತುಕೊಂಡಿದ್ದ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ವಿಚಾರವನ್ನು ಕಾರ್ಮಿಕರು ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಟ್ಟರು. ಶಸ್ತ್ರಾಸ್ತ್ರಗಳ ಬಗ್ಗೆ ಜುಬೇರ್‌ನನ್ನು ಪ್ರಶ್ನಿಸಿದಾಗ, ‘ನಾನು ನೆಲೆಸಿರುವ ಅಪಾರ್ಟ್‌ಮೆಂಟ್‌ನಲ್ಲಿ ಕ್ಲಬ್‌ಹೌಸ್ ಇದೆ. ಅಲ್ಲಿರುವ ಪಂಪ್‌ಸೆಟ್‌ನೊಳಗೆ ಪಿಸ್ತೂಲ್ ಹಾಗೂ ಗುಂಡುಗಳನ್ನು ಅಡಗಿಸಿಟ್ಟಿದ್ದೇನೆ’ ಎಂದು ಹೇಳಿದ. ಹೀಗೆ, ಅವುಗಳನ್ನೂ ಜಪ್ತಿ ಮಾಡಿದೆವು ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !