ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 3 ಕೋಟಿ ಬೇಡಿಕೆ; ಆರೋಪಿಗಳಿಗೆ ಗುಂಡೇಟು

ಉದ್ಯಮಿ ಪುತ್ರ, ಕಾರು ಚಾಲಕನ ಅಪಹರಣ ಪ್ರಕರಣ ಸುಖಾಂತ್ಯ l 23 ದಿನ ಅಕ್ರಮ ಬಂಧನ
Last Updated 17 ಸೆಪ್ಟೆಂಬರ್ 2019, 19:40 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಮಿಯೊಬ್ಬರ ಪುತ್ರ ಸೇರಿ ಇಬ್ಬರನ್ನು ಅಪಹರಿಸಿ 23 ದಿನ ಅಕ್ರಮ ಬಂಧನದಲ್ಲಿಟ್ಟು ₹ 3 ಕೋಟಿಗೆ ಬೇಡಿಕೆ ಇಟ್ಟಿದ್ದ ಅಪಹರಣಕಾರರನ್ನು ಗುಂಡು ಹೊಡೆದು ಪೊಲೀಸರು ಬಂಧಿಸಿದ್ದಾರೆ.

ಉಲ್ಲಾಳ ಗ್ರಾಮದ ಪ್ರಶಾಂತ್ (25), ಆತನ ಸಹಚರ ನವೀನ್ (24), ತಮಿಳುನಾಡಿನ ತಂಗಬಾಲ (25) ಬಂಧಿತರು. ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ.

ಯಲಹಂಕದಲ್ಲಿ ಟಿವಿಎಸ್ ಶೋರೂಂ ಹೊಂದಿರುವ ಸಿದ್ಧರಾಜು ಅವರ ಮಗ ಹೇಮಂತ್ ಮತ್ತು ಕಾರು ಚಾಲಕ ಕೇಶವರೆಡ್ಡಿ ಅವರನ್ನು ಆ. 26ರಂದು ಅಪಹರಿಸಲಾಗಿತ್ತು. ಆ ಸಂಬಂಧ ರಾಜಾನುಕುಂಟೆ ಠಾಣೆಯಲ್ಲಿ ದಾಖಲಾದ ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿತ್ತು.

ಕನಕಪುರ ನೈಸ್ ರಸ್ತೆ ಜಂಕ್ಷನ್ ಸಮೀಪದ ತೋಪು ಹಾಗೂ ಕಡಬಗೆರೆಯ ಜನಪ್ರಿಯ ಟೌನ್‍ಶಿಪ್ ಎದುರಿನ ನೀಲಗಿರಿ ತೋಪಿನ ಎರಡೂ ಕಡೆ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ ತಂಡದ ಸದಸ್ಯರು, ಚುರುಕಿನ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

‘ಹೇಮಂತ್‌ ಮತ್ತು ಕೇಶವರೆಡ್ಡಿ ಅವ
ರನ್ನು ಕೊಲೆ ಮಾಡುವುದಾಗಿ ಪ್ರಶಾಂತ್ ಬೆದರಿಕೆ ಹಾಕಿದ್ದ. ಕಾನ್‍ಸ್ಟೆಬಲ್ ಮಧುಕುಮಾರ್ ಅವರ ಬಲ ತೋಳಿಗೆ ಡ್ರ್ಯಾಗರ್‌ನಿಂದ ಇರಿದಿದ್ದ. ರಕ್ಷಣೆಗೆ ಹೋದ ಇನ್‌ಸ್ಪೆಕ್ಟರ್ ಸತ್ಯನಾರಾಯಣ, ಆರೋಪಿ ಪ್ರಶಾಂತ್‌ನ ಎಡಗಾಲಿಗೆ ಗುಂಡು ಹಾರಿಸಿದ್ದರು. ಇನ್ನೊಬ್ಬ ಆರೋಪಿ ತಂಗಬಾಲ ಸಹ ಪಿಎಸ್‍ಐ ಮುರಳೀಧರ ಅವರ ತೋಳಿಗೆ ಮಚ್ಚಿ
ನಿಂದ ಹೊಡೆದಿದ್ದ. ಆತನ ಎರಡೂ ಕಾಲಿಗೂ ಗುಂಡು ಹಾರಿಸಿ ಸೆರೆಹಿಡಿಯಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಹಣ ಒಯ್ಯಲು ಬಂದಿದ್ದರು: ‘ಸಿಂಗನಾಯಕನಹಳ್ಳಿ ಬಳಿಯ ಆರ್.ಟಿ. ನಗರ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಹೇಮಂತ್‌ನನ್ನು ಕಾರಿನಲ್ಲಿ ಕರೆದುಕೊಂಡು ಕೇಶವರೆಡ್ಡಿ ಮನೆಯತ್ತ ಹೊರಟಿದ್ದ. ಅದೇ ಕಾರು ಸಮೇತ ಇಬ್ಬರನ್ನೂ ಅಪಹರಿಸಿದ್ದ ಆರೋಪಿಗಳು, ಉಲ್ಲಾಳ ಮತ್ತು ಗಂಗೊಂಡನಹಳ್ಳಿ ಬಾಡಿಗೆ ಮನೆಗಳಲ್ಲಿ ಇರಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಸೋಮವಾರ ರಾತ್ರಿ ಉದ್ಯಮಿ ಸಿದ್ಧರಾಜುಗೆ ಕರೆ ಮಾಡಿದ್ದ ಆರೋಪಿ
ಗಳು, ಹಣ ತೆಗೆದುಕೊಂಡು ತಾವು ಹೇಳಿದ ಸ್ಥಳಕ್ಕೆ ಬರುವಂತೆ ಹೇಳಿದ್ದರು. ಪದೇ ಪದೇ ಕರೆ ಮಾಡಿ ಬೇರೆ ಬೇರೆ ಸ್ಥಳಗಳಿಗೆ ಬರುವಂತೆ ಹೇಳಿ ದಿಕ್ಕು ತಪ್ಪಿಸುತ್ತಿದ್ದರು. ಕೊನೆಗೆ ಕನಕ
ಪುರ ನೈಸ್ ರಸ್ತೆ ಜಂಕ್ಷನ್ ಸಮೀಪದ ತೋಪಿಗೆ ಬರುವಂತೆ ಹೇಳಿದ್ದರು. ಕಾರಿನಲ್ಲಿ ಸ್ಥಳ ತಲುಪಿದ್ದ ಸಿದ್ಧರಾಜು, ಆರೋಪಿಗಳು ತಿಳಿಸಿದ್ದ ಸ್ಥಳದಲ್ಲಿ ಮಂಗಳ
ವಾರ ನಸುಕಿನಲ್ಲಿ ಹಣದ ಚೀಲವಿಟ್ಟು ವಾಪಸ್ ಬಂದಿದ್ದರು. ಕೆಲವೇ ನಿಮಿಷ
ಗಳಲ್ಲಿ ಚೀಲ ಪಡೆಯಲು ಆರೋಪಿ ನವೀನ್ ಬಂದಿದ್ದ. ಸಮೀಪದಲ್ಲೇ ಅಡಗಿ ಕುಳಿತಿದ್ದ ಹೊಸಕೋಟೆ ಡಿವೈಎಸ್‍ಪಿ ಎನ್.ಬಿ. ಸಕ್ರಿ ನೇತೃತ್ವದ ತಂಡ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದೆ’ ಎಂದು ಪೊಲೀಸರು ತಿಳಿಸಿದರು.

ಸಿನಿಮೀಯ ಶೈಲಿಯ ಕಾರ್ಯಾಚರಣೆ!

ಅಪಹರಣಕಾರರನ್ನು ಬಂಧಿಸಲು ಹೋದ ಪೊಲೀಸರು, ಸುಮಾರು 300 ಮೀಟರ್‌ಗಳಷ್ಟು ದೂರ ಕ್ರಾವಲ್ಲಿಂಗ್ (ನೆಲದ ಮೇಲೆ ತೆವಳುವುದು) ಮಾಡಿದ್ದಾರೆ. ಸಿದ್ದರಾಜು ಹಣದ ಚೀಲ ನೀಡಲು ಹೋದಾಗಲೂ ಅವರ ಕಾರಿನಲ್ಲಿ ಮೂವರು ಇನ್‌ಸ್ಪೆಕ್ಟರ್‌ಗಳು ಮಲಗಿದ್ದರು. ಕೆಲ ಸಿಬ್ಬಂದಿ ಮಫ್ತಿಯಲ್ಲಿ ಸಮೀಪದಲ್ಲೇ ವಾಹನಗಳನ್ನು ನಿಲ್ಲಿಸಿ ಮಲಗಿದ್ದರು.

‘ಸಿದ್ಧರಾಜು ಹಣದ ಚೀಲವಿಟ್ಟು ವಾಪಸ್ ಹೊರಟಾಗ, ಸ್ವಲ್ಪ ದೂರದಲ್ಲಿ ಮೂವರೂ ಇನ್‌ಸ್ಪೆಕ್ಟರ್‌ಗಳು ಕಾರಿನಿಂದ ಇಳಿದಿದ್ದರು. ಉಳಿದ ಪೊಲೀಸರಿಗೂ ಅವರೇ ಮಾಹಿತಿ ನೀಡಿದ್ದರು. ಸುತ್ತಮುತ್ತ ನೋಡುತ್ತ ಹಣದ ಚೀಲ ತೆಗೆದುಕೊಳ್ಳಲು ನವೀನ್‍ ಸ್ಥಳಕ್ಕೆ ಬರುತ್ತಿದ್ದಂತೆ, ಆತನನ್ನು ಪೊಲೀಸರು ಸುತ್ತುವರಿದಿದ್ದರು’ ಎಂದು ಪೊಲೀಸರು ಹೇಳಿದರು.

ಪ್ರಕರಣದ ಸೂತ್ರಧಾರ ಪ್ರಶಾಂತ್

‘ಆರೋಪಿ ಪ್ರಶಾಂತ್, ಪ್ರಕರಣದ ಸೂತ್ರಧಾರ. ಈ ಹಿಂದೆ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕ್ರೈಂ ಸ್ಟೋರಿ, ಅದಕ್ಕೆ ಸಂಬಂಧಿಸಿದ ಪುಸ್ತಕ ಓದುತ್ತಿದ್ದ. ಅಪಹರಣ ಮಾಡುವುದು ಹೇಗೆ? ತಪ್ಪಿಸಿಕೊಳ್ಳುವುದು ಹೇಗೆ? ಎಂಬಿತ್ಯಾದಿ ಮಾಹಿತಿಯನ್ನು ಯೂಟ್ಯೂಬ್‌ನಲ್ಲಿ ವಿಡಿಯೊ ನೋಡಿ ತಿಳಿದುಕೊಂಡಿದ್ದ.

ತಮಿಳುನಾಡಿನ ವೆಲ್ಲಾಪುರಿ ಗ್ಯಾಂಗ್‍ನ ಸಹಚರರ ಜತೆ ಸೇರಿ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ 2014ರಲ್ಲಿ ಜೈಕಿರಣ್ ಎಂಬಾತನನ್ನು ಅಪಹರಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಸೇರಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ದೂರುದಾರ ಸಿದ್ಧರಾಜು ಅವರ ಶೋರೂಂನಲ್ಲಿ ಕೆಲಸ ಮಾಡುವ ಸ್ನೇಹಿತನೊಬ್ಬನ ಮೂಲಕ ಮಗನ ಬಗ್ಗೆ ತಿಳಿದುಕೊಂಡಿದ್ದ. ಎರಡು ತಿಂಗಳ ಹಿಂದೆಯೇ ಕೃತ್ಯಕ್ಕೆ ಸಂಚು ರೂಪಿಸಿದ್ದ. ಅಪಹರಣ ವೇಳೆ ಯಾವುದೇ ಮೊಬೈಲ್ ಬಳಸಿರಲಿಲ್ಲ’ ಎಂದು ಪೊಲೀಸರು ಹೇಳಿದರು.

ಅಪಹರಣಕ್ಕೆಂದೇ ಕಾರು, ಮೊಬೈಲ್ ಕಳವು

‘ಪೊಲೀಸರಿಗೆ ಸಿಕ್ಕಿಬೀಳಬಾರದೆಂಬ ಕಾರಣಕ್ಕೆ ಆರೋಪಿಗಳು, ಅಪಹರಣಕ್ಕೂ ಮುನ್ನವೇ ಕಾರು ಹಾಗೂ ಮೊಬೈಲ್ ಕದ್ದಿಟ್ಟುಕೊಂಡಿದ್ದರು. ಅದೇ ಕಾರಿನಲ್ಲೇ ಇಬ್ಬರನ್ನೂ ಅಪಹರಿಸಿದ್ದರು. ಉದ್ಯಮಿ ಜೊತೆ ಮಾತನಾಡಲೂ ಅದೇ ಮೊಬೈಲ್ ಬಳಸಿದ್ದರು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ನಾಲ್ಕು ದಿನಗಳ ಹಿಂದಷ್ಟೇ ಕರೆ ಮಾಡಿದ್ದ ಆರೋಪಿಗಳು, ಎಲೆಕ್ಟ್ರಾನಿಕ್ ಸಿಟಿ ರಸ್ತೆಗೆ ಹಣ ತರುವಂತೆ ಹೇಳಿದ್ದರು. ಪೊಲೀಸರಿಗೆ ಮಾಹಿತಿ ನೀಡಿರಬಹುದೆಂಬ ಭೀತಿಯಿಂದ ಜಾಗ ಬದಲಿಸಿದ್ದರು. ಸೋಮವಾರ ಸಂಜೆ ಮತ್ತೆ ಕರೆ ಮಾಡಿ, ದ್ವಿಚಕ್ರ ವಾಹನದಲ್ಲಿ ಹಣ ಕಳುಹಿಸುವಂತೆ ಸಿದ್ಧರಾಜು ಅವರಿಗೆ ಸೂಚಿಸಿದ್ದರು. ಮಳೆ ಸುರಿಯುತ್ತಿದ್ದುದರಿಂದ ಕಾರಿನಲ್ಲಿ ಹಣ ಕಳುಹಿಸುವುದಾಗಿ ಸಿದ್ಧರಾಜು ಹೇಳಿದ್ದರು’ ಎಂದೂ ಅಧಿಕಾರಿ ತಿಳಿಸಿದರು.

ಗ್ರಾಮಾಂತರ ಎಸ್‌ಪಿ ರವಿ ಚನ್ನಣ್ಣನವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ತನಿಖೆ ಪ್ರಗತಿಯಲ್ಲಿದೆ

- ಶರತ್‌ ಚಂದ್ರ, ಕೇಂದ್ರ ವಲಯ ಐಜಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT