ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹರಣಕ್ಕೆ ದೊಡ್ಡಪ್ಪನ ಮಗನಿಂದಲೇ ಸುಪಾರಿ !

* ಬಾಲಕನ ಬಿಡುಗಡೆಗೆ ₹ 50 ಲಕ್ಷಕ್ಕೆ ಬೇಡಿಕೆ * 12 ಗಂಟೆಯಲ್ಲೇ ಆರೋಪಿಗಳ ಸೆರೆ
Last Updated 1 ಡಿಸೆಂಬರ್ 2019, 20:03 IST
ಅಕ್ಷರ ಗಾತ್ರ

ಬೆಂಗಳೂರು: ಹೋಟೆಲ್‌ ಉದ್ಯಮಿಯೊಬ್ಬರ 13 ವರ್ಷದ ಮಗನನ್ನು ಅಪಹರಿಸಿ ಆತನ ಬಿಡುಗಡೆಗೆ ₹ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಮೂವರು ಆರೋಪಿಗಳನ್ನು ಪ್ರಕರಣ ದಾಖಲಾದ 12 ಗಂಟೆಯಲ್ಲೇ ನಗರದ ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

‘ಬಾಣಸವಾಡಿಯ ಮೋಹಿನ್, ಮುಬಾರಕ್ ಹಾಗೂ ಅಯಾಜ್ ಬಂಧಿತರು. ಬಾಲಕನ ದೊಡ್ಡಪ್ಪನ ಮಗನೇ ಆಗಿರುವ ಆರೋಪಿ ಮೋಹಿನ್‌ ಈ ಅಪಹರಣಕ್ಕೆ ಸಂಚು ರೂಪಿಸಿದ್ದ. ಮಬಾರಕ್ ಹಾಗೂ ಅಯಾಜ್‌ಗೆ ಸುಪಾರಿ ಕೊಟ್ಟು ಅಪಹರಣ ಮಾಡಿಸಿದ್ದ. ಈ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಬಾಲಕನ ತಂದೆ ಹೋಟೆಲ್‌ ನಡೆಸುತ್ತಿದ್ದು, ಉತ್ತಮ ವ್ಯಾಪಾರ ಆಗುತ್ತಿದೆ. ಅವರ ಹಣದ ವಹಿವಾಟಿನ ಬಗ್ಗೆ ಮೋಹಿನ್‌ಗೆ ಗೊತ್ತಿತ್ತು. ಆಗಾಗ ಅವರ ಮನೆಗೂ ಹೋಗಿ ಬರುತ್ತಿದ್ದ. ಉದ್ಯಮಿ ಬಳಿ ಇದ್ದ ಹಣ ನೋಡಿದ್ದ ಆರೋಪಿ, ಹೇಗಾದರೂ ಮಾಡಿ ಹಣವನ್ನು ತನ್ನದಾಗಿಸಿಕೊಳ್ಳಬೇಕೆಂದು ಅಂದುಕೊಂಡಿದ್ದ. ಅವಾಗಲೇ ಸಹೋದರನೇ ಆಗಿರುವ ಬಾಲಕನನ್ನು ಅಪಹರಿಸಿ ಜೀವ ಬೆದರಿಕೆಯೊಡ್ಡಿ ಹಣ ಕಿತ್ತುಕೊಳ್ಳಲು ಸಂಚು ರೂಪಿಸಿದ್ದ’ ಎಂದರು.

ಜಿಮ್‌ನಲ್ಲಿ ಆರೋಪಿಗಳ ಪರಿಚಯ: ‘ಆರೋಪಿ ಮೋಹಿನ್‌ಬಾಣಸವಾಡಿ ಸಮೀಪದ ಜಿಮ್‌ಗೆ ಹೋಗುತ್ತಿದ್ದ. ಅಲ್ಲಿಯೇ ಆತನಿಗೆ ಮುಬಾರಕ್ ಹಾಗೂ ಅಯಾಜ್‌ನ ಪರಿಚಯ ಆಗಿತ್ತು. ಅವರಿಬ್ಬರಿಗೂ ಹಣ ನೀಡುವುದಾಗಿ ಹೇಳಿ ಅಪಹರಣ ಮಾಡಲು ಒಪ್ಪಿಸಿದ್ದ’ ಎಂದು ಅಧಿಕಾರಿ ಹೇಳಿದರು.

‘ಉದ್ಯಮಿ ಶನಿವಾರ ಬೆಳಿಗ್ಗೆ ಹೋಟೆಲ್‌ಗೆ ಹೋಗಿದ್ದರು. ಮಧ್ಯಾಹ್ನ ಕಾರಿನಲ್ಲಿ ಮನೆಗೆ ಹೋಗಿದ್ದ ಮುಬಾರಕ್ ಹಾಗೂ ಅಯಾಜ್, ಬಾಲಕನನ್ನು ಕೂಗಿ ಹೊರಗೆ ಕರೆದಿದ್ದರು. ‘ನಾವಿಬ್ಬರು ನಿಮ್ಮ ಹೋಟೆಲ್‌ಗೆ ಸಾಮಗ್ರಿ ಪೂರೈಸುವವರು. ನಿನ್ನ ತಂದೆ ಸಾಮಗ್ರಿ ತರುವಂತೆ ಹೇಳಿದ್ದಾರೆ. ಆದರೆ, ಹೋಟೆಲ್‌ಗೆ ಹೋಗುವ ದಾರಿ ಗೊತ್ತಿಲ್ಲ. ನಮ್ಮೊಂದಿಗೆ ಬಂದು ತೋರಿಸು’ ಎಂದು ಆರೋಪಿಗಳು ಹೇಳಿದ್ದರು. ಅದನ್ನು ನಂಬಿದ್ದ ಬಾಲಕ ಕಾರಿನೊಳಗೆ ಹತ್ತಿದ್ದ.’

‘ಸ್ಥಳದಿಂದ ಹೊರಟ ಆರೋಪಿಗಳು, ಬಾಲಕನನ್ನು ಮನೆಯೊಂದಕ್ಕೆ ಕರೆದೊಯ್ದು ಬಂಧನದಲ್ಲಿಟ್ಟಿದ್ದರು. ಸಂಜೆ 5ರ ಸುಮಾರಿಗೆ ಉದ್ಯಮಿಗೆ ಕರೆ ಮಾಡಿ, ‘ನಿಮ್ಮ ಮಗನನ್ನು ಅಪಹರಿಸಿದ್ದೇವೆ. ಬಿಡುಗಡೆ ಮಾಡಬೇಕಾದರೆ ರಾತ್ರಿ 8 ಗಂಟೆಯೊಳಗಾಗಿ ₹ 50 ಲಕ್ಷ ನೀಡಬೇಕು. ಇಲ್ಲದಿದ್ದರೆ, ಜೀವ ಸಹಿತ ಬಿಡುವುದಿಲ್ಲ’ ಎಂದು ಬೆದರಿಸಿದ್ದರು. ಗಾಬರಿಗೊಂಡ ಉದ್ಯಮಿ ಠಾಣೆಗೆ ದೂರು ನೀಡಿದ್ದರು.’

‘ಬಾಲಕನ ಜೀವಕ್ಕೆ ಆಪತ್ತು ಇರುವುದನ್ನು ಮನಗಂಡು ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ ತಂಡ ಭಾನುವಾರ ನಸುಕಿನಲ್ಲಿ ಬಾಲಕನನ್ನು ರಕ್ಷಿಸಿದೆ. ಅಪಹರಣ ಮಾಡಿದ್ದ ಆರೋಪಿಗಳನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT