ಗುರುವಾರ , ಅಕ್ಟೋಬರ್ 17, 2019
26 °C
ಕಟ್ಟಡಕ್ಕೆ ಇನ್ಫೊಸಿಸ್‌ ನೆರವು l ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಶೀಘ್ರ ಆರಂಭವಾಗಲಿದೆ ಪ್ರತ್ಯೇಕ ವಿಭಾಗ

ಕಿದ್ವಾಯಿ: ಆರೋಗ್ಯ ಯೋಜನೆಗಳ ಸೇವೆ ಸುಲಭ

Published:
Updated:
Prajavani

ಬೆಂಗಳೂರು: ವಿವಿಧ ಸರ್ಕಾರಿ ಆರೋಗ್ಯ ಯೋಜನೆಗಳ ಲಾಭ ಪಡೆದುಕೊಳ್ಳಲು ರೋಗಿಗಳು ನಡೆಸುವ ಅಲೆದಾಟ ತಪ್ಪಿಸಲು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಮುಂದಾಗಿದ್ದು, ಪ್ರತಿ ಯೋಜನೆಗೂ ಪ್ರತ್ಯೇಕ ವಿಭಾಗವನ್ನು ಶೀಘ್ರವೇ ಆರಂಭ ಮಾಡಲಿದೆ.

ಸಂಸ್ಥೆಗೆ ಚಿಕಿತ್ಸೆಗೆ ಬರುವವರಲ್ಲಿ ಬಹುತೇಕರು ಬಡ–ಮಧ್ಯಮ ವರ್ಗದವರಾಗಿದ್ದು, ಸರ್ಕಾರಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಇದರಿಂದ ಸಹಜವಾಗಿಯೇ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಸೇರಿದಂತೆ ವಿವಿಧ ಯೋಜನೆಯ ಲಾಭ ಪಡೆದುಕೊಳ್ಳಲು ರೋಗಿಗಳು ದಿನವಿಡೀ‌ ಸರತಿ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿಯಿದೆ. ಅಷ್ಟೇ ಅಲ್ಲ, ಯೋಜನೆಯ ಪ್ರಕ್ರಿಯೆ ಪೂರ್ಣಗೊಳ್ಳಲು ಸಮಯ ಹಿಡಿಯುತ್ತಿದೆ. ಹೀಗಾಗಿ, ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಸೇರಿದಂತೆ ಪ್ರತಿ ಯೋಜನೆಗೂ ಸಂಸ್ಥೆಯಲ್ಲಿ ಪ್ರತ್ಯೇಕ ವಿಭಾಗ ನಿರ್ಮಾಣ ಮಾಡಲಾಗುತ್ತದೆ. 

ಇನ್ಫೊಸಿಸ್ ಪ್ರತಿಷ್ಠಾನದಿಂದ ಆರು ಅಂತಸ್ತುಗಳ ಹೊರರೋಗಿ ವಿಭಾಗ (ಒಪಿಡಿ) ಕಟ್ಟಡದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಉದ್ಘಾಟನೆಯ ಬಳಿಕ ಹಳೆ ಕಟ್ಟಡದಲ್ಲಿದ್ದ ಒಪಿಡಿ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ. ಹಳೆ ಕಟ್ಟಡದ ಖಾಲಿ ಕೊಠಡಿಗಳನ್ನು ನವೀಕರಣ ಮಾಡಿ, ಆರೋಗ್ಯ ಯೋಜನೆಗಳ ವಿಭಾಗ ಆರಂಭಿಸಲಾಗುತ್ತದೆ. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಈ ರೀತಿ ಆರೋಗ್ಯ ಯೋಜನೆಗಳಿಗೆ ಪ್ರತ್ಯೇಕವಾಗಿ ವಿಭಾಗ ಆರಂಭಿಸಿದ ಹೆಗ್ಗಳಿಕೆಗೆ ಸಂಸ್ಥೆ ಭಾಜನವಾಗಲಿದೆ. 

ಸ್ಥಳದಲ್ಲೇ ಪ್ರಕ್ರಿಯೆ ಪೂರ್ಣ: ‘ಸದ್ಯ ಸ್ಥಳಾವಕಾಶದ ಸಮಸ್ಯೆಯಿಂದ ಒಂದೇ ಕಡೆ ಎಲ್ಲ ಆರೋಗ್ಯ ಯೋಜನೆಗಳ ಫಲಾನುಭವಿಗಳಿಗೆ ಸೇವೆ ಒದಗಿಸಲಾಗುತ್ತಿದೆ. ರೋಗಿಗಳ ದಟ್ಟಣೆ ನಿರ್ವಹಿಸುವುದು ಸಿಬ್ಬಂದಿಗೆ ಕೂಡಾ ಸವಾಲಾಗಿದೆ. ಒಪಿಡಿ ಸ್ಥಳಾಂತರಿಸಿದ ಬಳಿಕ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ, ಇಎಸ್‌ಐಎಸ್, ಸಿಜಿಎಚ್‌ಎಸ್, ಜನಶ್ರೀ ಬಿಮಾ ಯೋಜನೆ ಸೇರಿದಂತೆ ವಿವಿಧ ಆರೋಗ್ಯ ಯೋಜನೆಗಳಿಗೆ ಪ್ರತ್ಯೇಕ ವಿಭಾಗ ಆರಂಭಿಸಲಾಗುತ್ತದೆ. ರೋಗಿಗಳ ಗೊಂದಲ ಸಹ ಸುಲಭವಾಗಿ ನಿವಾರಣೆ ಆಗಲಿದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ. ರಾಮಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು. 

‘ರೋಗಿಗಳು ಕುಳಿತುಕೊಳ್ಳಲು ಕೊಠಡಿಗಳಲ್ಲಿ ಆಸನದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಸ್ಥಳದಲ್ಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಕಳುಹಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು. 

ಸೇವೆಗೆ ಸಜ್ಜಾಗುತ್ತಿದೆ ಒಪಿಡಿ

‘ವಿವಿಧ ಮಾದರಿಯ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ಪಡೆದುಕೊಳ್ಳಲು ಬರುವ ರೋಗಿಗಳ ಸಂಖ್ಯೆ ಒಂದೇ ಸಮನೆ ಹೆಚ್ಚುತ್ತಿದೆ. ಇನ್ಫೊಸಿಸ್‌ ಪ್ರತಿಷ್ಠಾನ ನಿರ್ಮಿಸಿಕೊಡುತ್ತಿರುವ ನೂತನ ಕಟ್ಟಡದ ನಿರ್ಮಾಣ ಕಾಮಗಾರಿ ಬಹುತೇಕ ಮುಗಿದಿದೆ. ಈ ಕಟ್ಟಡದಲ್ಲಿ ರೋಗಿಗಳಿಗೆ ಹಾಗೂ ಸಿಬ್ಬಂದಿಗೆ ಐದನೇ ಮಹಡಿಯಲ್ಲಿ ಪ್ರತ್ಯೇಕ ಕ್ಯಾಂಟೀನ್ ಇರಲಿದೆ’ ಎಂದು ಡಾ.ಸಿ. ರಾಮಚಂದ್ರ ತಿಳಿಸಿದರು.

‘ನೆಲ ಮಹಡಿಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಪ್ರತ್ಯೇಕ ಸಭಾಂಗಣವನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಕೊಠಡಿಗಳಿದ್ದು, ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ನೂತನ ಒಪಿಡಿ ಉದ್ಘಾಟನೆ ಆಗಲಿದೆ’ ಎಂದು ಸ್ಪಷ್ಟಪಡಿಸಿದರು.

ಅಂಕಿ– ಅಂಶಗಳು

1,200

ಸಂಸ್ಥೆಯಲ್ಲಿ ಪ್ರತಿನಿತ್ಯ ಚಿಕಿತ್ಸೆ ಪಡೆಯುವ ಹೊರರೋಗಿಗಳು

1,300

ಸಂಸ್ಥೆಯಲ್ಲಿ ಪ್ರತಿನಿತ್ಯ ಚಿಕಿತ್ಸೆ ಪಡೆಯುವ ಒಳರೋಗಿಗಳು

72 ಸಾವಿರ ಚ.ಅಡಿ

ಇನ್ಫೊಸಿಸ್ ಪ್ರತಿಷ್ಠಾನ ನಿರ್ಮಿಸುತ್ತಿರುವ ಒಪಿಡಿ ಸ್ಥಳಾವಕಾಶ

* ಸರ್ಕಾರಿ ಆರೋಗ್ಯ ಯೋಜನೆಗಳಿಗೆ 7ಕ್ಕೂ ಅಧಿಕ ವಿಭಾಗಗಳು ನಿರ್ಮಾಣವಾಗಲಿದ್ದು, ಪ್ರತಿ ವಿಭಾಗದಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಿಸಲಾಗುತ್ತದೆ

- ಡಾ.ಸಿ. ರಾಮಚಂದ್ರ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ

Post Comments (+)