ಭಾನುವಾರ, ಜುಲೈ 3, 2022
24 °C

ಕ್ಯಾನ್ಸರ್ ತಪಾಸಣೆಗೆ ಆದ್ಯತೆ ನೀಡಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪ್ರಾರಂಭಿಕ ಹಂತದಲ್ಲಿಯೇ ಸೂಕ್ತ ತಪಾಸಣೆಗಳ ಮೂಲಕ ಕ್ಯಾನ್ಸರ್ ಇರುವುದನ್ನು ಪತ್ತೆ ಮಾಡಿ, ಚಿಕಿತ್ಸೆ ಒದಗಿಸಿದಲ್ಲಿ ಕಾಯಿಲೆ ಗುಣಪಡಿಸಲು ಸಾಧ್ಯ. ಹಾಗಾಗಿ, ರಾಜ್ಯದಾದ್ಯಂತ ಕ್ಯಾನ್ಸರ್ ತಪಾಸಣೆಗೆ ವಿಶೇಷ ಆದ್ಯತೆ ನೀಡಬೇಕು’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ಸಿ. ರಾಮಚಂದ್ರ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. 

‘ಕ್ಯಾನ್ಸರ್‌ ಕಾಯಿಲೆಯ ಬಗ್ಗೆ ಜನರಿಗೆ ಇತ್ತೀಚಿನ ದಿನಗಳಲ್ಲಿ ಅರಿವು ಮೂಡುತ್ತಿದೆ. ಹೀಗಾಗಿ, ತಪಾಸಣೆಗೆ ಬರುವವರ ಸಂಖ್ಯೆ ಸಹ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿದೆ. ಹೆಚ್ಚಿನವರು ರೋಗ ಉಲ್ಭಣಗೊಂಡ ಬಳಿಕ ಸಂಸ್ಥೆಗೆ ಚಿಕಿತ್ಸೆಗಾಗಿ ಬರುತ್ತಾರೆ. ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಮಾಡಿದಲ್ಲಿ ಹೆಚ್ಚಿನ ಚಿಕಿತ್ಸೆ ಇಲ್ಲದೆಯೇ ಕಾಯಿಲೆ ವಾಸಿ ಮಾಡಬಹುದು. ಈ ಕಾಯಿಲೆಯು ಎಲ್ಲ ವಯೋಮಾನದವರನ್ನೂ ಕಾಡಲಾರಂಭಿಸಿದೆ. ಆದ್ದರಿಂದ ಕ್ಯಾನ್ಸರ್ ನಿಯಂತ್ರಣಕ್ಕಾಗಿ ಕಾರ್ಯನೀತಿಗಳು ಹಾಗೂ ಕಾರ್ಯತಂತ್ರ ರೂಪಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರವು ತಪಾಸಣೆ ಮತ್ತು ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಿ, ಹೆಚ್ಚಿನ ಅನುದಾನ ಒದಗಿಸಿದಲ್ಲಿ ಈ ಕಾಯಿಲೆಯನ್ನು ನಿಯಂತ್ರಣ ಸಾಧ್ಯವಾಗುತ್ತದೆ’ ಎಂದರು.

‘ಕ್ಯಾನ್ಸರ್‌ಗೆ ಸಂಬಂಧಿಸಿದಂತೆ ಅಷ್ಟಾಗಿ ಸಂಶೋಧನೆಗಳು ನಡೆಯುತ್ತಿಲ್ಲ. ಹಾಗಾಗಿ, ನಗರದ ಹೊರವಲಯದಲ್ಲಿ 100 ಎಕರೆ ಜಮೀನು ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅಲ್ಲಿ ಕ್ಯಾನ್ಸರ್‌ಗೆ ಸಂಬಂಧಿಸಿದ ಸಂಶೋಧನೆಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ. ಚಿಕಿತ್ಸೆ ಸಂಬಂಧ ಸಂಸ್ಥೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ರೋಗಿಗಳ ದಟ್ಟಣೆ ನಿಯಂತ್ರಿಸುವುದು ಸವಾಲಾಗಿದೆ. ಪ್ರತಿನಿತ್ಯ 1,200ರಿಂದ 1,500 ಹೊರರೋಗಿಗಳು ಬರುತ್ತಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ನಾಲ್ಕು ವಿಭಾಗಗಳಲ್ಲಿ ಸಂಸ್ಥೆಯ ಶಾಖೆ ತೆರೆಯಲು ಕೂಡ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ನಮ್ಮ ಬೇಡಿಕೆಗಳು ಈಡೇರುವ ನಿರೀಕ್ಷೆಯಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು