ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ ಹೈಟೆಕ್ ಸ್ಪರ್ಶ

6 ತಿಂಗಳಲ್ಲಿ ಬದಲಾಗಲಿದೆ ಸಂಪೂರ್ಣ ಸ್ವರೂಪ l 24x7 ಲ್ಯಾಬ್ ಸ್ಥಾಪನೆ
Last Updated 6 ಆಗಸ್ಟ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಬಡ ಕ್ಯಾನ್ಸರ್ ರೋಗಿಗಳಿಗೆ ಆಶಾಕಿರಣವಾಗಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಕಾರ್ಪೊರೇಟ್ ಆಸ್ಪತ್ರೆ ಮಾದರಿಯಲ್ಲಿ ಸ್ವರೂಪ ಬದಲಿಸಲಿದೆ. ನವೀಕರಣಕ್ಕೆ ಈಗಾಗಲೇ ನೀಲನಕ್ಷೆ ಸಿದ್ಧವಾಗಿದ್ದು, ಕಾಮಗಾರಿ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

1973ರಲ್ಲಿ ಆರಂಭವಾದ ಸಂಸ್ಥೆ ಹಂತಹಂತವಾಗಿ ಮೇಲ್ದರ್ಜೆಗೇರಿದ್ದು, ಪ್ರತಿವರ್ಷ 3 ಲಕ್ಷಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 24 ಎಕರೆ ಪ್ರದೇಶದಲ್ಲಿರುವ ಸಂಸ್ಥೆಗೆ ದಾನಿಗಳ ನೆರವಿನಿಂದ ಹೈಟೆಕ್‌ ಸ್ಪರ್ಶ ಸಿಗಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಬ್ಲಾಕ್‌ ಹಾಗೂ ಆಸ್ಪತ್ರೆಯ ಆವರಣವನ್ನು ನವೀಕರಿಸಲು ಯೋಜನೆ ಸಿದ್ಧಗೊಂಡಿದೆ.

₹50 ಕೋಟಿ ವೆಚ್ಚದಲ್ಲಿ ಇನ್ಫೊಸಿಸ್ ಪ್ರತಿಷ್ಠಾನದ ನೇತೃತ್ವದಲ್ಲಿ ಒಪಿಡಿ ಘಟಕದ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಉದ್ಘಾಟನೆಯಾಗಲಿದೆ.ಇದರಿಂದ ಸಹಜವಾಗಿಯೇ ಹಳೆಯ ಕಟ್ಟಡದಲ್ಲಿ ರೋಗಿಗಳ ದಟ್ಟಣೆ ಕಡಿಮೆಯಾಗಲಿದೆ. ಆದ್ದರಿಂದ ಹಳೆಯ ಕಟ್ಟಡ ಹಾಗೂ ಹೊರಾಂಗಣವನ್ನು ನವೀಕರಣ ಮಾಡುವ ಯೋಜನೆಯನ್ನು ಸಂಸ್ಥೆ ಕೈಗೆತ್ತಿಕೊಂಡಿದೆ.

‘ಆಸ್ಪತ್ರೆಯ ಮುಂಭಾಗದ ವಿನ್ಯಾಸ ಬದಲಾವಣೆಗೆ ಸಂಬಂಧಿಸಿದಂತೆ ಕ್ಲಾಸಿಕ್‌ ಗ್ರೂಪ್‌ನ ನವೀನ್ ನೀಲನಕ್ಷೆಯನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಡಿಸೈನ್‌ 3ಯ ಶ್ರೀನಿವಾಸ್ ರೆಡ್ಡಿ ವೆಚ್ಚದ ಅಂದಾಜನ್ನು ಸಿದ್ಧಪಡಿಸುತ್ತಿದ್ದಾರೆ. ಕಾಂಪೌಂಡ್‌ ಸಹ ನವೀಕರಣ ಮಾಡಲಾಗುತ್ತದೆ. ಆಸ್ಪತ್ರೆ ಆವರಣ ಹಾಗೂ ವಿವಿಧ ಕಟ್ಟಡಕ್ಕೆ ತೆರಳುವ ಮಾರ್ಗಗಳಿಗೆ ಬೀದಿ ದೀಪವನ್ನು ಅಳವಡಿಸಲಾಗುವುದು. ಎಂದು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ನಿರ್ದೇಶಕ ಡಾ.ಸಿ. ರಾಮಚಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

24 ಗಂಟೆಲ್ಯಾಬ್: ಕಿದ್ವಾಯಿ ಆವರಣದಲ್ಲಿ 24x7 ಅಣು ಜೀವಶಾಸ್ತ್ರ (ಮಾಲಿಕ್ಯೂಲರ್ ಬಯೋಲಾಜಿ) ಲ್ಯಾಬ್ ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದೆ. ಲ್ಯಾಬ್‌ ಆರಂಭಕ್ಕೆ ಹೊರಗುತ್ತಿಗೆ ನೀಡಲು ಸಂಸ್ಥೆ ನಿರ್ಧರಿಸಿದ್ದು, ಟೆಂಡರ್ ಕರೆಯಲಾಗಿದೆ.

‘ಲ್ಯಾಬ್‌ ಆರಂಭದಿಂದ ರೋಗಿಗಳಿಗೆ ಶೀಘ್ರವಾಗಿ ವರದಿಗಳು ಸಿಗಲಿದ್ದು, ಹೆಚ್ಚು ನಿಖರವಾಗಿರುತ್ತದೆ. ಗಂಥಿ ವಿಜ್ಞಾನಕ್ಕೆ ಇದು ಅತ್ಯಗತ್ಯ.ವಿಶೇಷ ಪರೀಕ್ಷೆಗಳಲ್ಲಿ ನಿಖರ ಫಲಿತಾಂಶ ಪಡೆಯಲು ಈ ಲ್ಯಾಬ್ ಸಹಾಯಕ. ರೋಗಿಗಳು ರಿಯಾಯಿತಿ ದರದಲ್ಲಿ ಪರೀಕ್ಷೆ ಮಾಡಿಸಿಕೊಂಡು, ಕೆಲವೇ ನಿಮಿಷದಲ್ಲಿ ವರದಿ ಪಡೆದುಕೊಳ್ಳಬಹುದು.ವಾರದ ಎಲ್ಲಾ ದಿನ ಈ ಲ್ಯಾಬ್‌ ಕಾರ್ಯನಿರ್ವಹಿಸುತ್ತದೆ’ ಎಂದು ರಾಮಚಂದ್ರ ಮಾಹಿತಿ ನೀಡಿದರು.

ಆಸ್ಪತ್ರೆಗೆ ರಾಜ್ಯದ ವಿವಿಧೆಡೆಯಿಂದಪ್ರತಿನಿತ್ಯ ಸರಾಸರಿ 1,200 ಹೊರರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ. ಅದೇ ರೀತಿ, 1,300 ಮಂದಿ ಒಳ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಖಾಲಿ ಜಾಗದಲ್ಲಿ ಗಿಡಗಳು

ನೆಲ್ಲಿ, ಬೇವು, ನೇರಳೆ, ಮಾವು, ಸಪೋಟ, ಸೀಬೆ ಸೇರಿದಂತೆ ವಿವಿಧ ಹಣ್ಣಿನ 2ಸಾವಿರ ಗಿಡವನ್ನು ಸಂಸ್ಥೆಯ ಆವರಣದಲ್ಲಿ ನೆಡಲಾಗಿದೆ. ಸಂಪಿಗೆ, ಗುಲಾಬಿ, ದಾಸವಾಳ, ಸೇವಂತಿಗೆ ಸೇರಿದಂತೆ ವಿವಿಧ ಜಾತಿಗಳ 4 ಸಾವಿರ ಹೂವಿನ ಗಿಡಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ.ಸಂಸ್ಥೆ ಆವರಣದಲ್ಲಿರುವಶಾಂತಿಧಾಮದ ಬಳಿ ಐದು ಎಕರೆ ಖಾಲಿ ಇದ್ದು, ಅಲ್ಲಿ ಗಿಡಗಳನ್ನು ಬೆಳೆಸಲಾಗುತ್ತದೆ ಎಂದು ರಾಮಚಂದ್ರ ಹೇಳಿದರು.

***

ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಕಟ್ಟಡದ ನವೀಕರಣ ಮಾಡಲು ಯೋಜನೆ ರೂಪಿಸಿದ್ದು, ಕಂಪನಿಗಳನ್ನು ಸಂಪರ್ಕಿಸುತ್ತಿದ್ದೇವೆ
- ಡಾ.ಸಿ. ರಾಮಚಂದ್ರ, ನಿರ್ದೇಶಕ, ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT