ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂವಿಧಾನ ತಿಳಿಯಲು, ಭಾರತ ಅರಿಯಿರಿ’

Last Updated 17 ಆಗಸ್ಟ್ 2019, 19:58 IST
ಅಕ್ಷರ ಗಾತ್ರ

ಬೆಂಗಳೂರು:‘ಭಾರತೀಯರ ಪವಿತ್ರ ಗ್ರಂಥ ಸಂವಿಧಾನ. ಅದನ್ನು ತಿಳಿಯಬೇಕೆಂದರೆ ಮೊದಲು ಭಾರತವನ್ನು ಅರಿಯಬೇಕು’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್‌ ಹೇಳಿದರು.

ದಲಿತ ಹಕ್ಕುಗಳ ಸಮಿತಿಯ ಬೆಂಗಳೂರು ದಕ್ಷಿಣ ಮತ್ತು ರಾಮನಗರ ಶಾಖೆಯು ‘ಸಂವಿಧಾನದ ಆಶಯ ಮತ್ತು ದಲಿತರು’ ವಿಷಯ ಕುರಿತು ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ‘ಸಂವಿಧಾನವನ್ನು ಓದುವ, ಅರ್ಥ ಮಾಡಿಕೊಳ್ಳುವ ಮತ್ತು ಅದರಂತೆ ನಡೆದುಕೊಳ್ಳುವ ಕಾರ್ಯವಾಗಬೇಕು’ ಎಂದರು.

‘ಸಂವಿಧಾನ ರಚನೆಯ ಮೂಲ ಉದ್ದೇಶ ಕಲ್ಯಾಣ ರಾಜ್ಯ ನಿರ್ಮಾಣ. ಅದರ ರಚನೆಗೆ ಮುನ್ನ, ದೇಶದಲ್ಲಿ ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು ಎರಡನೇ ದರ್ಜೆಯ ಪ್ರಜೆಗಳಂತೆ ಬದುಕುತ್ತಿದ್ದರು. ಆದರೆ, ದೇಶ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ದಲಿತರೊಬ್ಬರು ರಾಷ್ಟ್ರಪತಿ ಆಗಿದ್ದಾರೆ. ಇದಕ್ಕೆ ಕಾರಣ ನಮ್ಮ ಸಂವಿಧಾನ’ ಎಂದರು.

ಸಮಿತಿಯ ರಾಜ್ಯ ಸಹ ಸಂಚಾಲಕ ಬಿ.ರಾಜಶೇಖರ ಮೂರ್ತಿ, ‘ದಲಿತರ ಸಬಲೀಕರಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರತಿವರ್ಷ ಸಾವಿರಾರು ಕೋಟಿ ಅನುದಾನವನ್ನು ಬಜೆಟ್‍ನಲ್ಲಿ ಕಾಯ್ದಿರಿಸುತ್ತವೆ. ಆದರೆ, ಅದು ಅರ್ಹರಿಗೆ ತಲುಪದೇ ರಾಜಕಾರಣಿಗಳ ನಡುವೆಯೇ ಹಂಚಿ ಹೋಗುತ್ತಿದೆ’ ಎಂದು ಆರೋಪಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಭಾರತ ವಿಶ್ವಗುರುವಾಗುತ್ತಿದೆ ಎನ್ನುತ್ತಾರೆ. ಆದರೆ, ದೇಶದಲ್ಲಿ ಗಂಭೀರ ಸಮಸ್ಯೆಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಸ್ವಚ್ಛ ಭಾರತದ ಜಾಹೀರಾತಿಗಾಗಿ ₹500 ಕೋಟಿ ಖರ್ಚು ಮಾಡುವ ಅವರು, ನೈಜಸ್ವಚ್ಛಗಾರರಾದ ಪೌರ ಕಾರ್ಮಿಕರ ವಸತಿ ನಿರ್ಮಾಣ ಕಾರ್ಯಕ್ಕೆ ಕೇವಲ ₹40 ಕೋಟಿ ಖರ್ಚು ಮಾಡಿದ್ದಾರೆ. ದೇಶದಲ್ಲಿ ಉದ್ಯಮಿಗಳು ಬೆಳೆಯುತ್ತಿದ್ದು, ದಲಿತರು ಮತ್ತಷ್ಟು ಹೀನಾಯ ಸ್ಥಿತಿಗೆ ತಲುಪುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT