ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶ್ವರಪ್ಪ ವಿರುದ್ಧ ಹರಿಹಾಯ್ದ ಪ್ರಸನ್ನಕುಮಾರ್

ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ
Last Updated 21 ಏಪ್ರಿಲ್ 2018, 11:20 IST
ಅಕ್ಷರ ಗಾತ್ರ

ಶಿವಮೊಗ್ಗ: ಎಲ್ಲ ಜಾತಿ, ಧರ್ಮದ ಜನರನ್ನೂ ಗೌರವಿ ಸುವುದು ಕಾಂಗ್ರೆಸ್ ಸಿದ್ಧಾಂತ. ಆದರೆ, ಬಿಜೆಪಿಗೆ ಅಭಿವೃದ್ಧಿಯ ಚಿಂತೆಯಿಲ್ಲ. ಕೇವಲ ಹಿಂಧೂ ಧರ್ಮದ ಹೆ ಸರಿನಲ್ಲಿ ಮತ ಯಾಚಿಸುತ್ತಿದ್ದಾರೆ.  ಕಾಂಗ್ರೆಸ್ ಯಾವುದೇ ಒಂದು ಧರ್ಮ, ಜಾತಿ ಮುಂದಿಟ್ಟುಕೊಂಡು ಮತ ಕೇಳುವುದಿಲ್ಲ ಎಂದು ಶಾಸಕ ಕೆ.ಬಿ. ಪ್ರಸನ್ನಕುಮಾರ್ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಹರಿಹಾಯ್ದರು.

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ತಮಗೆ ಯಾರೂ ಪ್ರತಿಸ್ಪರ್ಧಿಗಳಿಲ್ಲ ಎಂದು ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಸ್ಪರ್ಧಿಗಳು ಇಲ್ಲದಿದ್ದರೆ ಚುನಾವಣಾ ಆಯೋಗದ ಮುಂದೆ ತೆರಳಿ ಪ್ರಮಾಣಪತ್ರ ತೆಗೆದುಕೊಂಡು ಬರಲಿ. ಸೋಲಿನ ಭಯದಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ಈಶ್ವರಪ್ಪ ಮಾತೆತ್ತಿದ್ದರೇ ಗೋವು ಅನ್ನುತ್ತಾರೆ. ಆದರೆ, ಅವರಿಗೆ ಗೋವಿನ ಬಗ್ಗೆ ಎಷ್ಟು ಭಕ್ತಿ, ಗೌರವವಿದೆ ಎಂಬುದು ಅವರ ನಡವಳಿಕೆ ತೋರಿಸುತ್ತದೆ. ಶಿವಮೊಗ್ಗ ಮಹಾವೀರ ಗೋಶಾಲೆಗೆ ಅವರು ಎಷ್ಟು ಹಣ ನೀಡಿದ್ದಾರೆ? ಹಲವು ವರ್ಷ ಶಾಸಕರಾಗಿ, ಮಂತ್ರಿಯಾಗಿ ಅವರ ಅವಧಿಯಲ್ಲಿ ಗೋ ಶಾಲೆಗೆ ಎಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು  ಬಹಿರಂಗ ಪಡಿಸಬೇಕು. ಇಪ್ಪತ್ತು ವರ್ಷ ಶಾಸಕರಾಗಿ, ಮಂತ್ರಿಯಾಗಿ ಶಿವಮೊಗ್ಗ ನಗರಕ್ಕೆ ನೀಡಿದ ಕೊಡುಗೆಯಾದರೂ ಏನು? ಪ್ರಾಪರ್ಟಿ ಕಾರ್ಡ್‌ ಜಾರಿಗೆ ತಂದು ನಾಗರಿಕರಿಗೆ ತೊಂದರೆ ನೀಡಿರುವುದೇ ಅವರ ಸಾಧನೆ.  ಅವರ ಅವಧಿಯಲ್ಲಿ ಶಿವಮೊಗ್ಗ ಅತಿ ಸೂಕ್ಷ್ಮ ಪ್ರದೇಶ ಎಂಬ ಕಳಂಕ ಹೊತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈಶ್ವರಪ್ಪ ಅವರ ಮನೆ ಮುಂದೆ ಸದಾ ಕಾಲ ಇರುವ ವ್ಯಕ್ತಿಯೊಬ್ಬರು ಆಚಾರ್ಯತ್ರಯರ ಭವನ ನಿರ್ಮಾಣಕ್ಕೆ ಅಡ್ಡಿಪಡಿಸಿದ್ದಾರೆ. ಈ ವಿಷಯ ಈಶ್ವರಪ್ಪ ಅವರ  ಗಮನಕ್ಕಿಲ್ಲವೇ?. ಆಚಾರ್ಯತ್ರಯರ ಬಗ್ಗೆ ಈಶ್ವರಪ್ಪರಿಗೆ ಭಕ್ತಿ ಇದ್ದರೆ ತಮ್ಮ ಬೆಂಬಲಿಗ ಸಲ್ಲಿಸಿದ್ದ ಅರ್ಜಿ ವಾಪಸ್ ಪಡೆಯುವಂತೆ ಹೇಳಬೇಕಿತ್ತು. ಆ ಪ್ರಯತ್ನ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

‘ನಾಗರಿಕರ ಆಶೀರ್ವಾದದಿಂದ ಶಾಸಕನಾಗಿ ನಗರದ ಸರ್ವಾಂಗೀಣ ಅಭಿವೃದ್ಧಿ‌ಗೆ ಹಲವಾರು ಯೋಜನೆ ರೂಪಿಸಿ ಜಾರಿಗೊಳಿಸಿದ್ದೇನೆ. ದೊರಕಿದ ಅವಕಾಶ ಸದುಪಯೋಗಪಡಿಸಿಕೊಂಡು ಒಳ್ಳೆಯ ಕೆಲಸ ಮಾಡಿದ ತೃಪ್ತಿ ನನಗಿದೆ‘ ಎಂದರು.

ಕಾರ್ಯಕರ್ತರ ಸಭೆ: ಏ. 21ರಂದು ಬೆಳಿಗ್ಗೆ 10ಕ್ಕೆ ನಗರದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿದೆ. ಸಭೆಯಲ್ಲಿ ಪಕ್ಷದ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಮುಖಂಡರಾದ ಎನ್. ರಮೇಶ್, ಎಸ್‌.ಕೆ. ಮರಿಯಪ್ಪ, ನಾಗರಾಜ್, ಪಂಡಿತ್‌ ವಿಶ್ವನಾಥ್, ವಿಜಯಲಕ್ಷ್ಮಿ ಪಾಟೀಲ್, ಆರೀಫ್ ವುಲ್ಲಾ, ಸುನೀತಾ ಯೋಗೀಶ್ ಗೌಡ, ಜಗನ್ನಾಥ, ಎಸ್‌.ಕೆ. ಶಿವಾನಂದ್ ಉಪಸ್ಥಿತರಿದ್ದರು.

23ಕ್ಕೆ ನಾಮಪತ್ರ ಸಲ್ಲಿಕೆ

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಏ. 23ರಂದು ನಾಮಪತ್ರ ಸಲ್ಲಿಸುತ್ತಿದ್ದಾರೆ. ಅಂದು ಬೆಳಿಗ್ಗೆ 11ಕ್ಕೆ ನಗರದ ಅಶೋಕ ವೃತ್ತದಿಂದ ಮೆರವಣಿಗೆ ಹೊರಟು ನಗರಪಾಲಿಕೆ ಆವರಣದಲ್ಲಿನ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT