ಬುಧವಾರ, ಮಾರ್ಚ್ 22, 2023
19 °C

15 ಕಡೆ ವಿದ್ಯಾರ್ಥಿ ನಿಲಯ: ಪ್ರಸ್ತಾವನೆ ಸಲ್ಲಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದಲ್ಲಿ ನಿವೇಶನ ಲಭ್ಯ ಇರುವ 15 ಕಡೆ ಆತ್ಮ ನಿರ್ಭರ ಯೋಜನೆಯಡಿ ವಿದ್ಯಾರ್ಥಿ ವಸತಿ ನಿಲಯ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ‍ಪೂಜಾರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ‘ರಾಜ್ಯದ ಎಲ್ಲೆಡೆಯಿಂದ ವಿದ್ಯಾರ್ಥಿಗಳು ಬೆಂಗಳೂರಿಗೆ ಬರುವ ಕಾರಣ ವಿದ್ಯಾರ್ಥಿ ನಿಲಯಗಳಿಗೆ ಬೇಡಿಕೆ ಹೆಚ್ಚಿದೆ. ಖಾಸಗಿ ಸಹಭಾಗಿತ್ವದಲ್ಲಿ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸುವ ಅಗತ್ಯವಿದೆ’ ಎಂದರು.‌

ಈಗಾಗಲೇ ಪ್ರಗತಿಯಲ್ಲಿರುವ 9 ವಸತಿ ನಿಲಯಗಳ ನಿರ್ಮಾಣ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ ಕಟ್ಟಡ ಹಸ್ತಾಂತರಿಸಲು ನಿರ್ಮಿತಿ ಕೇಂದ್ರದ ಅಧಿಕಾರಿಗೆ ಸೂಚಿಸಿದರು.

ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್ ಮೂಲಕ ಆಹಾರ ಪೂರೈಸಿದವರಿಗೆ ದ್ವಿಚಕ್ರ ವಾಹನ ಖರೀದಿಗೆ ದೇವರಾಜು ಅರಸು ನಿಗಮದಿಂದ ಸಹಾಯಧನ‌ ನೀಡಲಾಗುವುದು ಎಂದು ನಿಗಮದ ಅಧಿಕಾರಿ‌ ಸಭೆಗೆ ತಿಳಿಸಿದರು.‌

ವಿಧಾನ ಪರಿಷತ್ತಿನ ಸದಸ್ಯರಾದ ಪಿ.ಆರ್. ರಮೇಶ್, ರಮೇಶ್‌ಗೌಡ, ರವಿಕುಮಾರ್, ಅ. ದೇವೇಗೌಡ, ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ. ಮಹೇಶ್, ಜಿಲ್ಲಾಧಿಕಾರಿ ಜೆ.ಮಂಜುನಾಥ್ ಇದ್ದರು.

ದೇವಾಲಯಗಳ ಆಸ್ತಿ ಸಂರಕ್ಷಿಸಲು ಸೂಚನೆ
‘ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಮುಜರಾಯಿ ದೇವಾಲಯಗಳ ಆಸ್ತಿಗಳನ್ನು ಸಂರಕ್ಷಿಸುವುದು ಕಾರ್ಯನಿರ್ವಹಣಾ ಅಧಿಕಾರಿಗಳ ಜವಾಬ್ದಾರಿ’ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಮುಜರಾಯಿ ಇಲಾಖೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘ದೇವಾಲಯಗಳ ಸರ್ವೆ ಕಾರ್ಯ ಕೈಗೊಂಡು, ಗಡಿ ಗುರುತಿಸಿ, ಬೇಲಿ ಹಾಕಿ ರಕ್ಷಿಸಲು ಕೂಡಲೇ ಕಾರ್ಯಪ್ರವೃತ್ತರಾಗಬೇಕು’ ಎಂದು ಸೂಚಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.