ಶನಿವಾರ, ಜೂಲೈ 4, 2020
28 °C
ಸೋಂಕು ಹರಡದಂತೆ ಕಟ್ಟಿ ಹಾಕಿದ್ದಕ್ಕೆ ದಕ್ಕಿತು ಮನ್ನಣೆ: ದೇಶದ ನಾಲ್ಕು ಮಾದರಿ ನಗರಗಳಲ್ಲಿ ರಾಜಧಾನಿಗೂ ಸ್ಥಾನ

ಕೊರೊನಾ ನಿಯಂತ್ರಣಕ್ಕೆ ಬೆಂಗಳೂರೂ ಮಾದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ 19ನ ನಿರ್ವಹಣಾ ಕಾರ್ಯವನ್ನು ಪರಿಣಾಮಕಾರಿ ನಿಭಾಯಿಸಿದ ದೇಶದ ನಾಲ್ಕು ನಗರಗಳನ್ನು ಕೇಂದ್ರ ಸರ್ಕಾರ ಗುರುತಿಸಿದ್ದು, ಇದರಲ್ಲಿ ಬೆಂಗಳೂರು ನಗರವೂ ಸ್ಥಾನ ಪಡೆದಿದೆ.

‘ಬಿಬಿಎಂಪಿ, ಪೊಲೀಸ್‌ ಇಲಾಖೆ, ನಗರ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು, ವೈದ್ಯರು, ಪೌರಕಾರ್ಮಿಕರ ಅವಿರತ ಪ್ರಯತ್ನಕ್ಕೆ ಸಿಕ್ಕ ಮನ್ನಣೆ ಇದು. ನಾಗರಿಕರ ಸಹಕಾರವಿಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಅಭಿಪ್ರಾಯಪಟ್ಟರು. 

‘ದೇಶದಲ್ಲಿ ಕೋವಿಡ್‌ 19 ತಪಾಸಣೆಗೆ ಒಳಪಡಿಸಿದ ಸರಾಸರಿ ಶೇ 5ರಷ್ಟು ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದರೆ, ನಮ್ಮಲ್ಲಿಈ ಪ್ರಮಾಣ ಶೇ 1ರಷ್ಟು ಮಾತ್ರ ಇದೆ. ಅಂತರರಾಷ್ಟ್ರೀಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಬೆಂಗಳೂರು ನಗರ ಇದನ್ನು ಸಾಧಿಸಿದ್ದು ಸಣ್ಣ ವಿಚಾರವಲ್ಲ’ ಎಂದರು. 

ನಗರದಲ್ಲಿ ಮಾ. 8ರಂದು ಮೊದಲ ಪ್ರಕರಣ ಕಾಣಿಸಿಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಬಿಬಿಎಂಪಿ ವಿದೇಶಗಳಿಂದ ಬಂದವರನ್ನು ಗುರುತಿಸಿ ಅವರು ಮನೆಯಲ್ಲೇ ಪ್ರತ್ಯೇಕವಾಸ (ಕ್ವಾರಂಟೈನ್‌) ಅನುಭವಿಸುವಂತೆ ನೋಡಿಕೊಂಡಿತು. ಯಾವುದೇ ವ್ಯಕ್ತಿಗೆ ಸೋಂಕು ಪತ್ತೆಯಾದರೂ ಅವರ ಜೊತೆ ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿದವರನ್ನು ತಕ್ಷಣ ಪತ್ತೆಹಚ್ಚಿ ಅವರ ಸಾಂಸ್ಥಿಕ ಪ್ರತ್ಯೇಕವಾಸಕ್ಕೆ ಕ್ರಮಕೈಗೊಂಡಿತು.

‘ನಗರಕ್ಕೆ ಬಂದ 80 ಸಾವಿರ ಅಂತರರಾಷ್ಟ್ರೀಯ ಪ್ರವಾಸಿಗರನ್ನು ಪ್ರತ್ಯೇಕವಾಸಕ್ಕೆ ಒಳಪಡಿಸಿದ್ದೆವು. ಸೋಂಕಿತರ ಸಂಪರ್ಕ ಹೊಂದಿದವರ ಮೂಲಕ ಇತರರಿಗೆ ಸೋಂಕು ಹಬ್ಬದಂತೆ ತಡೆದೆವು. ಕೋವಿಡ್ 19 ದೃಢಪಟ್ಟವರು ವಾಸವಿದ್ದ ಜಾಗವನ್ನು ಕಂಟೈನ್‌ಮೆಂಟ್‌ ಪ್ರದೇಶವನ್ನು ಗುರುತಿಸಿ ಸೋಂಕು ಬೇರೆಡೆ ಹರಡದಂತೆ ನಿಯಂತ್ರಿಸಿದೆವು. ಇವೆಲ್ಲವೂ ಯಶಸ್ಸಿಗೆ ಕಾರಣ’ ಎನ್ನುತ್ತಾರೆ ಆಯುಕ್ತರು.

ಪ್ರಕರಣ ಕಾಣಿಸಿಕೊಂಡ ಕೂಡಲೇ ವಿಶೇಷ ಆಯುಕ್ತ ರವಿಕುಮಾರ್‌ ಸುರಪುರ ಹಾಗೂ ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ಕೆ ವಿಜಯೇಂದ್ರ ನೇತೃತ್ವದ ತಂಡವು, ಸೋಂಕು ಹರಡುವಿಕೆ ತಡೆಯಲು ಅನುಸರಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಮಾರ್ಗದರ್ಶಿ ಸೂತ್ರ ತಯಾರಿಸಿತ್ತು. ಅದರ ಅನುಷ್ಠಾನಕ್ಕೆ ಬಿಬಿಎಂಪಿ ಆಡಳಿತ ಯಂತ್ರ ಹಗಲಿರುಳು ಶ್ರಮಿಸಿತ್ತು.

‘1 ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ನಗರಗಳಲ್ಲಿ ಸೋಂಕು ಹಬ್ಬಿರುವ ಪ್ರಮಾಣವನ್ನು ಪರಿಗಣಿಸಿದರೆ ಈ ರೋಗ ನಿಯಂತ್ರಣದಲ್ಲಿ ನಾವು ಜಗತ್ತಿನಲ್ಲೇ ಮುಂಚೂಣಿಯಲ್ಲಿದ್ದೇವೆ. ಸೋಂಕು ಹಬ್ಬಿದ ಬಳಿಕ ನಿಯಂತ್ರಣ ಮಾಡುವ ಬದಲು ಸೋಂಕು ಹರಡದಂತೆ ತಡೆಯಲು ಆದ್ಯತೆ ನೀಡಿದ್ದೇ ನಮ್ಮ ಯಶಸ್ಸಿನ ಗುಟ್ಟು’ ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು