ಸೋಮವಾರ, ಜನವರಿ 24, 2022
21 °C

‘ಭ್ರಷ್ಟಾಚಾರದ ಬೆಳವಣಿಗೆ ಮೂರು ಪಟ್ಟು ಹೆಚ್ಚು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘2018ರ ಚುನಾವಣೆಯ ಹೊಸ್ತಿಲಿನಲ್ಲಿ ಪ್ರಧಾನಿ ಮೋದಿ ಅವರು, ಸಿದ್ದರಾಮಯ್ಯನವರದ್ದು 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಹೀಯಾಳಿಸಿದ್ದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಮಿಷನ್ ಶೇ 40 ದಾಟಿದ್ದು, ಭ್ರಷ್ಟಾಚಾರದ ಬೆಳವಣಿಗೆ ಮೂರು ಪಟ್ಟು ಹೆಚ್ಚಾಗಿಸಿದ್ದು ಅವರ ‍ಪಕ್ಷದ ಹೆಮ್ಮೆಯ ಸಾಧನೆ’ ಎಂದು ಕೆಪಿಸಿಸಿ ವಕ್ತಾರ ಪ್ರೊ.ಬಿ.ಕೆ. ಚಂದ್ರಶೇಖರ್‌ ವ್ಯಂಗ್ಯವಾಡಿದ್ದಾರೆ.

‘ರಾಜಕೀಯ ಪಕ್ಷಗಳ ಬದಲು ಕರ್ನಾಟಕದ ಗುತ್ತಿಗೆದಾರರ ಸಂಘವೇ ಪ್ರಧಾನಿಯವರಿಗೆ ಪತ್ರ ಬರೆದು ರಾಜ್ಯದ ವಿವಿಧ ಇಲಾಖೆಗಳಲ್ಲಿ ಶೇ 40ರಷ್ಟು ಲಂಚ ಕೊಡದೇ ಕಾಮಗಾರಿಗಳ ಟೆಂಡರ್‌ ಹಾಗೂ ಬಿಲ್‌ಗಳನ್ನು ಅನುಮೋದಿಸುತ್ತಿಲ್ಲ ಎಂದು ದೂರಿತ್ತಿದ್ದಾರೆ. ರಾಜ್ಯದ ಚರಿತ್ರೆಯಲ್ಲಿ ಹೊಸ ದಾಖಲೆ. ‘ಬಿಟ್‌ ಕಾಯಿನ್‌’ ಹಗರಣದ ಬೆನ್ನಲ್ಲೇ ಬಂದಿರುವ ಈ ನಿರ್ಭೀತ ಆಪಾದನೆ ರಾಜ್ಯದ ಬಿಜೆಪಿ ಸರ್ಕಾರ, ಕೆಲವು ಸಂಸತ್‌ ಸದಸ್ಯರು, ಕೆಲವು ಶಾಸಕರು ಮತ್ತು ಎಲ್ಲ ಹಂತದ ಅಧಿಕಾರಿಗಳೂ ತಲೆ ತಗ್ಗಿಸುವಂತೆ ಮಾಡಿದೆ’ ಎಂದು ಅವರು ಹೇಳಿದ್ದಾರೆ.

‘ಗುತ್ತಿಗೆದಾರರ ಆರೋಪ ಈ ಹಿಂದಿನ ಸರ್ಕಾರದ ಅವಧಿಗೆ ಸೀಮಿತವಾಗಿರುವುದು ಸರಿಯೇ. ಆದರೆ, ಕಳೆದ ನಾಲ್ಕು ತಿಂಗಳಿನಲ್ಲಿ ಬೊಮ್ಮಾಯಿ ಅವರಿಗೆ ವಿಷಯ ತಿಳಿದಿರಲಿಲ್ಲವೆಂದರೂ, ಅವರು ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಗೃಹ ಸಚಿವರಾಗಿದ್ದವರು. ಹಾಗಿದ್ದಾಗ ಶೇ 40ರ ಕಮಿಷನ್‌ ವ್ಯವಹಾರ ಅವರ ಗಮನಕ್ಕೆ ಬರದಿರಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿರುವ ಅವರು, ‘ಈ ಬಗ್ಗೆ ಅಧಿಕಾರಿಗಳಿಂದ ತನಿಖೆ ನಡೆಸುವ ಬದಲು, ಆಯೋಗವೊಂದನ್ನು ನೇಮಿಸುವುದು ಸೂಕ್ತ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು