ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್‌.ಮಾರುಕಟ್ಟೆ: ಮುಗಿಯದ ಕಾಮಗಾರಿ; ತಪ್ಪದ ಕಿರಿಕಿರಿ

ಕಿರಿದಾಗಿರುವ ರಸ್ತೆ: ವಾಹನಗಳ ಪರಿವೆಯೇ ಇಲ್ಲದೆ ರಸ್ತೆಯಲ್ಲಿ ಓಡಾಡುವ ನಾಗರಿಕರು
Last Updated 20 ನವೆಂಬರ್ 2021, 5:43 IST
ಅಕ್ಷರ ಗಾತ್ರ

ಬೆಂಗಳೂರು: ಕಿರಿದಾದ ರಸ್ತೆ. ಅದರ ಇಕ್ಕೆಲಗಳಲ್ಲೇ ನಿಂತಿರುವ ಹಣ್ಣು, ತರಕಾರಿ ತುಂಬಿದ ಗಾಡಿಗಳು. ಅಲ್ಲಲ್ಲಿ ಬಿದ್ದಿರುವ ಮಾರುದ್ದದ ಗುಂಡಿಗಳು. ಅವುಗಳಲ್ಲಿ ಸಂಗ್ರಹವಾಗಿರುವ ಮಳೆ ನೀರು. ಆ ಹಾದಿಯಲ್ಲಿ ಸಾಗಲು ಹರಸಾಹಸ ಪಡುತ್ತಿರುವ ವಾಹನ ಸವಾರರು...

ನಗರದ ಕೇಂದ್ರ ಸ್ಥಾನದಲ್ಲಿರುವ ಕೆ.ಆರ್‌.ಮಾರುಕಟ್ಟೆಯನ್ನೊಮ್ಮೆ ಸುತ್ತು ಹಾಕಿದರೆ ಕಾಣುವ ದೃಶ್ಯಗಳಿವು.

ಕಲಾಸಿಪಾಳ್ಯ, ಚಾಮರಾಜಪೇಟೆ, ವಿ.ವಿ.ಪುರ, ರಾಮಕೃಷ್ಣ ಆಶ್ರಮ, ಹನುಮಂತನಗರ, ಶ್ರೀನಿವಾಸನಗರ, ಕತ್ರಿಗುಪ್ಪೆ, ಬ್ಯಾಟರಾಯನಪುರ, ಸ್ಯಾಟಲೈಟ್‌ ಬಸ್‌ ನಿಲ್ದಾಣ, ಬನಶಂಕರಿ, ವಿಜಯನಗರ, ಬಾಪೂಜಿನಗರ, ದೀಪಾಂಜಲಿನಗರ, ಮೈಸೂರು ರಸ್ತೆ, ಕೆಂಗೇರಿ... ಹೀಗೆ ನಗರದ ನಾನಾ ಸ್ಥಳಗಳಿಂದ ಅಗತ್ಯ ವಸ್ತುಗಳ ಖರೀದಿ ಸೇರಿದಂತೆ ಅನೇಕ ಕಾರ್ಯಗಳಿಗಾಗಿ ನಿತ್ಯವೂ ಸಾವಿರಾರು ಜನ ಕೃಷ್ಣರಾಜ ಮಾರುಕಟ್ಟೆಗೆ ಬರುತ್ತಾರೆ. ಹೀಗಾಗಿ ಮಾರುಕಟ್ಟೆಯಿಂದ ಈ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ವಾಹನಗಳಿಂದ ಗಿಜಿಗುಡುತ್ತಿರುತ್ತವೆ.

ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆಯ ಸಮಯದಲ್ಲಿ ಈ ರಸ್ತೆಗಳಲ್ಲಿ ಸಾಗುವುದೇ ಸವಾಲು. ಸಾಲುಗಟ್ಟಿ ನಿಲ್ಲುವ ವಾಹನಗಳು, ಮಂದಗತಿಯಲ್ಲಿ ಚಲಿಸುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಖರೀದಿಗೆ ಬರುವ ಜನ ಸಮಯಕ್ಕೆ ಸರಿಯಾಗಿ ಶಾಲೆ, ಕಚೇರಿ ಹಾಗೂ ಮನೆಗೆ ತಲುಪಲಾಗದೆ ಪರಿತಪಿಸುವಂತಾಗಿದೆ. ವಿಕ್ಟೋರಿಯಾ, ವಾಣಿ ವಿಲಾಸ ಹಾಗೂ ಮಿಂಟೊ ಆಸ್ಪತ್ರೆಗಳು ಮಾರುಕಟ್ಟೆಗೆ ಹೊಂದಿಕೊಂಡಂತೆಯೇ ಇವೆ. ಸಂಚಾರ ದಟ್ಟಣೆಯಿಂದಾಗಿ ರೋಗಿಗಳನ್ನು ತುರ್ತು ಚಿಕಿತ್ಸೆಗಾಗಿ ಈ ಆಸ್ಪತ್ರೆಗಳಿಗೆ ಸಾಗಿಸುವುದೂ ಸವಾಲಾಗಿ ಪರಿಣಮಿಸಿದೆ.

ಸ್ಮಾರ್ಟ್‌ಸಿಟಿ ಕಾಮಗಾರಿ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಒಂದು ಬದಿಯನ್ನು ಅಗೆದು ಹಾಗೇ ಬಿಡಲಾಗಿದೆ. ಹೀಗಾಗಿ ಕಾರ್ಪೊರೇಷನ್‌ ವೃತ್ತ ಹಾಗೂ ಜೆ.ಸಿ.ರಸ್ತೆ ಮೂಲಕ ಮಾರುಕಟ್ಟೆ ಪ್ರವೇಶಿಸುವ ವಾಹನ ಸವಾರರು ಉಸಿರು ಬಿಗಿ ಹಿಡಿದೇ ಸಾಗಬೇಕಿದೆ. ಮಾರುಕಟ್ಟೆಯಿಂದ ಮೈಸೂರು ರಸ್ತೆ ಹಾಗೂ ಸಿಸಿಬಿ ಕಚೇರಿಯೆಡೆ ಹೋಗುವವರು ಗುಂಡಿಗಳ ನಡುವೆ ಬಂಡಿ ಚಲಾಯಿಸಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕರು ಆಯತಪ್ಪಿ ಬಿದ್ದು ಗಾಯಗೊಂಡಿರುವ ನಿದರ್ಶನಗಳೂ ಸಾಕಷ್ಟಿವೆ.

‘ಕೋವಿಡ್ ಸಮಯದಲ್ಲಿ ರಸ್ತೆಗಳನ್ನು ಅಗೆಯಲಾಗಿತ್ತು. ಒಂದೂವರೆ ವರ್ಷವಾಗುತ್ತಾ ಬಂದರೂ ಕಾಮಗಾರಿ ಮುಗಿದಿಲ್ಲ. ಪಾದಚಾರಿ ಮಾರ್ಗವೂ ಪರಿಪೂರ್ಣಗೊಂಡಿಲ್ಲ. ಹೀಗಾಗಿ ಜನ ಕಿರಿದಾದ ರಸ್ತೆಯಲ್ಲೇ ನಡೆದುಕೊಂಡು ಹೋಗುವುದು ಸಾಮಾನ್ಯವಾಗಿದೆ. ಅದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ’ ಎಂದು ಅಂಗಡಿ ಮಾಲೀಕ ಅಲಿ ಹೇಳಿದರು.

‘20 ವರ್ಷಗಳಿಂದ ಅಂಗಡಿ ನಡೆಸುತ್ತಿದ್ದೇನೆ. ನಾನು ಅಂಗಡಿ ಆರಂಭಿಸಿದ್ದಾಗ ಮೇಲ್ಸೇತುವೆಯೇ ಇರಲಿಲ್ಲ. ಆಗ ವಾಹನಗಳು ಕಡಿಮೆ ಇದ್ದಿದ್ದರಿಂದ ದಟ್ಟಣೆಯೂ ಏರ್ಪಡುತ್ತಿರಲಿಲ್ಲ. ಈಗ ವಾಹನಗಳು ಹೆಚ್ಚಾಗಿವೆ. ಆಗಾಗ ರಸ್ತೆ ಸೇರಿ ಇತರ ಕಾಮಗಾರಿಗಳೂ ನಡೆಯುತ್ತಿರುತ್ತವೆ. ಹೀಗಾಗಿ ದಟ್ಟಣೆ ಉಂಟಾಗುತ್ತಿದೆ’ ಎಂದೂ ತಿಳಿಸಿದರು.

ಮೇಲ್ಸೇತುವೆ ಇದ್ದರೂ ತಗ್ಗದ ದಟ್ಟಣೆ
ಕಾರ್ಪೊರೇಷನ್‌ ವೃತ್ತ ಹಾಗೂ ಜೆ.ಸಿ.ರಸ್ತೆಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸಲು ಮಾರುಕಟ್ಟೆಯ ಬಳಿ ಮೇಲ್ಸೇತುವೆ ನಿರ್ಮಿಸಲಾಗಿದೆ. ಹೀಗಿದ್ದರೂಸಂಚಾರ ದಟ್ಟಣೆ ನಿಯಂತ್ರಿಸುವುದು ಸವಾಲಾಗಿ ಪರಿಣಮಿಸಿದೆ.

‘ರಸ್ತೆ ಕಾಮಗಾರಿ ನಡೆಯುತ್ತಿರುವುರಿಂದ ಗೂಡ್‌ಶೆಡ್‌ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಹೀಗಾಗಿ ಮೈಸೂರು ರಸ್ತೆ ಕಡೆಯಿಂದ ಮಾರುಕಟ್ಟೆ, ರವೀಂದ್ರ ಕಲಾಕ್ಷೇತ್ರ, ಟೌನ್‌ ಹಾಲ್‌, ಮೆಜೆಸ್ಟಿಕ್‌ ಹಾಗೂ ಎಂ.ಜಿ.ರಸ್ತೆಗೆ ಬರುವವರು ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯನ್ನೇ ಆಶ್ರಯಿಸಬೇಕಾಗಿದೆ. ಇದರಿಂದಾಗಿ ಹಿಂದೆಂದಿಗಿಂತಲೂ ಹೆಚ್ಚು ವಾಹನ ದಟ್ಟಣೆ ಏರ್ಪಡುತ್ತಿದೆ’ ಎಂದು ಸಂಚಾರ ಪೊಲೀಸ್‌ ಸಿಬ್ಬಂದಿಯೊಬ್ಬರು ತಿಳಿಸಿದರು.

ರಸ್ತೆಯಲ್ಲೇ ಬಿಎಂಟಿಸಿ ಬಸ್‌ಗಳ ನಿಲುಗಡೆ
‘ಬಿಎಂಟಿಸಿ ಹಾಗೂ ಖಾಸಗಿ ಬಸ್‌ಗಳನ್ನು ರಸ್ತೆಯಲ್ಲೇ ನಿಲುಗಡೆ ಮಾಡುತ್ತಾರೆ. ಸಂಚಾರ ದಟ್ಟಣೆಗೆ ಇದು ಪ್ರಮುಖ ಕಾರಣ’ ಎಂದು ಕಲಾಸಿಪಾಳ್ಯದ ಕೋಟೆ ಬೀದಿ ನಿವಾಸಿ ದಿನೇಶ್‌ ಹೇಳಿದರು.

‘ಸಂಚಾರ ಪೊಲೀಸರು ಧ್ವನಿವರ್ಧಕದ ಮೂಲಕ ಕೂಗಿ ಹೇಳಿದರೂ ಬಸ್‌ಗಳು ಕದಲುವುದಿಲ್ಲ. ಕೆಲವರು ಪಾದಚಾರಿ ಮಾರ್ಗದಲ್ಲೇ ಗಾಡಿಗಳನ್ನು ನಿಲ್ಲಿಸಿ ವ್ಯಾಪಾರ ಮಾಡುತ್ತಿರುತ್ತಾರೆ. ಹೀಗಾಗಿ ಪಾದಚಾರಿಗಳು ವಾಹನಗಳ ಪರಿವೆಯೇ ಇಲ್ಲದೆ ರಸ್ತೆಯಲ್ಲಿ ಓಡಾಡುತ್ತಿರುತ್ತಾರೆ. ಇದರಿಂದಾಗಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ. ಅಪಘಾತಗಳಾಗುವ ಅಪಾಯವೂ ಇದೆ’ ಎಂದು ತಿಳಿಸಿದರು.

*

ವಿಸ್ತಾರವಾದ ರಸ್ತೆಗಳಿದ್ದರೆ ಯಾವ ಸಮಸ್ಯೆಯೂ ಇರುವುದಿಲ್ಲ. ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುತ್ತಿರುವುದು ಸ್ವಾಗತಾರ್ಹ. ಅದನ್ನು ನಿಗದಿತ ಸಮಯದಲ್ಲೇ ಪೂರ್ಣಗೊಳ್ಳಬೇಕು.
-ಅಲಿ, ಅಂಗಡಿ ಮಾಲೀಕ

*

ಅಲ್ಲಲ್ಲಿ ರಸ್ತೆಗಳನ್ನು ಅಗೆಯಲಾಗಿದೆ. ಮಾರುದ್ದದವರೆಗೆ ಗುಂಡಿಗಳೂ ಬಿದ್ದಿವೆ. ಅವುಗಳನ್ನು ಮುಚ್ಚುವ ಕೆಲಸ ಆಗಿಲ್ಲ. ಈ ಹಾದಿಯಲ್ಲಿ ಸಂಚರಿಸುವುದೇ ಕಷ್ಟ.
-ಅಶೋಕ್, ಸ್ಥಳೀಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT