ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್.ಪುರ ತಾಲ್ಲೂಕು ಕಚೇರಿ ಸಮಸ್ಯೆಗಳ ಆಗರ

Published 16 ಮೇ 2023, 20:31 IST
Last Updated 16 ಮೇ 2023, 20:31 IST
ಅಕ್ಷರ ಗಾತ್ರ

-ಶಿವರಾಜ್ ಮೌರ್ಯ

ಕೆ.ಆರ್.ಪುರ: ಅಧಿಕಾರಿಗಳ ನಿರಾಸಕ್ತಿಯಿಂದ ಕೆ.ಆರ್.ಪುರದ ಬೆಂಗಳೂರು ಪೂರ್ವ ತಾಲ್ಲೂಕು ಕಚೇರಿಯಲ್ಲಿ ಮೂಲಸೌಕರ್ಯಗಳು ಮರೀಚಿಕೆಯಾಗಿದ್ದು, ದಿನನಿತ್ಯ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಕೆ.ಆರ್.ಪುರದ ಕೇಂದ್ರ ಬಿಂದು ಪೂರ್ವ ತಾಲ್ಲೂಕು ಕಚೇರಿ ಹೆಸರಿಗಷ್ಟೇ ತಾಲ್ಲೂಕು ಎಂಬ ಹೆಗ್ಗಳಿಕೆ. ಆದರೆ ಮೂಲಸೌಕರ್ಯಗಳೇ ಇಲ್ಲ. ರೇಷ್ಮೆ ಇಲಾಖೆ, ಭೂ ದಾಖಲೆ, ತೋಟಗಾರಿಕೆ, ಆಹಾರ ಇಲಾಖೆ, ಹಕ್ಕು ದಾಖಲೆ ಪತ್ರ ಇಲಾಖೆ ಸೇರಿದಂತೆ ಹತ್ತಾರು ಇಲಾಖೆ ಒಳಗೊಂಡಿದೆ.

ತಾಲ್ಲೂಕು ಕಚೇರಿಗೆ ಭೂದಾಖಲೆ, ಪಹಣಿ, ಜಾತಿ ಮತ್ತು ಆದಾಯ ಹಾಗೂ ಪಿಂಚಣಿ ಸೌಲಭ್ಯ ಸೇರಿದಂತೆ ಒಂದಿಲ್ಲೊಂದು ಕೆಲಸಕ್ಕಾಗಿ ಮಹದೇವಪುರ, ಸರ್ವಜ್ಞನಗರ, ಸಿ.ವಿ.ರಾಮನ್ ನಗರ ಹಾಗೂ ಕೆ.ಆರ್.ಪುರದಿಂದ ಪ್ರತಿನಿತ್ಯ ನೂರಾರು ಜನರು ಕಚೇರಿಗೆ ಬಂದು ಹೋಗುತ್ತಾರೆ.

ತಾಲ್ಲೂಕು ಕಚೇರಿಯಲ್ಲಿನ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇರುತ್ತದೆ. ಆದರೆ, ಬರುವ ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸಲು ಯಾರೂ ಮುಂದೆ ಬರುತ್ತಿಲ್ಲ. ಇಲ್ಲಿ ಕನಿಷ್ಠ  ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಕಟ್ಟಡ ನಿರ್ಮಾಣಗೊಂಡು ಅನೇಕ ವರ್ಷ ಕಳೆದಿದ್ದರೂ ನೀರಿನ ವ್ಯವಸ್ಥೆ ಕಲ್ಪಿಸದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಪಟ್ಟಂದೂರು ಅಗ್ರಹಾರ ಮಂಜುನಾಥ್ ದೂರಿದರು.

ದಣಿದು ಬರುವ ಸಾರ್ವಜನಿಕರ ದಾಹ ನೀಗಿಸಿಕೊಳ್ಳಲು ಕುಡಿಯುವ ನೀರಿಲ್ಲ. ಬೇಸಿಗೆ ಕಾಲದಂತೂ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ನೀರಿನ ಬಾಟಲ್ ತೆಗೆದುಕೊಂಡು ಬರಬೇಕಿದೆ. ಕುಳಿತು ಕೊಳ್ಳಲು ಆಸನಗಳ ವ್ಯವಸ್ಥೆ ಇಲ್ಲ. ಅಧಿಕಾರಿಗಳನ್ನು ಭೇಟಿ ಮಾಡಲು ಬರುವ ಹಿರಿಯ ನಾಗರಿಕರಿಗೆ ಕುಳಿತುಕೊಳ್ಳಲು ಸರಿಯಾದ ಆಸನದ ವ್ಯವಸ್ಥೆ ಇಲ್ಲ. ಇದರಿಂದ ಅಂಗವಿಕಲರು ಮತ್ತು ವಯಸ್ಸಾದ ಹಿರಿಯ ನಾಗರಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಹೇಳಿದರು.

ಸಾರ್ವಜನಿಕರಿಗೆ ನಿರ್ಮಿಸಿರುವ ಶೌಚಾಲಯಗಳ ಸ್ಥಿತಿ ಕೇಳುವಂತೆಯೇ ಇಲ್ಲ. ಕೊಳಕು ಶೌಚಾಲಯದಿಂದ ಪರಿಸ್ಥಿತಿ ಹದಗೆಡುವಂತೆ ಮಾಡಿದೆ. ಇಲ್ಲಿನ ಶೌಚಾಲಯವನ್ನು ಬಳಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ನೈಸರ್ಗಿಕ ಕರೆ ನೀಗಿಸಿಕೊಳ್ಳಲು ನಿತ್ಯವೂ ಪರದಾಡುವಂತಾಗಿದೆ. ಕಾಲ ಕಾಲಕ್ಕೆ ಶುಚಿಗೊಳಿಸುತ್ತಿಲ್ಲ. ದುರ್ನಾತ ಬೀರುತ್ತಿದ್ದು, ಪುರುಷರು ತಾಲ್ಲೂಕು ಕಚೇರಿಯ ಆವರಣದ ಗೋಡೆ, ಖಾಲಿ ಜಾಗದ ಪೊದೆಗಳನ್ನು ಅವಲಂಬಿಸಿದ್ದಾರೆ. ಆದರೆ, ಮಹಿಳೆಯರ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ದಿಲೀಪ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಕಚೇರಿ
ತಾಲ್ಲೂಕು ಕಚೇರಿ
ಸುಣ್ಣಬಣ್ಣವಿಲ್ಲದ ಗೊಡೆಗಳು ಪಾಚಿಕಟ್ಟಿಕೊಂಡಿರುವುದು
ಸುಣ್ಣಬಣ್ಣವಿಲ್ಲದ ಗೊಡೆಗಳು ಪಾಚಿಕಟ್ಟಿಕೊಂಡಿರುವುದು
ದಿಲೀಪ್ ಕುಮಾರ್
ದಿಲೀಪ್ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT