ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ಬಿಡುವು: ಕೃಷಿ ಮೇಳಕ್ಕೆ ಲಕ್ಷಾಂತರ ಜನ

Last Updated 13 ನವೆಂಬರ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ನಡೆಯುತ್ತಿರುವ ಕೃಷಿ ಮೇಳದ ಮೊದಲೆರಡು ದಿನಗಳಿಗೆ ಹೋಲಿಸಿದರೆ, ಶನಿವಾರ ಮಳೆಯ ಕಾಟ ಇರಲಿಲ್ಲ. ಹಾಗಾಗಿ, ಜನರ ದಂಡು ಜಿಕೆವಿಕೆ ಆವರಣದಲ್ಲಿ ತುಂಬಿ ತುಳುಕಾಡುತ್ತಿತ್ತು. ಮೇಳಕ್ಕೆ ಮೂರನೇ ದಿನವಾದ ಶನಿವಾರ ಲಕ್ಷಾಂತರ ಜನ ಭೇಟಿ ನೀಡಿದರು.

ಮೊದಲ ದಿನ ಮಳೆಯು ಎಡೆಬಿಡದೆ ಸುರಿದ ಕಾರಣ ಮೇಳ ವೀಕ್ಷಿಸಲು ಬಂದ ಜನರ ಸಂಖ್ಯೆ ಕಡಿಮೆ ಇತ್ತು. ಎರಡನೇ ದಿನ ಹನಿಯುತ್ತಿದ್ದ ಮಳೆಯ ನಡುವೆಯೂ ಜನ ಮೇಳದತ್ತ ಹೆಜ್ಜೆಹಾಕಿದ್ದರು. ಮೂರನೇ ದಿನ ಭೇಟಿ ನೀಡಿದವರ ಸಂಖ್ಯೆ ಲಕ್ಷ ದಾಟಿತು.

ಮಳೆಯಿಂದ ಪ್ರದರ್ಶನ ಮಳಿಗೆಗಳು, ಭೋಜನಾಲಯ ಹಾಗೂ ಪ್ರದರ್ಶನ ತಾಕುಗಳು ಕೆಸರುಮಯವಾಗಿವೆ. ಕೆಸರಿನ ನಡುವೆಯೇ ಜನ ಮೇಳವನ್ನು ವೀಕ್ಷಿಸಿದರು. ತೋಟದಲ್ಲಿದ್ದ ತರಹೇವಾರಿ ಹೂವಿನ ಗಿಡಗಳ ಬಳಿ ನಿಂತು ಹಲವರು ಸೆಲ್ಫಿ ಕ್ಲಿಕ್ಕಿಸಿಕೊಂಡರು.

ಮೇಳದಲ್ಲಿರುವ 550 ಮಳಿಗೆಗಳಲ್ಲಿ ಕೃಷಿ ಉತ್ಪನ್ನಗಳ ಖರೀದಿ ಭರಾಟೆಯೂ ಜೋರಾಗಿತ್ತು. ಜನಸಂದಣಿ ಹೆಚ್ಚಾಗಿದ್ದರಿಂದ ಅವರನ್ನು ನಿಯಂತ್ರಿಸಲು‍ಪೊಲೀಸರೂ ಹರ ಸಾಹಸಪಟ್ಟರು. ಜಿಕೆವಿಕೆ ಆವರಣದಿಂದ ಮೇಳದವರೆಗೆ ಕಲ್ಪಿಸಲಾಗಿದ್ದ ಉಚಿತ ಸಾರಿಗೆ ವ್ಯವಸ್ಥೆ ಬಳಕೆಗೆ ನೂಕುನುಗ್ಗಲು ಕಂಡು ಬಂತು.

ಮೇಳಕ್ಕೆ ವಿವಿಧ ಜಿಲ್ಲೆಗಳ ರೈತರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಕೃಷಿ ತಜ್ಞರೊಂದಿಗೆ ನೇರವಾಗಿ ಚರ್ಚಿಸಿ, ಕೃಷಿ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸಲು ತಜ್ಞರಿಂದ ಸಲಹೆ ಪಡೆದುಕೊಂಡರು. ಮೇಳದಲ್ಲಿದ್ದ ವಿಶೇಷ ಕೋಳಿ ತಳಿಗಳು, ಅಲಂಕಾರಿಕ ಮೀನುಗಳು, ಕೃಷಿ ವಸ್ತು ಪ್ರದರ್ಶನಗಳ ಬಳಿ ಹೆಚ್ಚು ಜನ ಸೇರಿದ್ದರು.

ಅಲಂಕಾರಿಕ, ತೋಟಗಾರಿಕೆ ಹಾಗೂ ವಿವಿಧ ಸಸಿಗಳ ಮಾರಾಟ ಮಳಿಗೆಗಳ ಬಳಿಯೂ ಜನ ಮುಗಿಬಿದ್ದಿದ್ದರು. ತಮಗೆ ಬೇಕಾದ ಸಸಿಗಳನ್ನು ವಾಹನಗಳಲ್ಲಿ ಕೊಂಡೊಯ್ದರು. ಔಷಧ ಸಿಂಪಡಣೆಗಾಗಿ ಬಾಡಿಗೆ ಡ್ರೋನ್‌, ವಿವಿಧ ಗಾತ್ರಗಳ ಟ್ರ್ಯಾಕ್ಟರ್‌, ಕೃಷಿ ಯಂತ್ರೋಪಕರಣಗಳ ಬಗ್ಗೆ ರೈತರು ಮಾಹಿತಿ ಪಡೆದುಕೊಂಡರು.

48 ರೈತ ಸಾಧಕರಿಗೆ ಪ್ರಶಸ್ತಿ: ಹಾಸನ, ಮಂಡ್ಯ ಮತ್ತು ಕೋಲಾರ ಜಿಲ್ಲೆಗಳ ಅತ್ಯುತ್ಯಮ ರೈತ, ರೈತ ಮಹಿಳೆ, ಪ್ರಗತಿಪರ ರೈತ, ಯುವ ರೈತ, ಯುವರೈತ ಮಹಿಳೆ ಹಾಗೂ ಅತ್ಯುತ್ತಮ ವಿಜ್ಞಾನ ಲೇಖನಗಳಿಗೆ ಆರ್.ದ್ವಾರಕೀನಾಥ್ ಮತ್ತು ಪ್ರೊ.ಬಿ.ವಿ. ವೆಂಕಟರಾವ್ ಪ್ರಶಸ್ತಿ ಸೇರಿ 48 ಸಾಧಕರಿಗೆ ಕೃಷಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಎತ್ತಿನ ಬಂಡಿ ಸವಾರಿ ಮಾಡಿದ ಸಚಿವೆ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಕೃಷಿ ಮೇಳಕ್ಕೆ ಶನಿವಾರ ಮಧ್ಯಾಹ್ನ ಭೇಟಿ ನೀಡಿದರು.ಮೇಳದ ಆಕರ್ಷಣೆಯಾಗಿದ್ದ ಎತ್ತಿನ ಬಂಡಿಯಲ್ಲಿ ಕುಳಿತು ಸವಾರಿ ಮಾಡಿದರು. ಅಲ್ಲಿ ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣಕ್ಕೆ ಅವರು ತೆರಳಲಿಲ್ಲ. ಮೇಳದಲ್ಲಿದ್ದ ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿ ಅವುಗಳ ಮಾಹಿತಿ ಪಡೆದುಕೊಂಡರು. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆ ಸಮಯ ಕಳೆದರು.

ಅಂಕಿ ಅಂಶ

3 ಲಕ್ಷ:ಮೇಳಕ್ಕೆ ಶನಿವಾರ ಭೇಟಿ ನೀಡಿದವರು

12.96 ಲಕ್ಷ:ಆನ್‌ಲೈನ್‌ ಮೂಲಕ ವೀಕ್ಷಿಸಿದವರು

8 ಸಾವಿರ:ರಿಯಾಯಿತಿ ದರದಲ್ಲಿ ಪೂರೈಸಿದ ಭೋಜನ ಸ್ವೀಕರಿಸಿದವರು

703:ಕೃಷಿ ಸಂಬಂಧಿತ ಸಲಹೆ ಪಡೆದ ರೈತರು

ಮೇಳದಲ್ಲಿ ವಾಹನ ದಟ್ಟಣೆ

ಮೇಳಕ್ಕೆ ಶನಿವಾರ ಹೆಚ್ಚು ಜನ ಬಂದಿದ್ದರಿಂದ ಜಿಕೆವಿಕೆ ಆವರಣದ ರಸ್ತೆಗಳಲ್ಲಿ ವಾಹನದಟ್ಟಣೆ ಅಧಿಕವಾಗಿತ್ತು. ಮೋಡ ಕವಿದ ವಾತಾವರಣ ಇದ್ದಿದ್ದರಿಂದ ಹಲವರು ಕಾರುಗಳಲ್ಲೇ ಮೇಳಕ್ಕೆ ಬಂದಿದ್ದರು. ಇದರಿಂದ ಕಾರುಗಳ ಸಂಚಾರ ಅಧಿಕವಾಗಿತ್ತು. ಆವರಣದ ಪ್ರವೇಶದ್ವಾರದ ಸಮೀಪವೇ ಇರುವ ಮೈದಾನದಲ್ಲಿ ಕಾರು ನಿಲುಗಡೆಗೆ ಸ್ಥಳ ನಿಗದಿ ಮಾಡಲಾಗಿತ್ತು.

ಮಧ್ಯಾಹ್ನದ ವೇಳೆಗೆ ಮೈದಾನದ ತುಂಬಾ ಕಾರುಗಳು ಭರ್ತಿಯಾಗಿದ್ದವು. ಇತ್ತ ಮೇಳ ನಡೆಯುವ ಅಕ್ಕಪಕ್ಕದ ಸ್ಥಳಗಳಲ್ಲಿ ದ್ವಿಚಕ್ರ ವಾಹನ ನಿಲುಗಡೆಯೂ ಹೆಚ್ಚಾಗಿತ್ತು. ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಹಾಗೂ ಕೃಷಿ ವಿಶ್ವವಿದ್ಯಾಲಯದ ಸಿಬ್ಬಂದಿ ಹರಸಾಹಸಪಟ್ಟರು.

ರೇಷ್ಮೆ ಕೃಷಿ ಮಾರ್ಗದರ್ಶಿ ಬಿಡುಗಡೆ ಇಂದು

ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ‘ರೇಷ್ಮೆಕೃಷಿ ಆಧುನಿಕ ಬೇಸಾಯ ಪದ್ಧತಿಗಳು’ ಎಂಬ ಮಾರ್ಗದರ್ಶಿಯನ್ನು ಹೊರ ತಂದಿದ್ದು ನ.14ರಂದು ನಡೆಯಲಿರುವ ಕೃಷಿ ಮೇಳದ ಸಮಾರೋಪದಲ್ಲಿ ಬಿಡುಗಡೆಗೊಳ್ಳಲಿದೆ.

ರೇಷ್ಮೆ ಕೃಷಿಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನೆಗಳು, ತಲಘಟ್ಟಪುರದ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಮೈಸೂರಿನ ಕೇಂದ್ರೀಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಗಳ ಸಂಶೋಧನೆಗಳನ್ನು ಒಗ್ಗೂಡಿಸಿ ರೇಷ್ಮೆ ಇಲಾಖೆಯ ಉಪಯುಕ್ತ ಮಾಹಿತಿಯನ್ನು ಒಂದೇ ಮಾರ್ಗದರ್ಶಿಯಲ್ಲಿ ಒದಗಿಸಿದೆ.

ಹಿಪ್ಪುನೇರಳೆ ಬೇಸಾಯ, ರೇಷ್ಮೆಹುಳು ಸಾಕಣೆ ತಂತ್ರಜ್ಞಾನ, ರೇಷ್ಮೆ ಕೃಷಿಯಲ್ಲಿ ಯಾಂತ್ರೀಕರಣ, ಹಿಪ್ಪುನೇರಳೆ ತೋಟದಲ್ಲಿ ಮಣ್ಣಿನ ನಿರ್ವಹಣೆ, ವಿವಿಧ ಕಚೇರಿಗಳ ಮಾಹಿತಿಯನ್ನು ಈ ಮಾರ್ಗದರ್ಶಿ ಒಳಗೊಂಡಿದೆ. ಆಸಕ್ತರು ಈ ಪುಸ್ತಕವನ್ನು ಜಿಕೆವಿಕೆಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದಿಂದ ಪಡೆಯಬಹುದು.

ಪಿಡಿಎಫ್‌ ಮೂಲಕವೂ ಈ ಮಾರ್ಗದರ್ಶಿಯನ್ನು ರೇಷ್ಮೆ ಬೆಳೆಗಾರರ ಮೊಬೈಲ್‌ಗೆ ವಾಟ್ಸ್‌ಆ್ಯಪ್‌ ಮೂಲಕ ರವಾನಿಸಲಾಗುವುದು. ಆಸಕ್ತರು 9535355329 ಸಂಖ್ಯೆಗೆ ಮನವಿ ಸಲ್ಲಿಸಬಹುದು. ವಿಶ್ವವಿದ್ಯಾಲಯದ ವೆಬ್‌ಸೈಟ್‌ www.uasbangalore.edu.in ಹಾಗೂ ‘e-Krishi AGRI Portal’ನಲ್ಲೂ ಇದು ಲಭ್ಯ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT