ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮೇಳ: ₹ 6 ಲಕ್ಷ ಬೆಲೆಯ ಕುರಿ!

ಮೇಳದಲ್ಲಿ ‘ಡಾರ್ಪರ್‌’, ‘ಡುಂಬ’, ‘ಬಂಡೂರು’ ಕುರಿ ತಳಿಗಳ ಆಕರ್ಷಣೆ
Last Updated 3 ನವೆಂಬರ್ 2022, 22:14 IST
ಅಕ್ಷರ ಗಾತ್ರ

ಬೆಂಗಳೂರು: ಚರ್ಮಗಂಟು ರೋಗದ ಕಾರಣಕ್ಕೆ ಬೆಂಗಳೂರು ಕೃಷಿ ವಿವಿ ಆಯೋಜಿಸಿರುವ ‘ಕೃಷಿ ಮೇಳ’ದಲ್ಲಿ ಜಾನುವಾರು ಪ್ರದರ್ಶನಕ್ಕೆ ನಿರ್ಬಂಧ ಹೇರಿರುವುದು ರೈತರಿಗೆ ನಿರಾಸೆ ಮೂಡಿಸಿದ್ದರೂ ಮೇಳದಲ್ಲಿನ ವಿದೇಶಿ ಹಾಗೂ ದೇಶೀಯ ಕುರಿ ತಳಿಗಳು ಆಕರ್ಷಿಸುತ್ತಿವೆ. ಅವುಗಳ ಬೆಲೆ ಕೇಳಿದರೂ ಒಮ್ಮೆ ಅಚ್ಚರಿ ಆಗಲಿದೆ. ಒಂದಕ್ಕಿಂತ ಮತ್ತೊಂದು ತಳಿಗಳು ಭಿನ್ನವಾಗಿವೆ.

ಈ ತಳಿಗಳನ್ನು ಮಾಂಸಕ್ಕಾಗಿ ಸಾಕಣೆ ಮಾಡುವುದು ಕಡಿಮೆ ಆಗಿದ್ದರೂ ತಳಿಯ ಅಭಿವೃದ್ಧಿಗೆ ವಿವಿಧ ಫಾರಂನಲ್ಲಿ ಸಾಕಾಣಿಕೆ ಮಾಡಲಾಗುತ್ತಿದೆ. ಅವುಗಳನ್ನು ವೀಕ್ಷಿಸಬೇಕಿದ್ದರೆ ಜಿ.ಕೆ.ವಿ.ಕೆ ಆವರಣಕ್ಕೆ ಬರಬೇಕು.

ಮೇಳದಲ್ಲಿ ₹ 6 ಲಕ್ಷ ಮೌಲ್ಯದ ದಕ್ಷಿಣ ಆಫ್ರಿಕಾ ಮೂಲದ ‘ಡಾರ್ಪರ್‌’ ಕುರಿ ತಳಿ, ₹ 2 ಲಕ್ಷ ಬೆಲೆಯ ‘ಡುಂಬ’ ಕುರಿ ತಳಿ ಗಮನ ಸೆಳೆಯುತ್ತಿದೆ.

ಇದರೊಂದಿಗೆ ಮಂಡ್ಯ ಜಿಲ್ಲೆಯ ದಾಸನದೊಡ್ಡಿಯ ಪಾಪಣ್ಣಗೌಡ ಕುರಿ ಫಾರಂನ ಬಂಡೂರು ಕುರಿಯೂ ಮೇಳದಲ್ಲಿದೆ. ಬಂಡೂರದ ಮರಿಗೆ ₹ 15ರಿಂದ ₹ 20 ಸಾವಿರ ಬೆಲೆಯಿದ್ದರೆ ದೊಡ್ಡಗಾತ್ರದ ಕುರಿಗೆ ₹ 80ರಿಂದ ₹ 90 ಸಾವಿರದ ತನಕ ಬೆಲೆಯಿದೆ ಎನ್ನುತ್ತಾರೆ ಸಾಕಾಣಿಕೆದಾರರು.

‘ರೈತರ ಪಾಲಿಗೆ ಕುರಿಗಳು ನಡೆದಾಡುವ ಬ್ಯಾಂಕ್‌ಗಳು...’ ಎಂದೇ ಕರೆಯಲಾಗುತ್ತಿದ್ದು ಮೇಳದಲ್ಲಿ ಎತ್ತರ ಚಿತ್ತ ಇವುಗಳತ್ತ ಹರಿದಿದೆ.

1930ರಲ್ಲಿ ಡಾರ್ಸಟ್‌ ಹಾನ್ಸ್ ಹಾಗೂ ಕಪ್ಪುತಲೆ ಪರ್ಶಿಯನ್‌ ಕುರಿ ಯಿಂದ ಡಾರ್ಪರ್‌ ತಳಿ ಅಭಿವೃದ್ಧಿ ಪಡಿಸಲಾಗಿದೆ. ಯಲಹಂಕದ ಮಾರೇನಹಳ್ಳಿಯ ಸಿಂಚನಾ ಮೇಕೆ, ಕುರಿ ಫಾರಂ, ತುಮಕೂರು ಜಿಲ್ಲೆ ಸುಂಕ ದಹಳ್ಳಿಯ ಬಿಆರ್‌ಎಸ್‌ ಫಾರಂನಿಂದ ಡಾರ್ಪರ್‌ ತಳಿ ತರಲಾಗಿದೆ.

‘ಡಾರ್ಪರ್‌ ತಳಿ ಕುರಿಯಲ್ಲೇ ಉತ್ಕೃಷ್ಟ ತಳಿ. ಇವುಗಳಿಗೆ ಕೊಂಬು ಇರುವುದಿಲ್ಲ. ಉದ್ದನೆ ದೇಹಾಕೃತಿ ಹೊಂದಿದ್ದು, ಕಡಿಮೆ ಕೂದಲು ಇರಲಿದೆ. ಕುರಿ ಬೆಳೆದಂತೆ ಕೂದಲು ಉದುರಿ ಬೀಳಲಿದೆ’ ಎಂದು ಕುರಿ ಸಾಕಾಣಿಕೆದಾರ ಸತೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ತಳಿಯನ್ನು ಮಾಂಸ ಹಾಗೂ ಆಸಕ್ತಿಗೆ ಸಾಕಾಣಿಕೆ ಮಾಡುತ್ತಾರೆ. ಡಾರ್ಪರ್‌ ತನ್ನ ದೇಹದ ತೂಕವನ್ನು 3ರಿಂದ 4 ತಿಂಗಳಲ್ಲಿಯೇ 30ರಿಂದ 40 ಕೆ.ಜಿಯಷ್ಟು ಹೆಚ್ಚಿಸಿಕೊಳ್ಳತ್ತವೆ. ಕೊಬ್ಬು ಕಡಿಮೆ. ಮಾಂಸ ಮೃದು. ಕಡಿಮೆ ಸಮಯದಲ್ಲಿ ಖಾದ್ಯ ತಯಾರಿಸಲು ಸಾಧ್ಯ. ಹೆಣ್ಣುಕುರಿ 70ರಿಂದ 80 ಕೆ.ಜಿಯಿದ್ದರೆ, ಗಂಡು ಕುರಿ ಕೆ.ಜಿ.ಯಷ್ಟು ಇರಲಿದೆ’ ಎಂದು ಹೇಳಿದರು.

ಮಾಂಸ ಸೇವನೆಯಿಂದ ರೋಗ ದೂರ: ‘ಡುಂಬ ಕುರಿಗಳು ಉತ್ತಮ ದೇಹ ರಚನೆ, ಉದ್ದವಾದ ಕಾಲು ಹಾಗೂ ದಪ್ಪ ಬಾಲದ ಜತೆಗೆ ಬಿಳಿ ಬಣ್ಣವನ್ನು ಹೊಂದಿದೆ. ಇದರ ಮಾಂಸ ಸೇವನೆಯಿಂದ ಪಾರ್ಶ್ವವಾಯು ಹಾಗೂ ಹೃದ್ರೋಗ ಅಪಾಯ ಕಡಿಮೆ ಆಗಲಿದೆ’ ಎಂದು ಕುರಿ ಸಾಕಾಣಿಕೆದಾರರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT