ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿಗೆ ಬೆಳಕಾಗುವ ಬಯಲು ವಿಶ್ವವಿದ್ಯಾಲಯ: ಕೃಷ್ಣಮೂರ್ತಿ ಹನೂರು

Last Updated 17 ಜನವರಿ 2023, 21:37 IST
ಅಕ್ಷರ ಗಾತ್ರ

ಯಲಹಂಕ: ‘ಆಧುನಿಕ ವಿಶ್ವವಿದ್ಯಾಲಯಗಳಿಗಿಂತ ನಮ್ಮ ಬದುಕಿಗೆ ಬೇಕಾದ ಬೆಳಕು ಬಯಲು ವಿಶ್ವವಿದ್ಯಾಲಯದಲ್ಲಿಯೇ ಅಗಾಧವಾಗಿದೆ’ ಎಂದು ಜಾನಪದ ತಜ್ಞ ಹಾಗೂ ಮೈಸೂರು ವಿವಿಯ ಮಂಟೇಸ್ವಾಮಿ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಕೃಷ್ಣಮೂರ್ತಿ ಹನೂರು ಅಭಿಪ್ರಾಯಪಟ್ಟರು.

ಕೆ.ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ಸ್ವಾಯತ್ತ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ ‘ಕನ್ನಡ ಸಾಹಿತ್ಯದಲ್ಲಿ ಶಾಂತಿ ಮತ್ತು ಸಾಮರಸ್ಯದ ನೆಲೆಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ‘ಆಧುನಿಕ ನಗರಗಳಲ್ಲಿ ವಿಸ್ತಾರವಾದ ನಾಡು ಕಾಣುವುದಿಲ್ಲ; ನಗರಗಳ ಹೊರಗೆ ನಡೆದು ನೋಡಿದಾಗ ನಿಜವಾದ ಹಾಗೂ ನಡೆದಷ್ಟೂ ನಾಡು ಕಾಣುತ್ತದೆ. ನಾವು ನಡೆಯುತ್ತಾ ನೋಡುವುದರ ಜೊತೆಗೆ ನೋಡುತ್ತಾ ಅರಿಯಬೇಕು. ಆ ಮೂಲಕ ನಮ್ಮ ಬದುಕು ಸದಾ ಬೆಳಗುವಂತಾಗುತ್ತದೆ’ ಎಂದರು.

ಜಾನಪದ ಲೋಕವು ದೇಹ ಅಥವಾ ಧರ್ಮ ಪರಾಕ್ರಮವನ್ನು ಎಂದೂ ಮಾನ್ಯ ಮಾಡಲಿಲ್ಲ. ಶಾಸ್ತ್ರೀಯ ಕವಿಗಳೂ ಒಂದೊಂದು ಧರ್ಮದ ಪರವಾಗಿ ಕಾವ್ಯ ಬರೆದರೂ ಅವಕಾಶವಿದ್ದ ಕಡೆಯಲ್ಲಿ ಯುದ್ಧರಹಿತ ಜನಮನಗಳನ್ನು ಕಟ್ಟುವಂತಹ ನುಡಿಗಳನ್ನು ಆಡಿ ಶಾಂತಿ ಹಾಗೂ ಸಾಮರಸ್ಯಕ್ಕಾಗಿ ಆಶಿಸಿದ್ದರು ಎಂದು ತಿಳಿಸಿದರು.

ವಿಚಾರ ಸಂಕಿರಣದ ಭಾಗವಾಗಿ ನಾಡಿನ ಹಲವಾರು ವಿದ್ವಾಂಸರು, ಪ್ರಾಧ್ಯಾಪಕರು ಹಾಗೂ ಸಂಶೋಧಕರು ರಚಿಸಿದ್ದ ಪ್ರಬಂಧಗಳನ್ನು ಒಳಗೊಂಡ ‘ಕನ್ನಡ ಅಸ್ಮಿತೆ: ಶಾಂತಿ ಮತ್ತು ಸಾಮರಸ್ಯ’, ‘ಅರಿವಿನೊಳಗಣ ಬೆರಗು’, ‘ಕನ್ನಡ ನೋಟ ಶಾಂತಿಯತೋಟ’ ಎಂಬ ಮೂರು ಕೃತಿಗಳನ್ನು ಹನೂರು ಬಿಡುಗಡೆ ಮಾಡಿದರು. ಕ್ರೈಸ್ಟ್ ಕಾಲೇಜಿನಲ್ಲಿ ಒಂದು ಕಾಲಕ್ಕೆ ಚಿ.ಶ್ರೀನಿವಾಸರಾಜು ಅವರು ಮಾಡಿದ ಕನ್ನಡ ಸೇವೆಯನ್ನು ಕ್ರಿಸ್ತು ಜಯಂತಿ ಕಾಲೇಜು ಮುಂದುವರಿಸುತ್ತಿರುವುದನ್ನು ಶ್ಲಾಘಿಸಿದರು.

ಸಂಸ್ಕೃತಿ ಚಿಂತಕ ಪ್ರೊ.ರಹಮತ್ ತರೀಕೆರೆ ಮಾತನಾಡಿ, ‘ಭಾರತದ ದಾರ್ಶನಿಕ ಪರಂಪರೆಯಲ್ಲಿ ನಿರಂತರವಾಗಿ ಸಹನೆಯ ಬಗ್ಗೆ ಮತ್ತೆ ಮತ್ತೆ ಮಾತನಾಡಿಕೊಂಡೇ ಬರಲಾಗುತ್ತಿದ್ದು, ಶಾಂತಿ ಮತ್ತು ಸಾಮರಸ್ಯವು ಇಂದಿನ ಕಾಲದ ಬಹುದೊಡ್ಡ ಬಾಯಾರಿಕೆ ಹಾಗೂ ಆಪೇಕ್ಷೆ ಆಗಿದೆ. ನಮ್ಮ ದೇಶದಲ್ಲಿ ಇನ್ನೊಬ್ಬರ ಆಹಾರ, ಭಾಷೆ, ಉಡುಗೆ-ತೊಡುಗೆ, ಆಲೋಚನೆಗಳ ಮೇಲೆ ಅಮಾನುಷ ವಾದ ಆಕ್ರಮಣ ನಡೆಯುತ್ತಿದೆ’ ಎಂದು ಅವರು ತಿಳಿಸಿದರು.

ಮಾನವಿಕ ವಿಭಾಗದ ಡೀನ್ ಡಾ.ಗೋಪಕುಮಾರ್ ಎ.ವಿ, ಡಾ.ಎಂ.ಭೈರಪ್ಪ, ಪ್ರೊ.ಚಂದ್ರಶೇಖರ್.ಎನ್, ಡಾ.ರವಿಶಂಕರ್ ಎ.ಕೆ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT