ಸೋಮವಾರ, ಸೆಪ್ಟೆಂಬರ್ 23, 2019
26 °C
ಪಿಒಪಿ ಗಣೇಶ: ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ದಿಢೀರ್‌ ದಾಳಿ

6 ಗೋದಾಮು ಮುಟ್ಟುಗೋಲು

Published:
Updated:
Prajavani

ಬೆಂಗಳೂರು: ನಗರದ ವಿವಿಧೆಡೆ ಗಣೇಶ ವಿಗ್ರಹ ಸಂಗ್ರಹಿಸಿಟ್ಟಿದ್ದ ಗೋದಾಮುಗಳಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ (ಕೆಎಸ್‌ಪಿಸಿಬಿ) ಕೆ. ಸುಧಾಕರ್ ನೇತೃತ್ವದ ತಂಡ ಶನಿವಾರ ಬೆಳಿಗ್ಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿತು.

‘ಪ್ಲಾಸ್ಟರ್ ಆಫ್ ಪ್ಯಾರಿಸ್‌’ (ಪಿಒಪಿ) ಬಳಸಿ ವಿಗ್ರಹ ತಯಾರಿಸುತ್ತಿದ್ದ ಆರು ಗೋದಾಮುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು. 

ಕುಂಬಳಗೋಡಿನ ವಿನಾಯಕ ಆ್ಯಂಡ್ ಕಂಪನಿ ಗೋದಾಮಿಗೆ ತಂಡವು ಭೇಟಿ ನೀಡಿದಾಗ ಅದಕ್ಕೆ ಬೀಗ ಹಾಕಿತ್ತು. ಸಿಬ್ಬಂದಿಯಿಂದ ಬೀಗ ತೆಗೆಸಿದ ಸುಧಾಕರ್, ಅದರ ಒಳಗಿದ್ದ ಭಾರಿ ಗಾತ್ರದ ಪಿಒಪಿ ಗಣೇಶ ವಿಗ್ರಹಗಳನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದರು. 

ಕೆಂಗೇರಿಯ ಗೊಲ್ಲಹಳ್ಳಿ, ತಿಟ್ಟನಹಳ್ಳಿ ಸೇರಿದಂತೆ 6 ಗೋದಾಮುಗಳಿಗೆ ಭೇಟಿ ನೀಡಿದರು. ಈ ವೇಳೆ ರಾಸಾಯನಿಕ ಬಣ್ಣಲೇಪಿತ 20 ಸಾವಿರಕ್ಕೂ ಅಧಿಕ ವಿಗ್ರಹಗಳು ಹಾಗೂ ಇತರ ಬಣ್ಣ ಬಳಸಿದ 4,500 ವಿಗ್ರಹಗಳು ಕಂಡು ಬಂದವು. ಪಿಒಪಿ ಗಣೇಶ ವಿಗ್ರಹಗಳಿರುವ ಎಲ್ಲ ಗೋದಾಮುಗಳನ್ನು ಮುಚ್ಚಿಸಲು ಅಧಿಕಾರಿಗಳಿಗೆ ಮಂಡಳಿ ಅಧ್ಯಕ್ಷರು ಆದೇಶಿಸಿದರು. 

‘ಪಿಒಪಿ ಗಣೇಶ ವಿಗ್ರಹದಿಂದ ಪರಿಸರ ಮಾಲಿನ್ಯವಾಗುತ್ತಿದೆ. ಎಲ್ಲ ಪಿಒಪಿ ವಿಗ್ರಹವನ್ನು ವಶಕ್ಕೆ ಪಡೆಯಲಾಗುವುದು. ಇನ್ನು ಮುಂದೆ ಪಿಒಪಿ ಗಣೇಶ ವಿಗ್ರಹ ತಯಾರಿಸಿದರೆ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು’ ಎಂದು ಅಧ್ಯಕ್ಷರು ತಿಳಿಸಿದರು. 

‘ಪಿಒಪಿಯಿಂದ ತಯಾರಿಸಿದ ಗಣೇಶ ವಿಗ್ರಹ ಮಾರಾಟ ಮಾಡುವ ವ್ಯಾಪಾರಿಗಳ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳುವ ಮೂಲಕ
ಶೇ 85ರಷ್ಟಾದರೂ ನಿಷೇಧಕ್ಕೆ ಪ್ರಯತ್ನ ಮಾಡುತ್ತೇವೆ’ ಎಂದರು.

‘ಸಂಘ–ಸಂಸ್ಥೆಗಳು ಜಿದ್ದಿಗೆ ಬಿದ್ದು, ಎತ್ತರವಾದ ಗಣೇಶ ವಿಗ್ರಹವನ್ನು ಬಡಾವಣೆಗಳಲ್ಲಿ ಪ್ರತಿಷ್ಠಾಪಿಸುತ್ತವೆ. ಈ ವರ್ಷ ಇದಕ್ಕೂ ಕಡಿವಾಣ ಹಾಕಲಿದ್ದೇವೆ. ಮಣ್ಣಿನ ವಿಗ್ರಹವನ್ನು ಎಷ್ಟು ಅಡಿ ಎತ್ತರ ಮಾಡಿಸಿದರೂ ಅಭ್ಯಂತರವಿಲ್ಲ. ಆದರೆ, 5 ಅಡಿಗಿಂತ ಎತ್ತರದ ಮಣ್ಣಿನ ವಿಗ್ರಹ ವಿಸರ್ಜನೆ ಕಷ್ಟ. ಇಂತಹ ವಿಗ್ರಹಗಳ ವಿಸರ್ಜನೆಗೆ ಪ್ರತ್ಯೇಕವಾಗಿ ಕಲ್ಯಾಣಿ ನಿರ್ಮಿಸಲಾಗುತ್ತದೆ’ ಎಂದು ತಿಳಿಸಿದರು. 

‘ಒಂದೂವರೆ ತಿಂಗಳಿನಿಂದ ಅಧಿಕಾರಿಗಳು ಪಿಒಪಿ ವಿಗ್ರಹ ನಿಯಂತ್ರಣದ ವಿಚಾರವಾಗಿ ನಗರದ ವಿವಿಧೆಡೆ ದಾಳಿ ನಡೆಸಿದ್ದು, 168 ವಿಗ್ರಹವನ್ನು ವಶಪಡಿಸಿಕೊಂಡಿದ್ದಾರೆ.ಮಹಾರಾಷ್ಟ್ರ, ಆಂಧ್ರಪ್ರದೇಶ ಗಡಿ ಮೂಲಕ ರಾಜ್ಯ ಪ್ರವೇಶಿಸುವ ವಿಗ್ರಹವನ್ನು ಪರಿಶೀಲನೆ ಮಾಡಲು ಪೊಲೀಸ್ ಇಲಾಖೆ ಹಾಗೂ ಸಾರಿಗೆ ಆಯುಕ್ತರಿಗೆ ಮನವಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು. 

‘ಗಣೇಶ ವಿಗ್ರಹ ವಿಸರ್ಜನೆಗೆ ಈ ಬಾರಿ ಮಂಡಳಿಯಿಂದ ಕೂಡಾ ಐದು ಮೊಬೈಲ್ ಟ್ಯಾಂಕ್‌ಗಳ ವ್ಯವಸ್ಥೆ ಮಾಡಲಾಗುತ್ತದೆ. ನಗರದ 30 ಪ್ರದೇಶಗಳಲ್ಲಿ ಈ ವಾಹನ ಸಂಚರಿಸಲಿದೆ. ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿದ ವಿಗ್ರಹಗಳನ್ನು ಮಾತ್ರ ಈ ಮೊಬೈಲ್ ಟ್ಯಾಂಕ್‌ನಲ್ಲಿ ವಿಸರ್ಜನೆ ಮಾಡಲು ಅವಕಾಶ ನೀಡಲಾಗುತ್ತದೆ’ ಎಂದು ಸುಧಾಕರ್ ಮಾಹಿತಿ ನೀಡಿದರು. 

‘ಮೊಬೈಲ್‌ ಟ್ಯಾಂಕ್‌ನ ಮುಂಭಾಗದಲ್ಲಿ ಕಲಾವಿದರನ್ನೊಳಗೊಂಡ ವಾಹನ ಸಾಗಲಿದೆ. ನಮ್ಮ ಸಂಸ್ಕೃತಿ ಹಾಗೂ ಧಾರ್ಮಿಕ ಆಚರಣೆ ಒಳಗೊಂಡ ಸ್ತಬ್ಧ ಚಿತ್ರಗಳು ಸಹ ಈ ವಾಹನದಲ್ಲಿ ಕಾಣಬಹುದು. ಪುರೋಹಿತರು ಕೂಡಾ ವಾಹನದಲ್ಲಿ ಇರುತ್ತಾರೆ. ಹಬ್ಬದ ದಿನ, ಮೂರನೇ ದಿನ, ಐದನೇ ದಿನ, ಏಳನೇ ದಿನ ಹಾಗೂ ಒಂಬತ್ತನೇ ದಿನ ವಾಹನ ಸಂಚರಿಸಲಿದೆ’ ಎಂದರು.

ಮಾಹಿತಿಗೆ ಮೊಬೈಲ್‌ ಆ್ಯಪ್‌

‘ವಾಹನಗಳಲ್ಲಿ ನಿರ್ಮಿಸಿದ ತೊಟ್ಟಿ ಬಗ್ಗೆ ಮಾಹಿತಿ ಪಡೆಯಲು ಪ್ರತ್ಯೇಕ ಮೊಬೈಲ್‌ ಆ್ಯಪ್‌ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಂಡು ನೋಂದಣಿ ಮಾಡಿಕೊಂಡರೆ ಇಂತಹ ವಾಹನಗಳು ಎಲ್ಲಿ ನಿಲ್ಲಿಸಲಾಗುತ್ತದೆ ಎಂಬ ಮಾಹಿತಿ ಲಭಿಸುತ್ತದೆ. ನೋಂದಣಿ ಮಾಡಿಕೊಂಡವರ ಪ್ರದೇಶಕ್ಕೆ ಆ ವಾಹನ ಬರುವ ಮುನ್ನ ಮೊಬೈಲ್‌ನಲ್ಲಿ ಸೂಚನೆ ಬರಲಿದೆ. ಇದರ ಆಯ್ಕೆ ‘ಬುಕ್‌ ಮೈ ಶೋ’ದಲ್ಲಿ ಸಹ ಕಾಣಿಸಿಕೊಳ್ಳಲಿದೆ. ಮೊಬೈಲ್‌ ಟ್ಯಾಂಕ್‌ಗೆ ಜಿಪಿಎಸ್ ಅಳವಡಿಕೆ ಮಾಡಲಾಗುತ್ತದೆ’ ಎಂದು ಮಂಡಳಿಯ ಪರಿಸರ ಅಧಿಕಾರಿ ಸೈಯದ್ ಖಾಜಾ ಮಾಹಿತಿ ನೀಡಿದರು. 

‘ವಾಹನದಲ್ಲಿನ ಈ ತೊಟ್ಟಿ 12 ಅಡಿ ಉದ್ದ ಹಾಗೂ 3 ಅಡಿ ಅಗಲ ಇರಲಿದೆ. ಟ್ಯಾಂಕ್‌ನಲ್ಲಿನ ನೀರನ್ನು ಪ್ರತಿನಿತ್ಯ ಎಸ್‌ಟಿಪಿಯಲ್ಲಿ ಶುದ್ಧೀಕರಿಸಿ, ಮರುಬಳಕೆ ಮಾಡಲಾಗುತ್ತದೆ’ ಎಂದರು.

 

Post Comments (+)