ಬುಧವಾರ, ಆಗಸ್ಟ್ 21, 2019
28 °C

ಐಷಾರಾಮಿ ಬಸ್‌ಗಳಲ್ಲಿ ಸ್ವಯಂಚಾಲಿತ ಅಗ್ನಿಶಾಮಕ ಸಾಧನ

Published:
Updated:
Prajavani

ಬೆಂಗಳೂರು: ಕೆಎಸ್‌ಆರ್‌ಟಿಸಿಯ ಐಷಾರಾಮಿ ಬಸ್‌ಗಳಲ್ಲಿ ಪ್ರಯಾಣಿಸುವವರು ಇನ್ನು ಮುಂದೆ ಅಗ್ನಿ ಅನಾಹುತಗಳ ಆತಂಕ ಬಿಟ್ಟು  ನಿಶ್ಚಿಂತೆಯಿಂದ ನಿದ್ರೆಗೆ ಜಾರಬಹುದು. ಈ ಬಸ್‌ಗಳಲ್ಲಿ ಅಗ್ನಿ ದುರಂತ ತಡೆಯಲು ‘ಬೆಂಕಿ ಪತ್ತೆ ಮತ್ತು ಶಮನ ಸಾಧನ’ (ಎಫ್‌ಡಿಎಸ್‌ಎಸ್‌) ಅಳವಡಿಸಲು ನಿಗಮ ಮುಂದಾಗಿದೆ.

ವಾಹನದ ಎಂಜಿನ್, ಡೀಸೆಲ್ ಟ್ಯಾಂಕ್ ಅಥವಾ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡರೆ ಅದನ್ನು ಪತ್ತೆ ಹಚ್ಚಿ ನಂದಿಸುವ ಸ್ವಯಂ ಚಾಲಿತ ಸಾಧನ ಇದಾಗಿದೆ. ಬಸ್‌ನಲ್ಲಿ ಎಫ್‌ಡಿಎಸ್‌ಎಸ್‌ ಅಳವಡಿಸಲು ₹1.4 ಲಕ್ಷ ವೆಚ್ಚವಾಗಲಿದೆ. ಮೊದಲ ಹಂತದಲ್ಲಿ 500 ಬಸ್‌ಗಳಲ್ಲಿ ಈ  ಸಾಧನ ಅಳವಡಿಸಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆಯನ್ನು ಕೆಎಸ್‌ಆರ್‌ಟಿಸಿ ಪೂರ್ಣಗೊಳಿಸಿದೆ.

‘ಗುತ್ತಿಗೆದಾರ ಒದಗಿಸುವ ಸಾಧನವು ಗುಣಮಟ್ಟದಿಂದ ಕೂಡಿದೆಯೇ ಎಂಬುದನ್ನು ‌ಪರಿಶೀಲಿಸಲು ಪ್ರಾಯೋಗಿಕವಾಗಿ 5 ಬಸ್‌ಗಳಲ್ಲಿ ಅಳವಡಿಕೆ ಮಾಡುತ್ತೇವೆ’ ಎಂದು ಹೆಸರು ಹೇಳಲು ಬಯಸದ ನಿಗಮದ ಅಧಿಕಾರಿ
ಯೊಬ್ಬರು ತಿಳಿಸಿದರು.

‘ಐರಾವತ, ಫ್ಲೈಬಸ್, ಐರಾವತ ಕ್ಲಬ್‌ ಕ್ಲಾಸ್, ಅಂಬಾರಿ ಸೇರಿದಂತೆ ನಿಗಮದಲ್ಲಿ 700ಕ್ಕೂ ಹೆಚ್ಚು ಐಷಾರಾಮಿ ಬಸ್‌ಗಳಿವೆ. ಈ ಎಲ್ಲಾ ಬಸ್‌ಗಳಿಗೂ ಎಫ್‌ಡಿಎಸ್‌ಎಸ್ ಸಾಧನ ಅಳವಡಿಸುವ ಉದ್ದೇಶ ಇದೆ’ ಎಂದು ಹೇಳಿದರು.

‘ಐಷಾರಾಮಿ ಬಸ್‌ಗಳಲ್ಲಿ ಹಿಂಭಾಗದಲ್ಲಿ ಎಂಜಿನ್ ಇರುವ ಕಾರಣ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡರೆ ಅದರ ಸುಳಿವು ಚಾಲಕ, ಪ್ರಯಾಣಿಕರಿಗೆ ಸಿಗುವುದಿಲ್ಲ. ಕೂಡಲೇ ಬೆಂಕಿ ನಂದಿಸದಿದ್ದರೆ ಪ್ರಾಣಾಪಾಯದ ಸಾಧ್ಯತೆಯೂ ಇದೆ. ಇದನ್ನು ತಡೆಯಲು ಈ ರೀತಿಯ ಬಸ್‌ಗಳಿಗೆ ಮಾತ್ರ ಎಫ್‌ಡಿಎಸ್‌ಎಸ್‌ ಅಳವಡಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಕೆಂಪು ಬಸ್‌ಗಳಿಗೆ ಈ ಸಾಧನ ಅಳವಡಿಸುತ್ತಿಲ್ಲ. ಈ ಬಸ್‌ಗಳಲ್ಲಿ ಮುಂಭಾಗದಲ್ಲಿಯೇ ಎಂಜಿನ್‌ ಇದ್ದು, ಬೆಂಕಿ ಕಾಣಿಸಿಕೊಂಡರೆ ಚಾಲಕನಿಗೆ ತಕ್ಷಣವೇ ತಿಳಿಯುತ್ತದೆ. ಹಾಗಾಗಿ ಇದರ ಅಗತ್ಯ ಇಲ್ಲ ಎಂದರು. 

2019ರ ಏಪ್ರಿಲ್‌ ನಂತರ ತಯಾರಾಗುವ ಎಲ್ಲಾ ಬಸ್‌ಗಳಲ್ಲಿ ಬೆಂಕಿ ಪತ್ತೆ ಮತ್ತು ಅಲಾರಂ ಸಾಧನ ಅಳವಡಿಕೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಮುಂದೆ ಖರೀದಿಸಲಿರುವ ಬಸ್‌ಗಳಲ್ಲಿ ಈ ಸಾಧನ ಇರುತ್ತದೆ
ಎಂದರು.

ಬೆಂಕಿ ನಂದಿಸುವುದು ಹೇಗೆ?

ಈ ಸಾಧನವನ್ನು ಬಸ್‌ನ ಎಂಜಿನ್‌, ಡೀಸೆಲ್ ಟ್ಯಾಂಕ್ ಮತ್ತು ಬ್ಯಾಟರಿ ಇರುವ ಸ್ಥಳದಲ್ಲಿ ಅಳವಡಿಸಲಾಗುತ್ತದೆ. ಎಫ್‌ಡಿಎಸ್‌ಎಸ್‌ ಕಿಟ್‌ನಲ್ಲಿ ಲಿಕ್ವಿಡ್ ನೈಟ್ರೋಜನ್‌, ನೀರಿನ ಎರಡು ಪ್ರತ್ಯೇಕ ಸಿಲಿಂಡರ್‌ಗಳು ಮತ್ತು ಸೆನ್ಸರ್ ಬೋರ್ಡ್‌ ಇರುತ್ತವೆ.

ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಕೂಡಲೇ, ಅದನ್ನು ಪತ್ತೆ ಮಾಡುವ ಸೆನ್ಸರ್ ಸಿಲಿಂಡರ್‌ಗಳಿಗೆ ಮಾಹಿತಿ ರವಾನೆ ಮಾಡುತ್ತದೆ. ಈ ಎರಡೂ ಸಿಲಿಂಡರ್‌ಗಳು ಸ್ವಯಂಚಾಲಿತವಾಗಿ ನೀರು ಮತ್ತು ನೈಟ್ರೊಜನ್ ಸಿಂಪಡಿಸುತ್ತವೆ. ಬೆಂಕಿ ಹೊತ್ತಿಕೊಂಡ ಭಾಗ ಸಂಪೂರ್ಣ ತಣ್ಣಗಾಗುವ ತನಕ ಇವು ಕಾರ್ಯನಿರ್ವಹಿಸುತ್ತವೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.

ಮಾಹಿತಿ

ಐಷಾರಾಮಿ ಬಸ್‌ಗಳ ಸಂಖ್ಯೆ; 700

ಎಫ್‌ಡಿಎಸ್‌ಎಸ್‌ ಅಳವಡಿಕೆ ಆಗಲಿರುವ ಬಸ್‌ಗಳ ಸಂಖ್ಯೆ; 500

ಪ್ರತಿ ಬಸ್‌ಗೆ ಈ ಸಾಧನ ಅಳವಡಿಸಲು ತಗಲುವ ವೆಚ್ಚ; ₹1.4 ಲಕ್ಷ

Post Comments (+)