ಬುಧವಾರ, ಜೂನ್ 29, 2022
24 °C

ಕೋಡಿಹಳ್ಳಿ ಚಂದ್ರಶೇಖರ್‌ ವಿರುದ್ಧ ಸಿಬಿಐ ತನಿಖೆಗೆ ಸಾರಿಗೆ ನಿಗಮಗಳ ನೌಕರರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಳೆದ ವರ್ಷ ನಾಲ್ಕು ಸಾರಿಗೆ ನಿಗಮಗಳ ನೌಕರರ ಮುಷ್ಕರ ವಾಪಸ್‌ ಪಡೆಯುವ ಸಂದರ್ಭದಲ್ಲಿ ನಡೆದಿರುವ ವ್ಯಾಪಕ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್‌ ಆ್ಯಂಡ್‌ ವರ್ಕರ್ಸ್‌ ಫೆಡರೇಷನ್‌ ಒತ್ತಾಯಿಸಿದೆ.

2021ರ ಏಪ್ರಿಲ್‌ 7ರಿಂದ 21ರವರೆಗೆ ಕರೆ ನೀಡಿದ್ದ ಮುಷ್ಕರ ಯಾವುದೇ ‘ಕೈಗಾರಿಕಾ ಒಪ್ಪಂದ’ ಇಲ್ಲದೆ ಅಂತ್ಯಗೊಂಡಿತ್ತು. ಈ ಮುಷ್ಕರ ವಾಪಸ್ ಪಡೆಯುವ ವಿಚಾರದಲ್ಲಿ ಮುಷ್ಕರದ ನೇತೃತ್ವ ವಹಿಸಿದವರಿಗೆ ಕೋಟ್ಯಂತರ ರೂಪಾಯಿ ಕಿಕ್‌ಬ್ಯಾಕ್‌ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ ಎಂದು ಫೆಡರೇಷನ್ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನೌಕರರ ನಾಯಕತ್ವವನ್ನು ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ವಹಿಸಿದ್ದರು. ಮುಷ್ಕರವನ್ನು ವಾಪಸ್‌ ತೆಗೆದುಕೊಳ್ಳುವ ಸಂದರ್ಭದಲ್ಲಿ ಕೋಡಿಹಳ್ಳಿ ಚಂದ್ರಶೇಖರ್‌ ಅವರು ₹35 ಕೋಟಿ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಮೊತ್ತವನ್ನು ಯಾವ ಸಂಪನ್ಮೂಲದಿಂದ ನೀಡಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಕಿಕ್‌ಬ್ಯಾಕ್‌ನ ಅರ್ಧ ಮೊತ್ತವನ್ನು ಕಪ್ಪು ಹಣದ ರೂಪದಲ್ಲಿ ಮತ್ತು ಉಳಿದರ್ಧ ಹಣವನ್ನು ದುಬೈನಲ್ಲಿರುವ ಕೋಡಿಹಳ್ಳಿ ಚಂದ್ರಶೇಖರ್‌ ಅವರ ಪತ್ನಿ ಮತ್ತು ಮಗನ ಖಾತೆಗೆ ಹಾಕಿದ್ದಾರೆ ಎನ್ನಲಾಗಿದೆ. ಕಪ್ಪು ಹಣ ಯಾರಿಗೆ ನೀಡಲಾಗಿದೆ ಎನ್ನುವುದು ಬಹಿರಂಗವಾಗಬೇಕು. ಹೀಗಾಗಿ, ತಕ್ಷಣವೇ ಕೋಡಿಹಳ್ಳಿ ಚಂದ್ರಶೇಖರ್‌ ಅವರ ವಿರುದ್ಧ ಭ್ರಷ್ಟಾಚಾರದ ಆರೋಪದ ಮೇಲೆ ಮೊಕದ್ದಮೆ ದಾಖಲಿಸಬೇಕು ಮತ್ತು ಎಲ್ಲ ಅಂಶಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೋಡಿಹಳ್ಳಿ ಚಂದ್ರಶೇಖರ್‌ ಅವರನ್ನು ಸಂಪರ್ಕಿಸಿದರೂ ದೂರವಾಣಿ ಕರೆ ಸ್ವೀಕರಿಸಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು