ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

35 ಎಕರೆಗೆ ಜೆರಾಕ್ಸ್‌ ದಾಖಲೆಗಳೇ ಸಾಕ್ಷಿ!

₹140 ಕೋಟಿ ಮೌಲ್ಯದ ಜಮೀನು ವಶಕ್ಕೆ ಬೆಂಗಳೂರು ದಕ್ಷಿಣ ವಿಭಾಗದ ವಿಶೇಷ ಜಿಲ್ಲಾಧಿಕಾರಿ ಆದೇಶ
Last Updated 24 ಜುಲೈ 2020, 20:34 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂಕಿನ ಕುಂಬಳಗೋಡಿನ ಸರ್ವೆಸಂಖ್ಯೆ 86ರ 35 ಎಕರೆ ಜಾಗವನ್ನು ಕಂದಾಯ ಇಲಾಖೆಯ ಸ್ವಾಧೀನಕ್ಕೆ ಪಡೆಯಬೇಕು ಎಂದು ಬೆಂಗಳೂರು ದಕ್ಷಿಣ ವಿಭಾಗದ ವಿಶೇಷ ಜಿಲ್ಲಾಧಿಕಾರಿ ಬಸವರಾಜು ಗುರುವಾರ ಆದೇಶಿಸಿದ್ದಾರೆ.

ಈ ಜಾಗದಲ್ಲಿ 65 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದು, ತಮ್ಮ ಹೆಸರಿಗೆ ದಾಖಲೆಗಳನ್ನು ಮಾಡಿಕೊಡಬೇಕು ಎಂದು ಸಿ.ರಂಗರಾವ್‌ ಎಂಬುವರು ಕೋರಿಕೊಂಡಿದ್ದರು. ಅವರ ವಾದವನ್ನು ವಿಶೇಷ ಜಿಲ್ಲಾಧಿಕಾರಿ ಅವರ ನ್ಯಾಯಾಲಯ ತಳ್ಳಿ ಹಾಕಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಕಬಳಿಸುವ ಯತ್ನ ಇದಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಕುಂಬಳಗೋಡಿನಲ್ಲಿ ಪ್ರತಿ ಎಕರೆಗೆ ಮಾರುಕಟ್ಟೆ ಮೌಲ್ಯ ₹4 ಕೋಟಿ ಇದ್ದು, ಈ ಜಾಗದ ಒಟ್ಟು ಮೌಲ್ಯ ₹140 ಕೋಟಿ ಎಂದು ಅಂದಾಜಿಸಲಾಗಿದೆ.

‘1946ರಿಂದ ಈ ಜಾಗದಲ್ಲಿ ನನ್ನ ತಂದೆ ವೆಂಕಟ ರಾವ್‌ ಕೃಷಿ ಮಾಡುತ್ತಿದ್ದರು. ಅವರ ನಿಧನದ ನಂತರ ನಾನು ಅಲ್ಲಿ ಕೃಷಿ ಮಾಡಲು ಆರಂಭಿಸಿದೆ. 1955ರ ಸೆಪ್ಟೆಂಬರ್‌ 25ರಂದು ನನ್ನ ಹೆಸರಿಗೆ ಜಾಗ ಮಂಜೂರಾಯಿತು. 1966–1967ರಲ್ಲಿ ಕಂದಾಯ ದಾಖಲೆಗಳಲ್ಲಿ ನನ್ನ ಹೆಸರು ಸೇರ್ಪಡೆಯಾಯಿತು’ ಎಂದು ರಂಗ ರಾವ್ ಹೇಳಿಕೊಂಡಿದ್ದರು.

‘ಈ ಜಾಗ ಕಂದಾಯ ಇಲಾಖೆಗೆ ಸೇರಿದ್ದು ಎಂದು ಉಪವಿಭಾಗಾಧಿಕಾರಿಯವರು 1997ರಲ್ಲಿ ಆದೇಶಿಸಿದರು. ಈ ವಿಚಾರ 2007ರಲ್ಲಿ ನನ್ನ ಗಮನಕ್ಕೆ ಬಂತು. ನನ್ನ ಹೆಸರಿಗೆ ಖಾತೆ ವರ್ಗಾವಣೆ ಮಾಡುವಂತೆ ತಹಶೀಲ್ದಾರ್ ಅವರಿಗೆ ಕೂಡಲೇ ಮನವಿ ಮಾಡಿದೆ. ನನ್ನ ಅರ್ಜಿಯನ್ನು ತಹಶೀಲ್ದಾರ್‌ ತಿರಸ್ಕರಿಸಿದರು. ಜಿಲ್ಲಾಧಿಕಾರಿಯವರು ಸಹ ನನ್ನ ಅರ್ಜಿಯನ್ನು ವಜಾಗೊಳಿಸಿದರು’ ಎಂದು ಅವರು ತಿಳಿಸಿದ್ದರು.

ಬಳಿಕ ರಂಗ ರಾವ್‌ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್‌ ಆದೇಶವನ್ನು ಹೈಕೋರ್ಟ್‌ವಜಾಗೊಳಿಸಿತ್ತು. ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಆದೇಶ ಹೊರಡಿಸುವಂತೆ ವಿಶೇಷ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು.

‘ಜಿಲ್ಲಾಧಿಕಾರಿ ಅವರು 1955ರಲ್ಲಿ ಜಾಗ ಮಂಜೂರು ಮಾಡಿದ್ದಾರೆ ಎಂದು ಪ್ರತಿವಾದಿ ಹೇಳಿಕೊಂಡಿದ್ದಾರೆ. ಆದರೆ, ಜಾಗದ ದಾಖಲೆಗಳು ಅವರ ಹೆಸರಿಗೆ ಆಗಿದ್ದು 1966–67ರಲ್ಲಿ. ಕಂದಾಯ ದಾಖಲೆಗಳಲ್ಲಿ ಹೆಸರು ಸೇರ್ಪಡೆಗೆ 12 ವರ್ಷ ತೆಗೆದುಕೊಂಡಿದ್ದು ಅನುಮಾನಕ್ಕೆ ಕಾರಣವಾಗಿದೆ’ ಎಂದು ವಿಶೇಷ ಜಿಲ್ಲಾಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

‘ಜಾಗ ಮಂಜೂರಾತಿಯ ದಾಖಲೆಗಳು ತಹಶೀಲ್ದಾರ್‌ ಹಾಗೂ ಉಪವಿಭಾಗಾಧಿಕಾರಿಯವರ ಕಚೇರಿಯಲ್ಲಿ ಲಭ್ಯ ಇಲ್ಲ. ಭೂ ಮಂಜೂರಾತಿಯ ಆದೇಶ, ಸಾಗುವಳಿ ಚೀಟಿ, ಪೋಡಿ ಶುಲ್ಕ ಪಾವತಿಯ ಮೂಲ ದಾಖಲೆಗಳನ್ನು ರಂಗ ರಾವ್‌ ಅವರು ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ. ಜಾಗದ ಮೂಲ ದಾಖಲೆಗಳು ಕಳೆದುಹೋಗಿವೆ ಎಂದು ಅವರು 2010ರ ಅಕ್ಟೋಬರ್‌ 20ರಂದು ಬಿಡದಿ ಠಾಣೆಗೆ ದೂರು ನೀಡಿದ್ದರು. ‘ನನ್ನ ಜಮೀನಿಗೆ ಹೋಗುವಾಗ ಮೂಲ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದೆ. ವಾಪಸ್‌ ಬರುವಾಗ ದಾಖಲೆಗಳು ಕಳೆದು ಹೋಗಿವೆ’ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು. ‘ಜಮೀನಿಗೆ ಹೋಗುವಾಗ ಮೂಲ ದಾಖಲೆಗಳನ್ನು ತೆಗೆದುಕೊಂಡು ಹೋಗುವ ಅಗತ್ಯವೇನಿತ್ತು’ ಎಂದು ಪ್ರಶ್ನಿಸಿರುವ ವಿಶೇಷ ಜಿಲ್ಲಾಧಿಕಾರಿ, ‘ದಾಖಲೆಗಳು ಕಳೆದುಹೋದ ಐದು ದಿನಗಳ ಬಳಿಕ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ, ಈ ವಿಚಾರವನ್ನು ಸ್ಥಳೀಯ ಕಂದಾಯ ಅಧಿಕಾರಿಗಳ ಗಮನಕ್ಕೂ ತಂದಿಲ್ಲ’ ಎಂದಿದ್ದಾರೆ.

‘ರಂಗ ರಾವ್ ಬಳಿ ಜಮೀನಿನ ದಾಖಲೆಯ ಕಲರ್‌ ಜೆರಾಕ್ಸ್‌ ಪ್ರತಿಯಷ್ಟೇ ಇದೆ. ದಾಖಲೆಗಳು ಕಳೆದುಹೋಗಿರುವ ಬಗ್ಗೆ ನೀಡಿರುವ ಕಾರಣಗಳನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಬಸವರಾಜು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT