ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸುಮಾ ಧ್ವನಿ ಆಗಲಿದ್ದಾರೆ

Last Updated 31 ಅಕ್ಟೋಬರ್ 2020, 19:50 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಧಾನಸೌಧದಲ್ಲಿ ವಿದ್ಯಾವಂತ, ಪ್ರಜ್ಞಾವಂತ ಹೆಣ್ಣು ನಿಮ್ಮ ಕಷ್ಟಕ್ಕೆ ಧ್ವನಿಯಾಗಿರಲಿ ಎಂದು ಕುಸುಮಾ ಅವರನ್ನು ಕಣಕ್ಕಿಳಿಸಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಆರ್‌.ಆರ್‌. ನಗರದ ಪಕ್ಷದ ಅಭ್ಯರ್ಥಿ ಕುಸುಮಾ ಜೊತೆ ಪೀಣ್ಯ ಹಾಗೂ ಗೋರಗುಂಟೆ ಪಾಳ್ಯದ ಗಾರ್ಮೆಂಟ್ಸ್‌ ಫ್ಯಾಕ್ಟರಿಗಳಿಗೆ ಶನಿವಾರ ಭೇಟಿ ನೀಡಿ ಅಲ್ಲಿನ ಕಾರ್ಮಿಕರ ಬಳಿ ಮತಯಾಚಿಸಿದರು.

‘ಒಬ್ಬ ವ್ಯಕ್ತಿಯ ಸ್ವಾರ್ಥಕ್ಕಾಗಿ ಈ ಚುನಾವಣೆ ಬಂದಿದೆ. ಈ ಹಿಂದೆ ನೀವು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದೀರಿ. ಅವರು ರಾಜೀನಾಮೆ ಕೊಟ್ಟು ಬೇರೆ ಪಕ್ಷ ಸೇರಿದ್ದರಿಂದ ಈ ಚುನಾವಣೆ ಬಂದಿದೆ. ಒಬ್ಬ ವಿದ್ಯಾವಂತ ಹೆಣ್ಣು ಮಗಳು ಸಂಸಾರದಲ್ಲಿ ನೊಂದು, ಬೆಂದಿದ್ದಾಳೆ. ತನ್ನ ದುಃಖ ಮರೆಯಲು ನಿಮ್ಮ ಸೇವೆ ಮಾಡಲು ಬಂದಿದ್ದಾಳೆ’ ಎಂದರು.

‘ಈ ಚುನಾವಣೆಗೆ ಕಾರಣರಾದವರು ಎಲ್ಲೆಲ್ಲಿ ಹಣ ಹಂಚಿದ್ದಾರೆ ಎಂಬುದರ ವಿಡಿಯೊ ದಾಖಲೆಗಳು ನಮ್ಮಲ್ಲಿವೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಹಾಕಿಸಿ ಕಿರುಕುಳ ನೀಡಿರುವುದೇ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಸಾಧನೆ’ ಎಂದು ಟೀಕಿಸಿದರು.

ನಿರೀಕ್ಷೆ ಹುಸಿ ಮಾಡುವುದಿಲ್ಲ: ‘ನಿಮ್ಮ ಕಷ್ಟಗಳನ್ನು ಮುಕ್ತವಾಗಿ ಹಂಚಿಕೊಂಡು ಅದಕ್ಕೆ ಸ್ಪಂದಿಸಲು ನನಗೆ ಅವಕಾಶ ಕೊಡಿ. ನಿಮ್ಮ ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ' ಎಂದು ಗಾರ್ಮೆಂಟ್ಸ್‌ ಕಾರ್ಮಿಕರಿಗೆ ಕುಸುಮಾ ಭರವಸೆ ನೀಡಿದರು.

ಹಿಂದೂ ಜಾಗೃತಿ ಸಭೆಯಲ್ಲಿ ಭಾಗಿ: ಆರ್‌.ಆರ್‌. ನಗರದ ಪಕ್ಷದ ಅಭ್ಯರ್ಥಿ ಕುಸುಮಾ ಪರ ಬೆಮಲ್ ಬಡಾವಣೆಯ ಕ್ರೇಜಿ ಪಾರ್ಕ್ ಬಳಿ ಹಿಂದೂ ಜಾಗೃತಿ ಸೇನೆಯ ಸಂಸ್ಥಾಪಕ ವಿನಯಗೌಡ ಅವರು ಶನಿವಾರ ರಾತ್ರಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಭಾಗವಹಿಸಿದರು.

ವಿನಯ್‌ ಗೌಡ ಅವರು ಇತ್ತೀಚೆಗೆ ಕಾಂಗ್ರೆಸ್‌ ಸೇರಿದ್ದಾರೆ. ಸಭೆಯಲ್ಲಿ ಮಾತನಾಡಿದ ಶಿವಕುಮಾರ್‌, ‘ವಿನಯ್‌ ಗೌಡ ಮತ್ತು ನನ್ನದು ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧ’ ಎಂದು ಬಣ್ಣಿಸಿದರು. ತಮ್ಮ ಹೆಗಲಿನಲ್ಲಿದ್ದ ಕೇಸರಿ ಶಾಲು ತೋರಿಸಿ, ‘ಇದು ಯಾರ ಮನೆಯ ಆಸ್ತಿಯೂ ಅಲ್ಲ. ಇದು ದೇಶದ ಆಸ್ತಿ. ನಿಮ್ಮ ಆಸ್ತಿ. ನಮ್ಮ ಆಸ್ತಿ’ ಎಂದರು. ‘ಆತ್ಮಸಾಕ್ಷಿಯಾಗಿ ಮತ ಚಲಾಯಿಸಿ ಕುಸುಮಾ ಅವರನ್ನು ಗೆಲ್ಲಿಸಬೇಕು’ ಎಂದೂ ಮನವಿ ಮಾಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ರಾಮಲಿಂಗಾರೆಡ್ಡಿ, ಸೌಮ್ಯಾರೆಡ್ಡಿ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT