ಗುರುವಾರ , ಅಕ್ಟೋಬರ್ 29, 2020
21 °C
ಹನುಮಂತರಾಯಪ್ಪ ಜತೆ ಕಾಂಗ್ರೆಸ್‌ ನಾಯಕರ ಸುದೀರ್ಘ ಚರ್ಚೆ

ಆರ್‌.ಆರ್‌. ನಗರ ಕ್ಷೇತ್ರ: ಕುಸುಮಾ ರವಿ ‘ಕೈ’ ಅಭ್ಯರ್ಥಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರ್‌.ಆರ್‌. ನಗರ ಕ್ಷೇತ್ರದಿಂದ ಜೆಡಿಎಸ್‌ ಮುಖಂಡ ಹನುಮಂತರಾಯಪ್ಪ ಅವರ ಮಗಳು, ದಿವಂಗತ ಐಎಎಸ್‌ ಅಧಿಕಾರಿ ಡಿ.ಕೆ. ರವಿ ಪತ್ನಿ ಕುಸುಮಾ ರವಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ನಲ್ಲಿ ಗಂಭೀರ ಚರ್ಚೆ ನಡೆದಿದೆ.

ಹನುಮಂತರಾಯಪ್ಪ‌ ಅವರ ನಿವಾಸಕ್ಕೆ ಶನಿವಾರ ರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ಶಾಸಕ ರಮೇಶ್ ಕುಮಾರ್‌ ಭೇಟಿ ನೀಡಿ ಒಂದು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಕುಸುಮಾ ಅವರ ಜೊತೆಗೂ ಚರ್ಚಿಸಿದರು. ಕುಸುಮಾ ರವಿ ಅವರು ಭಾನುವಾರ ಕಾಂಗ್ರೆಸ್‌ ಸೇರಲಿದ್ದಾರೆ.

ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್, ‘ಹನುಮಂತರಾಯಪ್ಪ ಅವರ ಜೊತೆ ಚರ್ಚೆ ನಡೆಸಿದ್ದೇವೆ. ಮೊದಲಿಂದಲೂ ನಾವು ಈ ಕುಟುಂಬದ ಹಿತೈಷಿಗಳು. ಕುಸುಮಾ ಅವರು ಭಾನುವಾರ ಪಕ್ಷದ ಸದಸ್ಯತ್ವ ಪಡೆಯಲಿದ್ದಾರೆ’ ಎಂದರು.

‘ಆರ್.ಆರ್. ನಗರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಶಾಸಕ ರಾಮಲಿಂಗಾ ರೆಡ್ಡಿ ನೇತೃತ್ವದ ಸಮಿತಿ ನಿರ್ಧರಿಸಲಿದೆ. ಸಮಿತಿ ಶಿಫಾರಸು ಮಾಡುವ ಹೆಸರುಗಳನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜತೆ ಚರ್ಚೆ ಮಾಡುತ್ತೇವೆ. ಬಳಿಕ ಅಭ್ಯರ್ಥಿಯನ್ನು ಅಂತಿಮಗೊಳಿಸುತ್ತೇವೆ’ ಎಂದರು.

‘ಆರ್.ಆರ್. ನಗರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದಿದ್ದೆ. ಕುಸುಮಾ ಅವರು ಅಚ್ಚರಿ ಅಭ್ಯರ್ಥಿ ಹೌದೊ, ಅಲ್ಲವೊ ಎನ್ನುವುದನ್ನು ಕಾದು ನೋಡಿ’ ಎಂದರು.

ಸಂಸದ ಡಿ.ಕೆ. ಸುರೇಶ್ ಮಾತನಾಡಿ, ‘ಆರ್‌.ಆರ್‌, ನಗರದಿಂದ ಸೂಕ್ತ ಅಭ್ಯರ್ಥಿಯನ್ನು ಪಕ್ಷ ಕಣಕ್ಕಿಳಿಸಲಿದೆ. ಯಾರೆಲ್ಲಾ ಪಕ್ಷ ಬಿಟ್ಟಿದ್ದಾರೊ ಅವರನ್ನು ಸೇರಿಸಿಕೊಳ್ಳುತ್ತಿದ್ದೇವೆ. ಆರ್.ಆರ್. ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ’ ಎಂದರು.

‘ಈ ಕ್ಷೇತ್ರದಲ್ಲಿ ಏಳು ಜನ ಆಕಾಂಕ್ಷಿಗಳಿದ್ದಾರೆ. ಹನುಮಂತರಾಯಪ್ಪ ಈ ಭಾಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅಭ್ಯರ್ಥಿ ಯಾರು ಎಂಬುದನ್ನು ಪಕ್ಷದ ಹಿರಿಯರು ತೀರ್ಮಾನಿಸುತ್ತಾರೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು