ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಸಾಹಿತ್ಯ ಸ್ಮರಣೆಗೆ ದರ್ಶನ ಭವನ ನಿರ್ಮಿಸಿ: ಪ್ರಧಾನ ಗುರುದತ್ತ

Last Updated 29 ಡಿಸೆಂಬರ್ 2020, 20:45 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯವನ್ನು ಸದಾ ಸ್ಮರಿಸಿಕೊಳ್ಳಲು ಅನುಕೂಲವಾಗುವಂತೆ ‘ದರ್ಶನ ಭವನ’ ನಿರ್ಮಾಣಕ್ಕೆಸರ್ಕಾರ ಮುಂದಾಗಬೇಕು’ ಎಂದು ಹಿರಿಯ ಸಾಹಿತಿ ಪ್ರಧಾನ ಗುರುದತ್ತ ತಿಳಿಸಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಮಂಗಳವಾರ ಹಮ್ಮಿಕೊಂಡಿದ್ದ ‘ಸಾಧಕರಿಗೆ ಗೌರವ ಪ್ರಶಸ್ತಿ ಪ್ರದಾನ’ ಮತ್ತು ‘ಪುಸ್ತಕ ಬಹುಮಾನ’ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಿ.ಎಸ್.ಯಡಿಯೂರಪ್ಪ ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ವೇಳೆಯೇ ‘ದರ್ಶನ ಭವನ’ ನಿರ್ಮಾಣಕ್ಕೆ ಮನವಿ ಮಾಡಲಾಗಿತ್ತು. ಆಗಿನ ಸರ್ಕಾರ ಅನುದಾನ ಬಿಡುಗಡೆಗೂ ಮುಂದಾಗಿತ್ತು. ಕಾರಣಾಂತರಗಳಿಂದ ಭವನ ನಿರ್ಮಾಣ ಸಾಧ್ಯವಾಗಲಿಲ್ಲ‘ ಎಂದರು.

‘ದರ್ಶನ ಭವನ’ದಲ್ಲಿ ಕುವೆಂಪು ಅವರ ಸಾಹಿತ್ಯದ ಕುರಿತಾದ ವಿಚಾರಗಳಿಗೆ ಆದ್ಯತೆ ನೀಡಬೇಕು.ಕಟ್ಟಡದ ಕಲ್ಲುಗಳು ಕುವೆಂಪು ಸಾಹಿತ್ಯದ ಸಾಲುಗಳಿಂದ ಕೂಡಿರಬೇಕು. ಭವನದಲ್ಲಿ ಕುವೆಂಪು ಅವರ ಸಾಹಿತ್ಯದ ಸಾಲುಗಳು ಧ್ವನಿವರ್ಧಕಗಳಮೂಲಕ ನಿತ್ಯ ಪ್ರತಿಧ್ವನಿಸಬೇಕು’ ಎಂದೂ ಹೇಳಿದರು.

‘ಇತ್ತೀಚಿನ ದಿನಗಳಲ್ಲಿಕನ್ನಡವನ್ನು ಕಸದ ತೊಟ್ಟಿಯನ್ನಾಗಿ ಮಾಡುವ ಕೆಲಸ ನಡೆಯುತ್ತಿದೆ. ಸತ್ವವಿಲ್ಲದ ಕೃತಿಗಳು ಕನ್ನಡಕ್ಕೆ ಅನುವಾದಗೊಳ್ಳುತ್ತಿವೆ. ಅನುವಾದಕರು ತಮ್ಮದೇ ಅರ್ಥ ಕಲ್ಪಿಸಿಕೊಂಡು ಅನುವಾದಿಸುತ್ತಿರುವುದು ಸಾಹಿತ್ಯ ಕ್ಷೇತ್ರಕ್ಕೆ ಒಳ್ಳೆಯದಲ್ಲ. ಇದು ಕೃತಿ ಮತ್ತು ಕೃತಿಕಾರರಿಗೆ ಅನ್ಯಾಯ ಮಾಡಿದಂತೆ’ ಎಂದು ಎಚ್ಚರಿಸಿದರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಅಜಕ್ಕಳ ಗಿರೀಶ ಭಟ್, ‘ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿದ್ವಾಂಸರಿಗೆಕುವೆಂಪು ಅವರ ಹೆಸರಿನಲ್ಲಿ ಫೆಲೋಷಿಪ್‌ ನೀಡಲು ಪ್ರಾಧಿಕಾರ ಮುಂದಾಗಿದೆ. ಅವರ ಹಲವು ಕೃತಿಗಳಿಗೆ ಇ-ಪುಸ್ತಕದ ರೂಪ ನೀಡಲಾಗುತ್ತಿದೆ. ಆನ್‍ಲೈನ್ ಮೂಲಕ ಭಾಷಾಂತರ ತರಗತಿಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ಗೌರವ ಪ್ರಶಸ್ತಿ–ಪುಸ್ತಕ ಬಹುಮಾನ
ಕಾರ್ಯಕ್ರಮದಲ್ಲಿ ಕಾಸರಗೋಡಿನ ಎ.ನರಸಿಂಹ ಭಟ್, ದಾವಣಗೆರೆಯ ಎಂ.ಶಿವಕುಮಾರ ಸ್ವಾಮಿ, ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರದ ಲಕ್ಷ್ಮೀಕಾಂತ ಎಸ್.ಹೆಗಡೆ, ಶಿವಮೊಗ್ಗದ ಡಿ.ಎನ್.ಶ್ರೀನಾಥ್, ರಾಮನಗರದ ಡಾ.ಸಿ.ಶಿವಕುಮಾರ ಸ್ವಾಮಿ ಅವರಿಗೆ2020ನೇ ಸಾಲಿನ ‘ಗೌರವ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ವಿ.ಕೃಷ್ಣಮೂರ್ತಿ ರಾವ್, ಪ್ರೊ.ವನಮಾಲಾ ವಿಶ್ವನಾಥ್, ಅಜಯ್ ವರ್ಮಾ ಅಲ್ಲೂರಿ ಅವರಿಗೆ2019ನೇ ಸಾಲಿನ ‘ಪುಸ್ತಕ ಬಹುಮಾನ’ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT