ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುವೆಂಪು ನೋಬೆಲ್ ಪ್ರಶಸ್ತಿಗೆ ಅರ್ಹರಾಗಿದ್ದರು’: ಸಾಹಿತಿ ಹರಿಹರಪ್ರಿಯ ಅಭಿಮತ

ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಾಹಿತಿ ಹರಿಹರಪ್ರಿಯ ಅಭಿಮತ
Last Updated 1 ಜನವರಿ 2023, 16:06 IST
ಅಕ್ಷರ ಗಾತ್ರ

ಬೆಂಗಳೂರು: ‘ಕುವೆಂಪು ಅವರ ಕೃತಿಗಳು ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿದ್ದರೆ ರವೀಂದ್ರನಾಥ ಟ್ಯಾಗೋರ್ ರೀತಿ ಅವರಿಗೂ ನೋಬೆಲ್ ಪುರಸ್ಕಾರ ದೊರೆಯುತ್ತಿತ್ತು’ ಎಂದು ಸಾಹಿತಿ ಪುಸ್ತಕಮನೆ ಹರಿಹರಪ್ರಿಯ ತಿಳಿಸಿದರು.

ರಂಗೋತ್ರಿ ಸಂಸ್ಥೆ ನಗರದಲ್ಲಿ ಆಯೋಜಿಸಿದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. ‘ಕುವೆಂಪು ಅವರು ಕನ್ನಡದ ಧೀಮಂತ ದಾರ್ಶನಿಕ. ಅವರೊಬ್ಬ ವಿಶ್ವಕವಿ. ಈಗ ನಾವು ಹಾಡುತ್ತಿರುವ ನಾಡಗೀತೆಯನ್ನು ಕುವೆಂಪು ಅವರು 1924ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿಯೇ ಬರೆದಿದ್ದರು. ಕುವೆಂಪು ಅವರು ದುಡಿಯುವನನ್ನು ಯೋಗಿ ಎಂದು ಕರೆದರು. ಎರಡು ನಾಡಗೀತೆಗಳನ್ನು ನೀಡಿದ ಕವಿ ಜಗತ್ತಿನಲ್ಲಿಯೇ ಇಲ್ಲ. ಅವರ ‘ಓ ನನ್ನ ಚೇತನ...’ ವಿಶ್ವದ ನಾಡಗೀತೆ’ ಎಂದರು.

‘ವಿಶ್ವಮಾನವರನ್ನು ಹುಡುಕಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಕುವೆಂಪು ಅವರು ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದಿದ್ದರು. ಮನುಷ್ಯರಾಗಲು ಕುವೆಂಪು ಅವರ ಸಾಹಿತ್ಯ ಮತ್ತು ಬದುಕನ್ನು ಪ್ರತಿಯೊಬ್ಬರು ತಿಳಿಯಬೇಕು. ಯುವಪೀಳಿಗೆ ಅವಶ್ಯವಾಗಿ ಕುವೆಂಪು ಅವರನ್ನು ಅಧ್ಯಯನ ಮತ್ತು ಮನನ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಸೋಮಶೇಖರ್, ‘ಕುವೆಂಪು ಅವರು ಮಹಾನ್ ದಾರ್ಶನಿಕ ಕವಿಯಾಗಿದ್ದರು. ‘ಮನುಜ ಮತ-ವಿಶ್ವಪಥ’ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದರು. ಅವರ ಪರಿಪೂರ್ಣ ದೃಷ್ಟಿ ತತ್ವಗಳು ಇಡೀ ವಿಶ್ವಕ್ಕೆ ಆದರ್ಶನೀಯವಾದದ್ದಾಗಿದೆ. ಅವರೊಬ್ಬ ಮಹಾನ್ ಸ್ವಾಭಿಮಾನಿಯಾಗಿದ್ದರು. ಎಲ್ಲದರಲ್ಲೂ ಮಾನವೀಯತೆ ಕಾಣುತ್ತಿದ್ದರು’ ಎಂದರು.

ಇದೇ ವೇಳೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಪ್ರಯುಕ್ತ ಗುಂಡೀಗೆರೆ ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಸಾಣೆಹಳ್ಳಿ ಶಿವಸಂಚಾರ ತಂಡದಿಂದ ಕುವೆಂಪು ವಿರಚಿತ ‘ಚಂದ್ರಹಾಸ’ ನಾಟಕದ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT