ಒಳ ಚರಂಡಿ ಕಾಮಗಾರಿ: ಕಾರ್ಮಿಕ ಸಾವು

ಬೆಂಗಳೂರು: ಕೆಂಗೇರಿ ಬಳಿಯ ಭಜನಾ ಮಂದಿರ ರಸ್ತೆಯಲ್ಲಿ ಒಳಚರಂಡಿ ಕಾಮಗಾರಿ ವೇಳೆ ಸಿಮೆಂಟ್ ಸ್ಲ್ಯಾಬ್ ಕುಸಿದು ಕಾರ್ಮಿಕ ಚಲಪತಿ (25) ಎಂಬುವವರು ಶನಿವಾರ ಮೃತಪಟ್ಟಿದ್ದಾರೆ.
‘ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ವೆಂಕಟಾಪುರದ ಚಲಪತಿ, ಗುತ್ತಿಗೆದಾರರೊಬ್ಬರ ಸೂಚನೆಯಂತೆ ಕೆಲಸದಲ್ಲಿ ತೊಡಗಿದ್ದರು. ಘಟನೆಯಲ್ಲಿ ಮತ್ತೊಬ್ಬ ಕಾರ್ಮಿಕ ಮುನಿಯಪ್ಪ (25) ಎಂಬುವರು ಗಾಯಗೊಂಡಿದ್ದು, ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಕೆಂಗೇರಿ ಠಾಣೆ ಪೊಲೀಸರು ಹೇಳಿದರು.
‘ಕಾಂಕ್ರೀಟ್ ರಸ್ತೆಯಲ್ಲಿ ಒಳಚರಂಡಿ ಪೈಪ್ ಅಳವಡಿಕೆಗಾಗಿ ಕಾಮಗಾರಿ ಆರಂಭವಾಗಿತ್ತು. ಶನಿವಾರ ಬೆಳಿಗ್ಗೆ ಕೆಲಸಕ್ಕೆ ಬಂದಿದ್ದ ಚಲಪತಿ ಹಾಗೂ ಮುನಿಯಪ್ಪ, ರಸ್ತೆ ಮಧ್ಯದಲ್ಲಿ ಮೂರು ಅಡಿಯಷ್ಟು ಮಣ್ಣು ಅಗೆದಿದ್ದರು. ಗುಂಡಿಯೊಳಗೆ ನಿಂತು ಕೆಲಸ ಮುಂದುವರಿಸಿದ್ದರು.’
‘ಮಣ್ಣು ಅಗೆದಿದ್ದರಿಂದ ರಸ್ತೆಯ ಅಕ್ಕ–ಪಕ್ಕದಲ್ಲಿದ್ದ ಸಿಮೆಂಟ್ ಸಡಿಲಗೊಂಡಿತ್ತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಿಮೆಂಟ್‌ನ ಸ್ಲ್ಯಾಬ್, ಗುಂಡಿಯೊಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೈಮೇಲೆ ಬಿದ್ದಿತ್ತು. ಅವಶೇಷಗಳಡಿ ಸಿಲುಕಿ ಚಲಪತಿ ಸ್ಥಳದಲ್ಲೇ ಮೃತಪಟ್ಟರು. ಮುನಿಯಪ್ಪ ಅವರನ್ನು ಸ್ಥಳೀಯರೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
ಗುತ್ತಿಗೆದಾರನ ನಿರ್ಲಕ್ಷ್ಯ: ‘ಒಳಚರಂಡಿ ಕಾಮಗಾರಿ ನಡೆಸಲು ಜಲಮಂಡಳಿಯಿಂದ ಗುತ್ತಿಗೆದಾರರೊಬ್ಬರಿಗೆ ಗುತ್ತಿಗೆ ನೀಡಲಾಗಿತ್ತು. ಕೆಲಸದ ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಲಾಗಿತ್ತು. ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಈ ಅವಘಡ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಮೃತ ಕಾರ್ಮಿಕರ ಸಂಬಂಧಿಕರು ನೀಡುವ ದೂರು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.