ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಕಿಂಗ್‌–ಬಿಬಿಎಂಪಿ ಕಾಯ್ದೆ ಹೊಂದಾಣಿಕೆ ಕೊರತೆ

ಪರಸ್ಪರ ಪೂರಕವಾಗಿರದ ಕಾಯ್ದೆಯಿಂದ ಸಾರ್ವಜನಿಕರಿಗೆ ಹೊರೆ: ನಗರ ಯೋಜನಾ ತಜ್ಞರ ಅಭಿಮತ
Last Updated 19 ಫೆಬ್ರುವರಿ 2021, 20:58 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾರಿಯಾಗಲಿರುವ ವಾಹನ ನಿಲುಗಡೆ ನೀತಿ 2.0 ಹಾಗೂ 2020ರ ಬಿಬಿಎಂಪಿ ಕಾಯ್ದೆ ಹೆಚ್ಚೂ ಕಡಿಮೆ ಒಟ್ಟೊಟ್ಟಿಗೆ ರೂಪುಗೊಂಡವುಗಳು. ಬಿಬಿಎಂಪಿ ಕಾಯ್ದೆ 2020 ಜಾರಿಯಾದ ಬಳಿಕ ಅಂತಿಮಗೊಂಡ ‘ಪಾರ್ಕಿಂಗ್‌ ನೀತಿ 2.0’ರಲ್ಲಿ ಈ ಕಾಯ್ದೆಗೆ ಸಂಬಂಧಿಸಿದ ಸ್ಪಷ್ಟ ಉಲ್ಲೇಖಗಳೇ ಇಲ್ಲ.

ಈ ನೀತಿಗೆ ಪೂರಕವಾಗಿ ಬಿಬಿಎಂಪಿ ಕಾಯ್ದೆಯಲ್ಲೇ ಸ್ಪಷ್ಟ ರೂಪರೇಷೆಗಳನ್ನು ಅಳವಡಿಸಿಕೊಳ್ಳಲು ಅವಕಾಶವಿತ್ತು. ಆದರೆ, ಬಿಬಿಎಂಪಿ ಕಾಯ್ದೆ ಪಾರ್ಕಿಂಗ್‌ ವ್ಯವಸ್ಥೆಯನ್ನು ಸರಿದಾರಿಗೆ ತರುವ ಬಗ್ಗೆ ಮೌನ ವಹಿಸುತ್ತದೆ. ಇವೆರಡೂ ಒಂದಕ್ಕೊಂದು ಪೂರಕವಾಗಿರುತ್ತಿದ್ದರೆ ಪಾರ್ಕಿಂಗ್‌ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಇನ್ನೂ ಸುಲಭವಾಗುತ್ತಿತ್ತು. ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್‌) ರೂಪಿಸಿರುವ ಪಾರ್ಕಿಂಗ್‌ ನೀತಿಯ ಕೆಲ ನ್ಯೂನತೆ ಸರಿಪಡಿಸದೇ ಹೋದರೆ ಭವಿಷ್ಯದಲ್ಲಿ ಬಿಕ್ಕಟ್ಟುಗಳು ಸೃಷ್ಟಿಯಾಗಬಹುದು ಎನ್ನುತ್ತಾರೆ ನಗರ ಯೋಜನಾ ತಜ್ಞರು.

‘ಈ ನೂತನ ಪಾರ್ಕಿಂಗ್‌ ನೀತಿಯ ಕಂಡಿಕೆ 2.5 ಮತ್ತು 2.6ರಲ್ಲಿ 1976ರ ಕೆಎಂಸಿ ಕಾಯ್ದೆಯ ಸೆಕ್ಷನ್‌ 349, 350 ಮತ್ತು 351ರ ಉಪವಿಧಿಗಳನ್ನು ಮತ್ತು 1993ರ ಕರ್ನಾಟಕ ಪೋಲೀಸ್‌ ಕಾಯ್ದೆಯಡಿ ಉಪಬಂಧಗಳನ್ನು ಉಲ್ಲೇಖಿಸಲಾಗಿದೆ. ಹೊಸ ಪಾರ್ಕಿಂಗ್‌ ನೀತಿಯ ಪ್ರಕಾರ ಸ್ಥಳೀಯ ಪ್ರದೇಶಗಳ ವಾಹನ ನಿಲುಗಡೆ ಯೋಜನೆಗೆ ಸ್ಥಳ ಗುರುತಿಸುವಿಕೆ ಮತ್ತು ವಿನ್ಯಾಸ ರಚನೆ ಸಿದ್ದಪಡಿಸುವುದು ಡಲ್ಟ್‌ನ ಜವಾಬ್ದಾರಿ. ವಲಯ ಕಾರ್ಯಪಡೆಯ ಮೂಲಕ ಏರಿಯಾ ಪಾರ್ಕಿಂಗ್ ಯೋಜನೆಗಳನ್ನು (ಎಪಿಪಿ) ಸಿದ್ಧಪಡಿಸಿ ಅನುಷ್ಠಾನಗೊಳಿಸುವ ಜವಾಬ್ದಾರಿ ಬಿಬಿಎಂಪಿಯದು. ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 107ರ ಪ್ರಕಾರ ವಾಹನ ನಿಲುಗಡೆಗೆ ಸ್ಥಳಗಳನ್ನು ಕಲ್ಪಿಸುವುದು ಮತ್ತು ನಿರ್ವಹಿಸುವುದು ಬಿಬಿಎಂಪಿಯ ಪ್ರಮುಖ ಕರ್ತವ್ಯ. ಇದು ಬಿಟ್ಟರೆ ಕೆಎಂಸಿ ಕಾಯ್ದೆಯ ಸೆಕ್ಷನ್‌ 349, 350 ಮತ್ತು 351ರ ಉಪಬಂಧಗಳನ್ನು ಬಿಬಿಎಂಪಿ ಕಾಯ್ದೆಯಲ್ಲಿ ನಮೂದಿಸಿಯೂ ಇಲ್ಲ ಅಥವಾ ಯಾವುದೇ ಉಪವಿಧಿಗಳನ್ನೂ ಕಲ್ಪಿಸಿಲ್ಲ. ಕೆಎಂಸಿ ಕಾಯ್ದೆ 1976 ಈಗ ಬಿಬಿಎಂಪಿಗೆಅನ್ವಯಿಸುವುದಿಲ್ಲ’ ಎಂದು ಗೊಂದಲಗಳನ್ನು ಅವರು ಎಳೆಎಳೆಯಾಗಿ ಬಿಚ್ಚಿಟ್ಟರು.

‘ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 215ರಲ್ಲಿ ವಲಯ ಆಯುಕ್ತರಿಗೆ, ಪೋಲಿಸ್‌ ಸಹಾಯದೊಂದಿಗೆ ಕೆಲವು ರಸ್ತೆಗಳಲ್ಲಿ ಕೆಲವು ರೀತಿಯ ವಾಹನ ಸಂಚಾರವನ್ನು ನಿರ್ಬಂಧಿಸುವ ಅಧಿಕಾರವನ್ನು ನೀಡಲಾಗಿದೆ. ಇದಕ್ಕೂ ಪಾರ್ಕಿಂಗ್‌ ನೀತಿಗೂ ಅಥವಾ ಪಾರ್ಕಿಂಗ್‌ ಶುಲ್ಕ ನಿಗಧಿಗೂ ಯಾವುದೇ ಸಂಬಂಧವಿದೆಯೆಂದು ಅನಿಸುವುದಿಲ್ಲ’ ಎನ್ನುತ್ತಾರೆ ಸೆಂಟರ್ ಫಾರ್‌ ಅರ್ಬನ್‌ ಗವರ್ನನ್ಸ್‌ ಸ್ಟಡೀಸ್‌ ಆ್ಯಂಡ್‌ ಪಾಲಿಸಿ ರಿಸರ್ಚ್‌ ಸಂಸ್ಥೆಯ ನಿರ್ದೇಶಕ ಸಿ.ಆರ್‌.ರವೀಂದ್ರ.

‘ಪಾರ್ಕಿಂಗ್‌ ಯೋಜನೆಯ ಅನುಷ್ಠಾನದ ಬಂಡವಾಳ ವೆಚ್ಚವನ್ನು ಭರಿಸಲು ಮೂಲ ಸೌಕರ್ಯ ಸೆಸ್‌ನಿಂದ ಗಳಿಸಿದ ಆದಾಯವನ್ನು ಬಿಬಿಎಂಪಿ ಬಳಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಕಾರಣಾಂತರಗಳಿಂದ ಇದರ ಅನುಷ್ಠಾನ ಸಾಧ್ಯವಾಗಿಲ್ಲ. ಈ ಬಂಡವಾಳ ವೆಚ್ಚವನ್ನು ಪಾರ್ಕಿಂಗ್‌ ಶುಲ್ಕದ ಪರಿಷ್ಕರಣೆಯಿಂದ ಬಳಸಲಾಗುವುದು ಎಂದು ಪಾರ್ಕಿಂಗ್‌ ನೀತಿಯಲ್ಲಿ ವ್ಯಕ್ತಪಡಿಸಲಾಗಿದೆ. ಇದು ಸಾರ್ವಜನಿಕರ ಮೇಲೆ ಹೊರೆಯಾಗುತ್ತದೆ ಮತ್ತು ಇದು ಸರಿಯಾದ ಕ್ರಮವಲ್ಲ’ ಎಂದರು.

ಕರ್ನಾಟಕ ಪೋಲೀಸ್‌ ಕಾಯ್ದೆಯ ಅನುಸಾರ ವಾಹನ ಸಂಚಾರ, ಸಾರ್ವಜನಿಕ ವಾಹನ ನಿಲುಗಡೆ ನಿಯಂತ್ರಣ ಮತ್ತು ನಿರ್ವಹಣೆ ಸಂಚಾರ ಪೋಲಿಸರ ಜವಾಬ್ದಾರಿ ಮತ್ತು ಕಾರ್ಯವ್ಯಾಪ್ತಿಗೆ ಬರುತ್ತದೆ. ಬಿಬಿಎಂಪಿ ಅಧಿಕಾರಿಗಳಿಗೆ ಈ ಅಧಿಕಾರವನ್ನು ನೀಡಲಾಗದು. ವಾಹನ ನಿಲುಗಡೆಗೆ ಸಂಬಂಧಿಸಿದ ದಂಡದ ದರಗಳನ್ನು ಮೋಟಾರ್‌ ವಾಹನಗಳ ಕಾಯ್ದೆಯನುಸಾರ ನಿಗದಿಪಡಿಸಲಾಗುತ್ತದೆ. ಈ ದರಗಳಿಗೆ ಸ್ವಲ್ಪ ಆಡಳಿತ ವೆಚ್ಚವನ್ನು ಸೇರಿಸಿಕೊಂಡು, ಪೋಲೀಸ್‌ ಇಲಾಖೆಯು ದಂಡ ವಸೂಲಿ ಜವಾಬ್ದಾರಿ ಮತ್ತು ಅಧಿಕಾರವನ್ನು ಹೊಂದಿದೆ.

‘ಈ ದಂಡ ವಸೂಲಿಯಿಂದ ಬಂದ ವರಮಾನವನ್ನು ರಾಜ್ಯದ ಸಂಚಿತ ನಿಧಿಗೆ, ರಾಜ್ಯ ಹಣಕಾಸು ಆಯೋಗದ ಶಿಫಾರಸ್ಸಿನ ಮೇರೆಗೆ ಈ ವರಮಾನದ ಸ್ವಲ್ಪ ಭಾಗವನ್ನು ಬಿಬಿಎಂಪಿಗೆ ರಾಜ್ಯ ಸರ್ಕಾರವು ಅನುದಾನದ ರೂಪದಲ್ಲಿ ನೀಡಿ, ಈ ಅನುದಾನವನ್ನು ಪಾರ್ಕಿಂಗ್‌ ಶುಲ್ಕದೊಂದಿಗೆ ಬಂಡವಾಳ ವೆಚ್ಚ ಅಥವಾ ನಿರ್ವಹಣಾ ವೆಚ್ಚಕ್ಕೆ ಸರಿದೂಗಿಸಿಕೊಂಡು ಬಿಬಿಎಂಪಿ ತನ್ನ ಆಯವ್ಯಯದ ಅಂದಾಜು ವೆಚ್ಚದಲ್ಲಿ ಭರಿಸಿಕೊಳ್ಳಬೇಕು. ಇದರಿಂದ ಸಾರ್ವಜನಿಕರ ಮೇಲೆ ಹೊರೆಯಾಗುವುದಿಲ್ಲ. ಇದನ್ನು ಬಿಟ್ಟು ವಾಹನ ನಿಲುಗಡೆಗೆ ಮೂಲಸೌಕರ್ಯ ಒದಗಿಸುವ ವೆಚ್ಚವನ್ನು ಪಾರ್ಕಿಂಗ್‌ ಶುಲ್ಕ ಪರಿಷ್ಕರಣೆಯಿಂದ ಭರಿಸಬಹುದು ಎಂದು ನಿರ್ಣಯಿಸಿದರೆ, ಜನರಿಗೆ ಸಹಿಸಲಾಗದ ಹೊರೆಯಾಗುವುದರಲ್ಲಿ ಸಂಶಯವಿಲ್ಲ’ ಎಂಬುದು ತಜ್ಞರ ಅಭಿಪ್ರಾಯ.

‘ಪೊಲೀಸ್‌ ಅಧಿಕಾರಿಗಳು ವಲಯ ಆಯುಕ್ತರ ಸಹಕಾರದೊಂದಿಗೆ ಈ ಜವಾಬ್ದಾರಿ ಯನ್ನು ನಿರ್ವಹಿಸುವುದು ವಾಡಿಕೆ. ಆದರೆ, ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್‌ 215 ರಲ್ಲಿ ವಲಯ ಆಯುಕ್ತರಿಗೆ, ಪೊಲೀಸ್‌ ಸಹಾಯ ದೊಂದಿಗೆ ಕೆಲವು ರಸ್ತೆಗಳಲ್ಲಿ ಕೆಲವು ರೀತಿಯ ವಾಹನ ಸಂಚಾರವನ್ನು ನಿರ್ಭಂಧಿಸುವ ಅಧಿಕಾರ ವನ್ನು ನೀಡಲಾಗಿದೆ. ಇಂತಹ ಉಪಬಂಧವನ್ನು ಕಲ್ಪಿಸಿರುವುದರಿಂದ ಗೊಂದಲ ಸೃಷ್ಟಿಯಾಗ ಬಹುದೇನೋ ಎಂದು ಭಾಸವಾಗುತ್ತಿದೆ’ ಎನ್ನುತ್ತಾರೆಸೆಂಟರ್ ಫಾರ್‌ ಅರ್ಬನ್‌ ಗವರ್ನನ್ಸ್‌ ಸ್ಟಡೀಸ್‌ ಆ್ಯಂಡ್‌ ಪಾಲಿಸಿ ರಿಸರ್ಚ್‌ ಸಂಸ್ಥೆಯ ನಿರ್ದೇಶಕ ಪಿ.ಜಿ.ಶೆಣೈ.

‘ರಸ್ತೆಗಳ ಶೇ 40ರಷ್ಟು ಜಾಗ ಪಾರ್ಕಿಂಗ್‌ಗೆ ಬಳಕೆ’
ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ನೋಂದಾಯಿತ ವಾಹನಗಳ ಸಂಖ್ಯೆ 81 ಲಕ್ಷ ದಾಟಿದೆ. 10 ವರ್ಷಗಳ ಅವಧಿಯಲ್ಲಿ ವಾಹನಗಳ ವಾರ್ಷಿಕ ಬೆಳವಣಿಗೆ ದರ ಶೇ 10 ದಾಟಿದೆ. ನಗರದ ರಸ್ತೆಗಳ ಶೇ 40ರಷ್ಟು ಸ್ಥಳವನ್ನು ವಾಹನ ನಿಲುಗಡೆಗಾಗಿ ಆಕ್ರಮಿಸಲಾಗಿದೆ. ಪಾರ್ಕಿಂಗ್‌ಗಾಗಿ ಮೀಸಲಿಟ್ಟ ತಾಣಗಳ ಕೊರತೆಯಿಂದಾಗಿ ನಿರ್ಮಾಣವಾಗಿರುವ ಪರಿಸ್ಥಿತಿ ಇದು. ಆದ್ದರಿಂದ, ಸಾರ್ವಜನಿಕರ ವಾಹನ ನಿಲುಗಡೆಗೆ ಹೆಚ್ಚುವರಿ ಸ್ಥಳಗಳ ವ್ಯವಸ್ಥೆ ಮಾಡುವುದು ಅನಿವಾರ್ಯ ಎನ್ನುತ್ತದೆ ಪಾರ್ಕಿಂಗ್‌ ನೀತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT