ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಗುಂಡಿಯಿಂದ ಅಪಘಾತ: ಗಾಯಗೊಂಡಿದ್ದ ಮಹಿಳೆ ಸಾವು

ಲುಲು ಗ್ಲೋಬಲ್ ಮಾಲ್‌ ಎದುರು ಸಂಭವಿಸಿದ್ದ ಅಪಘಾತ: ಸ್ಥಳೀಯರ ಆಕ್ರೋಶ
Last Updated 18 ಅಕ್ಟೋಬರ್ 2022, 20:46 IST
ಅಕ್ಷರ ಗಾತ್ರ

ಬೆಂಗಳೂರು: ರಾಜಾಜಿನಗರದ ಲುಲು ಗ್ಲೋಬಲ್ ಮಾಲ್‌ ಎದುರು ರಸ್ತೆ ಗುಂಡಿ ತಪ್ಪಿಸಲು ಹೋಗಿ ಸಂಭವಿಸಿದ್ದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಉಮಾದೇವಿ (42) ಅವರು ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.

‘ವಸಂತನಗರದ ಮನೆಯೊಂದರಲ್ಲಿ ಕೇರ್ ಟೇಕರ್ ಕೆಲಸ ಮಾಡುತ್ತಿದ್ದ ಉಮಾ ದೇವಿ, ಮಗಳು ವನಿತಾ (22) ಜೊತೆ ದ್ವಿಚಕ್ರ ವಾಹನದಲ್ಲಿ ಸೋಮವಾರ ಬೆಳಿಗ್ಗೆ ಹೊರಟಿದ್ದರು. ವಾಹನ ಚಲಾಯಿಸುತ್ತಿದ್ದ ವನಿತಾ, ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಮುಂದಾಗಿದ್ದರು. ಅದೇ ವೇಳೆ ಹಿಂದೆಯೇ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು’ ಎಂದು ಮಲ್ಲೇಶ್ವರ ಸಂಚಾರ ಪೊಲೀಸರು ಹೇಳಿದರು.

‘ಕೆಳಗೆ ಬಿದ್ದ ಉಮಾದೇವಿ, ಬಸ್ಸಿನಡಿ ಸಿಲುಕಿಕೊಂಡಿದ್ದರು. ತೀವ್ರ ಗಾಯಗೊಂಡಿದ್ದ ಅವರನ್ನು ರಾಜಾಜಿನಗರದ ಇಎಸ್‌ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಮಗಳು ವನಿತಾ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ’ ಎಂದು ತಿಳಿಸಿದರು.

ಮೃತದೇಹ ಹಸ್ತಾಂತರ: ‘ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಉಮಾದೇವಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ವನಿತಾ ಹಾಗೂ ಉಮಾದೇವಿ ಇಬ್ಬರೂ ಹೆಲ್ಮೆಟ್ ಧರಿಸಿದ್ದರು. ರಸ್ತೆ ಗುಂಡಿಯಿಂದ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸ್ಥಳ ಪರಿಶೀಲಿಸಿ, ತನಿಖೆ ಮುಂದುವರಿಸಲಾಗಿದ್ದು, ರಸ್ತೆ ಗುಂಡಿಯಿಂದ ಅಪಘಾತವಾಗಿರುವುದು ಖಾತ್ರಿ ಯಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಎರಡನೇ ಸಾವು, ಸ್ಥಳೀಯರ ಆಕ್ರೋಶ: ‘ಓಕಳಿಪುರ– ರಾಜಾಜಿನಗರ ಮಾರ್ಗದಲ್ಲಿರುವ ಲುಲು ಗ್ಲೋಬಲ್ ಮಾಲ್ ಎದುರಿನ ಕೆಳ ಸೇತುವೆಯಲ್ಲಿ 2021ರ ಡಿ.5ರಂದು ಬಿಎಂಟಿಸಿ ಬಸ್‌, ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಸವಾರ ಕೋಲಾರ ಜಿಲ್ಲೆಯ ಮುಳಬಾಗಿಲಿನ ವಿಶ್ವನಾಥ್ (23) ಮೃತಪಟ್ಟಿದ್ದರು. ಇದೀಗ ಇದೇ ಸ್ಥಳದ ಸಮೀಪದಲ್ಲೇ ಅಪಘಾತ ಸಂಭವಿಸಿದ್ದು, ಭಯದಲ್ಲಿ ವಾಹನ ಚಲಾಯಿಸುವಂತಾಗಿದೆ’ ಎಂದು ಓಕಳಿಪುರ ನಿವಾಸಿ ರಾಮಚಂದ್ರ ಹೇಳಿದರು.

‘ಬಿ.ಕಾಂ ವಿದ್ಯಾರ್ಥಿ ವಿಶ್ವನಾಥ್ ಸಾವು ಖಂಡಿಸಿ ರಸ್ತೆ ಸಂಚಾರ ತಡೆದು ಸ್ಥಳೀಯರೆಲ್ಲರೂ ಪ್ರತಿಭಟನೆ ಮಾಡಿದ್ದೆವು. ಹದಗೆಟ್ಟಿರುವ ರಸ್ತೆ ದುರಸ್ತಿ ಮಾಡುವಂತೆ ಆಗ್ರಹಿಸಿದ್ದೆವು. ಆದರೆ, ಬಿಬಿಎಂಪಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅವರ ನಿರ್ಲಕ್ಷ್ಯದಿಂದಲೇ ಇದೀಗ ಮತ್ತೊಂದು ಅಪಘಾತ ಸಂಭವಿಸಿ, ಮಹಿಳೆ ಮೃತಪಟ್ಟಿದ್ದಾರೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT