ಇಲಾಖೆ ಅಧೀನಕ್ಕೆ 29,623 ಕೆರೆಗಳು: ‍ಪುಟ್ಟರಾಜು

7
ಸಣ್ಣ ನೀರಾವರಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಶರಣಪ್ಪ ಮಟ್ಟೂರ

ಇಲಾಖೆ ಅಧೀನಕ್ಕೆ 29,623 ಕೆರೆಗಳು: ‍ಪುಟ್ಟರಾಜು

Published:
Updated:

ಬೆಂಗಳೂರು: ‘ಸಣ್ಣ ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ’ ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಶರಣಪ್ಪ ಮಟ್ಟೂರ ಆರೋಪಿಸಿದರು.

ವಿಧಾನ ಪರಿಷತ್‌ನಲ್ಲಿ ಮಂಗಳವಾರ ಸಣ್ಣ ನೀರಾವರಿ ಇಲಾಖೆಯ ಕೆರೆಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು. ‘ನಾವೇನೂ ಇಲ್ಲಿ ವಿರೋಧ ಮಾಡಬೇಕಿಲ್ಲ. ಆಡಳಿತ ಪಕ್ಷದಲ್ಲೇ ವಿರೋಧ ಮಾಡುವವರೂ ಇದ್ದಾರೆ’ ಎಂದು ಬಿಜೆಪಿ ಸದಸ್ಯರು ಛೇಡಿಸಿದರು.  ‘ನಾನು ಇಲ್ಲಿ ಯಾವುದೇ ಆಧಾರ ಇಲ್ಲದೆ ಮಾತನಾಡುತ್ತಿಲ್ಲ. ಕೊಪ್ಪಳದಲ್ಲಿ ಕೆರೆ ಅಭಿವೃದ್ಧಿ ಹೆಸರಿನಲ್ಲಿ ₹38 ಕೋಟಿ ಅವ್ಯವಹಾರ ನಡೆದಿದೆ’ ಎಂದು ಮಟ್ಟೂರ ಹೇಳಿದರು.

ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಪ್ರತಿಕ್ರಿಯಿಸಿ, ‘ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದ್ದು, 26 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ’ ಎಂದರು. ‘ಕೆರೆ ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ ಮಾರ್ಚ್‌ನಲ್ಲಿ ತಿದ್ದುಪಡಿ ತರಲಾಗಿದ್ದು, ಇಲಾಖೆಯ ವ್ಯಾಪ್ತಿಗೆ 29,623 ಕೆರೆಗಳು ಬಂದಿವೆ. ಅವುಗಳ ಅಭಿವೃದ್ಧಿಗೆ ಬದ್ಧ’ ಎಂದು ಅವರು ಹೇಳಿದರು.

ಜೆಡಿಎಸ್‌ನ ಎಸ್‌.ಎಲ್‌.ಭೋಜೇಗೌಡ, ‘ಜಲಮೂಲಗಳ ನೀರಿನ ಸಂಗ್ರಹಣಾ ಸಾಮರ್ಥ್ಯ ಶೇ 50ಕ್ಕೆ ಇಳಿದಿದೆ. ಅವುಗಳ ಹೂಳೆತ್ತುವ ವಿಧಾನವೇ ಅವೈಜ್ಞಾನಿಕವಾಗಿದೆ. ಕೆರೆಯ ಆಜುಬಾಜಿನ ಜಾಗವನ್ನು ಬಗರ್‌ಹುಕುಂ ಹೆಸರಿನಲ್ಲಿ ಸಕ್ರಮ ಮಾಡಲಾಗುತ್ತಿದೆ. ಇದರಲ್ಲಿ ರಾಜಕಾರಣಿಗಳ ಹಾಗೂ ಅಧಿಕಾರಿಗಳ ಕೈವಾಡ ಇದೆ’ ಎಂದು ಆರೋಪಿಸಿದರು.

ಜೆಡಿಎಸ್‌ನ ಕೆ.ಟಿ.ಶ್ರೀಕಂಠಗೌಡ, ‘ವರುಣಾ ಹಾಗೂ ನಂಜನಗೂಡು ಕ್ಷೇತ್ರಗಳ ಕೆರೆಗಳ ಬಗ್ಗೆ ಎಂಪ್ರಿ ವೈಜ್ಞಾನಿಕ ಸಮೀಕ್ಷೆ ನಡೆಸಿದೆ. ವೈಜ್ಞಾನಿಕವಾಗಿ ರಾಜ್ಯದ ಎಲ್ಲ ಕೆರೆಗಳ ಸರ್ವೆ ನಡೆಸಬೇಕು’ ಎಂದು ಆಗ್ರಹಿಸಿದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !