ಭಾವಗೀತೆ ಶ್ರೀಮಂತಗೊಳಿಸಿದ ಲಕ್ಷ್ಮೀನಾರಾಯಣ ಭಟ್ಟ: ಮೀರಾ

ಬೆಂಗಳೂರು: ‘ಕನ್ನಡ ಭಾವಗೀತಾ ಲೋಕಕ್ಕೆ ಮಹತ್ತರ ಕೊಡುಗೆ ನೀಡಿರುವ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ನವ್ಯಕಾವ್ಯದ ಪ್ರಭಾವದಿಂದ ಭಾವಗೀತೆಗಳು ರಚನೆಯಾಗದಿದ್ದ ಕಾಲದಲ್ಲಿ ಅವುಗಳನ್ನು ರಚಿಸಿ ಮರುಜೀವ ನೀಡಿದರು‘ ಎಂದು ಲೇಖಕಿ ಎಲ್.ಜಿ.ಮೀರಾ ಹೇಳಿದರು.
ಅವರು ಕರ್ನಾಟಕ ಸುಗಮ ಸಂಗೀತ ಪರಿಷತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಭಾನುವಾರ ನಗರದ ಅಶ್ವತ್ಥ್ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಅವರಿಗೆ ’ಗೀತ ಗೌರವ’ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿದರು.
‘ಅನೇಕ ಸುಗಮ ಸಂಗೀತ ಕಲಾವಿದರನ್ನು ಬೆಳೆಸಿದ ಅವರು, ನಾಡಿಗೆ ಸಂತ ಶಿಶುನಾಳ ಷರೀಫರನ್ನು ಪರಿಚಯಿಸುವ ಮೂಲಕ ಷರೀಫ ಭಟ್ಟ ಎಂದು ಪ್ರಸಿದ್ಧರಾಗಿದ್ದಾರೆ. ಮಕ್ಕಳ ಸಾಹಿತ್ಯದಿಂದ ಹಿಡಿದು ಅನೇಕ ವಿಮರ್ಶಾತ್ಮಕ, ಸಂಶೋಧನಾ ಸಾಹಿತ್ಯ ಕೃತಿಗಳನ್ನು ಬರೆದ ಅವರು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ‘ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಹಂಪ ನಾಗರಾಜಯ್ಯ, ‘60ಕ್ಕೂ ಹೆಚ್ಚು ವರ್ಷಗಳಿಂದ ಮಿತ್ರರಾಗಿದ್ದ ಭಟ್ಟರೊಂದಿಗೆ ಕಳೆದ ಕ್ಷಣಗಳು ಅವಿಸ್ಮರಣೀಯ. ಸಾಹಿತ್ಯದ ಜೊತೆಗೆ ಸಂಗೀತದ ಜ್ಞಾನವನ್ನೂ ಹೊಂದಿದ್ದ ಅವರು ಅನೇಕ ಗೀತೆಗಳಿಗೆ ಸಂಗೀತ ಸಂಯೋಜಿಸಿದ್ದರು. ಅವರು ಕನ್ನಡ ಭಾವಗೀತಾ ಲೋಕವನ್ನು ಶ್ರೀಮಂತಗೊಳಿಸಲು ಬಂದ ಅವತಾರ ಪುರುಷ. ಎಲ್ಲಿಯವರೆಗೆ ಭಾವಗೀತೆಗಳನ್ನು ಹಾಡುವ ಕಲಾವಿದರು ಇರುತ್ತಾರೆಯೋ ಅಲ್ಲಿಯವರೆಗೆ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಜೀವಂತ‘ ಎಂದು ಹೇಳಿದರು.
ಲಕ್ಷ್ಮೀನಾರಾಯಣ ಭಟ್ಟ ಅವರ ಪತ್ನಿ ಜ್ಯೋತಿ , ಕವಿ ಬಿ.ಆರ್.ಲಕ್ಷ್ಮಣ ರಾವ್, ಪತ್ರಕರ್ತ ಜಿ.ಎನ್.ರಂಗನಾಥ ರಾವ್, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ, ಕಾರ್ಯದರ್ಶಿ ನಗರ ಶ್ರೀನಿವಾಸ ಉಡುಪ, ಡಾ.ಕಿಕ್ಕೇರಿ ಕೃಷ್ಣಮೂರ್ತಿ ಇದ್ದರು. ಸುಗಮ ಸಂಗೀತ ಗಾಯಕರು ಗೀತ ಗೌರವ ನಡೆಸಿಕೊಟ್ಟರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.