ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lalbagh | ಸ್ವಾತಂತ್ರ್ಯೋತ್ಸವ: ಪುಷ್ಪಗಳಲ್ಲಿ ಅರಳುತ್ತಿರುವ ಡಾ.ರಾಜ್, ಪುನೀತ್

ಸ್ವಾತಂತ್ರ್ಯೋತ್ಸವ: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಪುಷ್ಪ ವೈಭವ ನಾಳೆಯಿಂದ ಆರಂಭ
Last Updated 3 ಆಗಸ್ಟ್ 2022, 21:30 IST
ಅಕ್ಷರ ಗಾತ್ರ

ಬೆಂಗಳೂರು: ವಾಯುವಿಹಾರಿಗಳ ನೆಚ್ಚಿನ ತಾಣ ಲಾಲ್‌ಬಾಗ್‌ ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಒಂದೆಡೆ ಬಣ್ಣ ಬಣ್ಣದ ತರಹೇವಾರಿ ಹೂವುಗಳು ‘ಸಿಲಿಕಾನ್‌ ಸಿಟಿ’ಯ ಜನರನ್ನು ಸೆಳೆಯುತ್ತಿದ್ದರೆ, ಮತ್ತೊಂದಡೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ಡಾ.ರಾಜ್, ಪುನೀತ್ ಪರಿಕಲ್ಪನೆ ಆಧಾರಿತ ಫಲಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೋಟಗಾರಿಕೆ ಇಲಾಖೆ ಸಚಿವ ಕೆ.ಮುನಿರತ್ನ, ‘ಕನ್ನಡ ಚಿತ್ರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿರುವ ನಟರಾದ ದಿವಂಗತ ಡಾ.ರಾಜ್‌ಕುಮಾರ್ ಮತ್ತು ಪುನೀತ್‌ ರಾಜ್‌ಕುಮಾರ್ ಅವರಿಗೆ ಈ ವರ್ಷ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಪುಷ್ಪ ಗೌರವ ಸಲ್ಲಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ರಾಜ್‌ ಅವರ ಗಾಜನೂರಿನ ಮನೆ ಮತ್ತು ಅನಾಥ ಮಕ್ಕಳಿಗೆ ಬೆಳಕಾದ ‘ಶಕ್ತಿಧಾಮ’ ಮತ್ತು ಪುಷ್ಪ ಮಾದರಿ ಪ್ರದರ್ಶನಕ್ಕೆ ಅಣಿಯಾಗುತ್ತಿದೆ. ಜೊತೆಗೆ ಡಾ.ರಾಜ್‌ ಮತ್ತು ಪುನೀತ್‌ ಅವರ ಪ್ರಸಿದ್ಧ ಚಿತ್ರಗಳಲ್ಲಿ ನಟಿಸಿದ ಪ್ರತಿಮೆಗಳನ್ನು ಸ್ಥಾಪಿಸಿ ಪುಷ್ಪಾಲಂಕಾರದಲ್ಲಿ ಕಂಗೊಳಿಸಲಿವೆ.

‘ತೋಟಗಾರಿಕೆ ಇಲಾಖೆ, ಮೈಸೂರು ಉದ್ಯಾನ ಕಲಾ ಸಂಘವು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ 212ನೇ ಫಲಪುಷ್ಪ ಪ್ರದರ್ಶನ ಇದಾಗಿದೆ. ರಾಜ್‌ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ರ ವಿಶೇಷ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಇದೇ 5ರಿಂದ 15ರ ತನಕ ಫಲಪುಷ್ಪ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗುತ್ತಿದೆ’ ಎಂದು ತಿಳಿಸಿದರು.

‘ಆಗಸ್ಟ್‌ 5ರಂದು ಬೆಳಿಗ್ಗೆ 8ರಂದು ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್‌, ಪುನೀತ್‌ ರಾಜ್‌ಕುಮಾರ್ ಸ್ಮಾರಕ ಸ್ಥಳದಿಂದ ಲಾಲ್‌ಬಾಗ್‌ ಗಾಜಿನ ಮನೆಯವರಿಗೆ ಜ್ಯೋತಿಯಾತ್ರೆ ಮತ್ತು ಸೈಕಲ್‌ ಜಾಥಾ ನಡೆಯಲಿದೆ. ಫಲಪುಷ್ಪ ಪ್ರದರ್ಶನಕ್ಕೆ ಬೆಳಿಗ್ಗೆ 11ಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ ನೀಡಿಲಿದ್ದಾರೆ’ ಎಂದರು. ಡಾ. ರಾಜ್‌,ಪಾರ್ವತಮ್ಮ, ಪುನೀತ್‌ ಅವರ 3.5 ಅಡಿ ಎತ್ತರದ ಪುತ್ಥಳಿಗಳಿಗೆ ಒಂದೇ ಪೀಠದಲ್ಲಿ ಸ್ಥಾಪಿಸಲಾಗುವುದು. ಗಾಜಿನ ಮನೆಯ 10 ಮೂಲೆಗಳಲ್ಲಿ ಕುಂಡದಲ್ಲಿ ಬೆಳೆದ ಹೂ ಕುಂಡಗಳ ಜೋಡಣೆಯಿಂದ ಪುಷ್ಪ ಪಿರಮಿಡ್‌ಗಳ ರಚಿಸ ಲಾಗುತ್ತಿದೆ.

ಫಲಪುಷ್ಪ ಪ್ರದರ್ಶನದ ಆಕರ್ಷಣೆಗಳು

*30 ಅಡಿ ಉದ್ದ 15 ಅಡಿ ಅಗಲ ಹಾಗೂ 13 ಅಡಿ ಎತ್ತರದ ಡಾ.ರಾಜ್‌ಕುಮಾರ್‌ ಅವರ ಗಾಜನೂರಿನ ಮನೆಯ ಹೂವಿನ ಪ್ರತಿಕೃತಿ

*30 ಅಡಿ ಎತ್ತರದ ಪುನೀತ್‌ ರಾಜ್‌ಕುಮಾರ್ ಅವರ ಚಿನ್ನ ಲೇಪಿತ ಪ್ರತಿಮೆ

*10 ಅಡಿ ಎತ್ತರದ ಡಾ.ರಾಜ್‌ಕುಮಾರ್ ಅವರ ಮಯೂರ ಪಾತ್ರದ ಪ್ರತಿಮೆ

*12 ಅಡಿ ಎತ್ತರದ ಪುನೀತ್‌ ರಾಜ್‌ಕುಮಾರ್ ಅವರ ಪ್ರತಿಮೆ

*16 ಅಡಿ ಅಗಲದ 14 ಅಡಿ ಎತ್ತರದ ರಾಜ್‌ಕುಮಾರ್ ಅವರ ಸಿಂಹಾಸನಾರೂಢ ರಣಧೀರ ಕಂಠೀರವ ಪ್ರತಿಮೆ

*10 ಅಡಿ ಎತ್ತರದ ಬಹದ್ದೂರ್ ಗಂಡು (ರಾಜ್‌ಕುಮಾರ್), 4 ಅಡಿ ಎತ್ತರದ ರಾಘವೇಂದ್ರಸ್ವಾಮಿ ಪ್ರತಿಮೆ

*15 ಅಡಿ ಉದ್ದ, 12 ಅಡಿ ಅಗಲ ಹಾಗೂ 6 ಅಡಿ ಎತ್ತರದ ವರ್ಟಿಕಲ್‌ ಗಾರ್ಡನ್‌ನಲ್ಲಿ ಅರಳುವ ಮೆಗಾ ಕ್ಯಾಮೆರಾ

*20 ಅಡಿ ಉದ್ದ 12 ಅಡಿ ಅಗಲ ಮತ್ತು 13 ಅಡಿ ಎತ್ತರದ ಶಕ್ತಿಧಾಮದ ಹೂವಿನ ಪ್ರತಿಕೃತಿ

*ಡಾ.ರಾಜ್‌ಕುಮಾರ್ ಮತ್ತು ಪುನೀತ್‌ ರಾಜ್‌ಕುಮಾರ್ ಅವರ ವಿಶೇಷ ಆರ್ಕಷಣೆಯುಳ್ಳ ಪುಷ್ಪಾಲಂಕಾರದ ಪ್ರತಿಮೆಗಳ ಸ್ಥಾಪನೆ

*ಮರಳಿನಲ್ಲಿ ಡಾ.ರಾಜ್ ಮತ್ತು ಪುನೀತ್‌ರಾಜ್‌ಕುಮಾರ್‌ ಅವರ ಪ್ರತಿಕೃತಿ ರಚನೆ

ವಾಹನ ನಿಲುಗಡೆ ಎಲ್ಲಿ?

*ಹಾಪ್‌ಕಾಮ್ಸ್‌ ಆವರಣ ಮತ್ತು ವಿಲ್ಸನ್ ಗಾರ್ಡನ್‌ನಲ್ಲಿರುವ ಹೊಂಬೇಗೌಡ ಕ್ರೀಡಾಂಗಣ

*ಶಾಂತಿನಗರ ಬಸ್‌ನಿಲ್ದಾಣದಬಹುಮಹಡಿ ವಾಹನ ನಿಲ್ದಾಣ

*ಜೆ.ಸಿ.ರಸ್ತೆಯ ಮಯೂರ ರೆಸ್ಟೋರೆಂಟ್‌ ಬಳಿಯ ಪಾಲಿಕೆ ಕಟ್ಟಡ

*ಅಲ್‌ ಅಮೀನ್‌ ಕಾಲೇಜು ಮೈದಾನ

ಪ್ರವೇಶ ಶುಲ್ಕ ಹೀಗಿದೆ...

*ವಯಸ್ಕರಿಗೆ ₹ 70,

*ರಜೆ ದಿನಗಳಲ್ಲಿ ₹80

*ಮಕ್ಕಳಿಗೆ ₹ 30

*ಶಾಲಾ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ

ಪ್ರದರ್ಶನದ ಸಮಯ: ಬೆಳಿಗ್ಗೆ 7ರಿಂದ ಸಂಜೆ 7ರ ವರೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT