ಶುಕ್ರವಾರ, ಮೇ 27, 2022
22 °C
ತೋಟಗಾರಿಕೆ ಇಲಾಖೆಯಿಂದ ಯೋಜನೆ

ಲಾಲ್‌ಬಾಗ್ ಉದ್ಯಾನ: ಉದುರಿದ ಎಲೆಗಳಿಂದ ಗೊಬ್ಬರ ತಯಾರಿ

ಮನೋಹರ್ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಲ್‌ಬಾಗ್ ಉದ್ಯಾನದಲ್ಲಿರುವ ಮರಗಳಿಂದ ಉದುರುವ ಎಲೆಗಳನ್ನು ಬಳಸಿ, ಗೊಬ್ಬರ ತಯಾರಿಸುವ ಕಾರ್ಯಕ್ಕೆ ತೋಟಗಾರಿಕೆ ಇಲಾಖೆ ಮುಂದಾಗಿದೆ.

ಉದುರಿದ ಎಲೆಗಳನ್ನು ವಿಲೇವಾರಿ ಮಾಡುವ ಬದಲು ಅದರಿಂದಲೇ ಗೊಬ್ಬರ ತಯಾರಿಸಿ, ಉದ್ಯಾನದಲ್ಲಿರುವ ಮರ–ಗಿಡಗಳಿಗೆ ಮರುಬಳಸಿಕೊಳ್ಳಲು ಈ ಯೋಜನೆ ರೂಪಿಸಿದೆ.

‘ಲಾಲ್‌ಬಾಗ್‌ನಲ್ಲಿ ಸಾವಿರಾರು ಮರಗಳಿವೆ. ಇವುಗಳಿಂದ ಪ್ರತಿದಿನ ಉದುರುವ ಒಣಎಲೆಗಳು ಹೆಚ್ಚು ಪ್ರಮಾಣದಲ್ಲಿ ಸಂಗ್ರಹವಾಗುತ್ತಿತ್ತು. ಇದರ ವಿಲೇವಾರಿಗೂ ತುಸು ಸಮಸ್ಯೆಯಾಗಿತ್ತು. ಹಾಗಾಗಿ, ಎಲೆಗಳಿಂದ ಉದ್ಯಾನದಲ್ಲೇ ‘ಎರೆಹುಳು ಗೊಬ್ಬರ’ ತಯಾರಿಸಲಾಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ (ಲಾಲ್‌ಬಾಗ್‌) ಜಿ.ಕುಸುಮಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲೆ ಹಾಗೂ ಸಗಣಿಗೆ ಕೃಷಿ ತ್ಯಾಜ್ಯವನ್ನೂ ಸೇರಿಸಬೇಕು. ಇವುಗಳ ಸಂಯೋಜನೆಯಿಂದ ಗೊಬ್ಬರ ತಯಾರಾಗಲು ಎರೆಹುಳುಗಳನ್ನು ಪ್ರಧಾನವಾಗಿ ಬಳಸಬೇಕು. ನಾಲ್ಕು ಅಥವಾ ಐದು ತಿಂಗಳ ಅವಧಿಯಲ್ಲಿ ಉತ್ತಮವಾದ ಎರೆಹುಳು ಗೊಬ್ಬರ ಸಿದ್ಧವಾಗುತ್ತದೆ’ ಎಂದು ವಿವರಿಸಿದರು.

‘ಚಳಿಗಾಲದಲ್ಲಿ ಎಲೆಗಳು ಹೆಚ್ಚಿನ ಪ್ರಮಾಣದಲ್ಲಿ ಉದುರುತ್ತವೆ. ಉದ್ಯಾನದಲ್ಲಿ ಎಲೆಗಳು ಮಾತ್ರವಲ್ಲದೆ, ಸಸಿಗಳನ್ನು ವಿನ್ಯಾಸಗೊಳಿಸುವ ವೇಳೆಯೂ ಹಸಿ ತ್ಯಾಜ್ಯ ಸಂಗ್ರಹವಾಗುತ್ತದೆ. ಅವುಗಳನ್ನು ಪ್ರತಿದಿನ ಸಂಗ್ರಹಿಸಿ, ಒಂದು ಗುಂಡಿಯಲ್ಲಿ ಹಾಕಲಾಗುತ್ತದೆ. ಬಳಿಕ ಕೃಷಿ ತ್ಯಾಜ್ಯ, ಸಗಣಿ ಹಾಗೂ ಎರೆಹುಳುಗಳನ್ನು ಸೇರಿಸಲಾಗುವುದು. ಕೆಲ ದಿನಗಳ ನಂತರ ಅವು ಕೊಳೆಯಲಾರಂಭಿಸುತ್ತವೆ. ಇವು ಕ್ರಮೇಣ ಗೊಬ್ಬರವಾಗಿ ಪರಿವರ್ತನೆಗೊಳ್ಳುತ್ತವೆ. ಇದಕ್ಕಾಗಿ ಉದ್ಯಾನದಲ್ಲಿ ಪ್ರತ್ಯೇಕ ಜಾಗ ನಿಗದಿಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಸದ್ಯ ಉದ್ಯಾನದಲ್ಲಿ ನೈಸರ್ಗಿಕ ವಿಧಾನದಲ್ಲಿ ಎರೆಹುಳು ಗೊಬ್ಬರ ತಯಾರಿಸಲಾಗುತ್ತಿದೆ. ಎರೆಹುಳುಗಳಿಗೆ ಒಂದು ಬಾರಿ ಬಂಡವಾಳ ಹಾಕಿದರೆ, ಅವುಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತವೆ. ಮತ್ತೆ ಗೊಬ್ಬರ ತಯಾರಿಸುವಾಗ ಇದೇ ಎರೆಹುಳುಗಳನ್ನು ಬಳಸಿಕೊಳ್ಳಬಹುದು’ ಎಂದರು.

ಕಬ್ಬನ್‌ ಉದ್ಯಾನದಲ್ಲೂ ಬಳಕೆ: ‘ಈ ಹಿಂದೆ ಕಬ್ಬನ್ ಉದ್ಯಾನದಲ್ಲಿ ಇದೇ ಮಾದರಿಯಲ್ಲಿ ಗೊಬ್ಬರ ತಯಾರಿಸುವುದನ್ನು ಆರಂಭಿಸಲಾಗಿತ್ತು. ಗೊಬ್ಬರವನ್ನು ಉದ್ಯಾನಕ್ಕೆ ಬಳಸಿಕೊಳ್ಳಲಾಗುತ್ತಿದೆ’ ಎಂದೂ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು