ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರೆ ಹಾವುಗಳ ರಕ್ಷಿಸಿದ ಡ್ಯಾನಿಯಲ್‌

ವಿದ್ಯಾಗಿರಿ ನಿವಾಸಿಗಳ ಆತಂಕ ದೂರ ಮಾಡಿದ ಉರಗ ತಜ್ಞ; ಹಾವು ಹಿಡಿಯುವ ಕಾರ್ಯಕ್ಕೆ ಅಣ್ಣ ನಿತಿನ್ ಪ್ರೇರಣೆ
Last Updated 29 ಮಾರ್ಚ್ 2018, 5:24 IST
ಅಕ್ಷರ ಗಾತ್ರ

ಬಾಗಲಕೋಟೆ: ಇಲ್ಲಿ ವಿದ್ಯಾಗಿರಿಯ ಮನಗೂಳಿ ಪರಿವಾರದ ಸೀತಾರಾಮ ಕಲ್ಯಾಣ ಮಂಟಪ ಹಿಂಭಾಗ ಬುಧವಾರ ಎರಡು ಕೇರೆ ಹಾವುಗಳನ್ನು ಉರಗತಜ್ಞ ಡ್ಯಾನಿಯಲ್ ನ್ಯೂಟನ್ ಹಿಡಿದರು. ಇದರಿಂದ ಸ್ಥಳೀಯರಲ್ಲಿ ಮನೆ ಮಾಡಿದ್ದ ಆತಂಕ ದೂರವಾಯಿತು.

ಮನೆಯ ಎದುರು ಮಿಲನ ಕ್ರಿಯೆಯಲ್ಲಿ ತೊಡಗಿಕೊಂಡಿದ್ದ ಎರಡು ಭರ್ಜರಿ ಗಾತ್ರದ ಹಾವುಗಳು ಕಂಡ ಕೆಲಸಗಾರರು ಮಾಲೀಕರಿಗೆ ವಿಷಯ ಮುಟ್ಟಿಸಿದ್ದರು. ಈ ವೇಳೆ ಜನ ಸೇರುತ್ತಿದ್ದಂತೆಯೇ ಒಂದು ಹಾವು ಸಮೀಪದ ಇಟ್ಟಿಗೆ ರಾಶಿಯ ನಡುವೆ ಸೇರಿಕೊಂಡಿತು. ಇನ್ನೊಂದು ಮನೆಯ ನೆಲಮಟ್ಟದ ನೀರಿನ ಟ್ಯಾಂಕ್‌ನಲ್ಲಿ ಬಿದ್ದಿತ್ತು.

ವಿಷಯ ತಿಳಿದು ಸ್ಥಳಕ್ಕೆ ಬಂದ ಡ್ಯಾನಿಯಲ್‌ ಸುಮಾರು 8 ಅಡಿ ಉದ್ದದ ಎರಡು ಹಾವುಗಳನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟರು. ಜೀವದ ಹಂಗು ತೊರೆದು ಹಾವುಗಳಿಗೆ ಯಾವುದೇ ತೊಂದರೆಯಾಗದಂತೆ ಅವುಗಳನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟ ಡ್ಯಾನಿಯಲ್ ಕೆಲಸ ಸ್ಥಳೀಯರ ಮೆಚ್ಚುಗೆಗೆ ಕಾರಣವಾಯಿತು.

ಉರಗ ಸ್ನೇಹಿತ: ಹಾವುಗಳ ಕಂಡರೆ ಮಾರು ದೂರ ಹಾರುವವರ ನಡುವೆ ನಗರದಲ್ಲಿ ಉರಗ ಸ್ನೇಹಿತ ಎಂದೇ ಡ್ಯಾನಿಯಲ್ ನ್ಯೂಟನ್ ಪರಿಚಿತರಾಗಿದ್ದಾರೆ. ಇಲ್ಲಿಯವರೆಗೆ ಸುಮಾರು 700ಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಜಿಲ್ಲೆಯಲ್ಲಿ ಸುಮಾರು 16 ಪ್ರಭೇದಗಳ ಹಾವುಗಳು ಇದ್ದು, ಅದರಲ್ಲಿ ಐದು ಜಾತಿಯ ಹಾವುಗಳು ಅತ್ಯಂತ ವಿಷಕಾರಿ ಎಂದು ಹೇಳುತ್ತಾರೆ.

ಅಣ್ಣನೇ ಪ್ರೇರಣೆ: ‘ಹಾವು ಹಿಡಿಯುವ ಕಾರ್ಯಕ್ಕೆ ಅಣ್ಣ ನಿತಿನ್ ಪ್ರೇರಣೆ. ಮೊದಲು ಅವರೇ ಹಾವು ಹಿಡಿದು ಕಾಡಿಗೆ ಬಿಡುತ್ತಿದ್ದರು. ದೂರದಿಂದ ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಮುಂದೆ ನಾನೂ ಅದನ್ನು ರೂಢಿಸಿಕೊಂಡೆ’ ಎಂದು ತಮ್ಮ ಅನುಭವ ಹಂಚಿಕೊಂಡರು.

ರೋಲ್ ಮಾಡೆಲ್: ಕೇರಳದ ಬಾಬಾ ಸುರೇಶ್ ಹಾಗೂ ಆಗುಂಬೆಯ ಗೌರಿ ಶಂಕರ ನನಗೆ ಮಾದರಿ ಎಂದು ಹೇಳುವ ಅವರೊಟ್ಟಿಗೆ ಸದ್ಯ ಗೆಳೆಯರಾದ ಮಹಮ್ಮದ್ ಶಫಿ ಹಾಗೂ ಡೇವಿಡ್ ಹಾವುಗಳ ರಕ್ಷಣೆಗೆ ಕೈಜೋಡಿಸಿದ್ದಾರೆ. 

**

ಹಾವುಗಳು ಮಿಲನ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಸಮಯ ಇದಾಗಿದ್ದು, ಈ ವೇಳೆ ಅವುಗಳಿಗೆ ತೊಂದರೆ ಕೊಡಬಾರದು – ಡ್ಯಾನಿಯಲ್ ನ್ಯೂಟನ್,ಉರಗ ಸ್ನೇಹಿ.

31 ಬಾರಿ ಹಾವು ಕಚ್ಚಿದೆ!

ಈಗಾಗಲೇ 31 ಬಾರಿ ಹಾವುಗಳಿಂದ ಕಚ್ಚಿಸಿಕೊಂಡಿದ್ದೇನೆ. ಮೂರು ಬಾರಿ ನಾಗರಹಾವು ಕಚ್ಚಿದೆ. ಹಾವು ಕಡಿದಾಗ ಭಯ ಪಡುವ ಅಗತ್ಯವಿಲ್ಲ. ಆದರೆ ಭಯಪಟ್ಟೇ ಅಧಿಕ ಮಂದಿ ಸಾಯುತ್ತಾರೆ ಎಂದು ಡ್ಯಾನಿಯಲ್‌ ಹೇಳುತ್ತಾರೆ.

ಕಾಮನ್ ವೇಯ್ನ್ ಸ್ನೇಕ್, ರಸೆಲ್ ವೈಪರ್ ಸ್ನೇಕ್, ಕೋಬ್ರಾ, ಕಾಮನ್ ಕ್ರೇಟ್, ರ್‍ಯಾಟ್ ಸ್ನೇಕ್, ಗ್ರೀನ್ ಕೀಲ್ ಬ್ಯಾಕ್ ಸ್ನೇಕ್, ಚೆಕರಡ್ ಕೀಲ್ ಬ್ಯಾಕ್ ವಾಟರ್ ಸ್ನೇಕ್, ಡ್ಯುಮೆರಿಲ್ಸ್ ಬ್ಲಾಕ್ ಹೆಡೆಡ್ ಸ್ನೇಕ್ ಸೇರಿದಂತೆ 16ಕ್ಕೂ ಹೆಚ್ಚು ಪ್ರಭೇದಗಳ ಹಾವುಗಳನ್ನು ಇಲ್ಲಿಯವರೆಗೂ ರಕ್ಷಿಸಿರುವೆ ಎಂದು ಹೇಳುವ ಡೇನಿಯಲ್, ಅವುಗಳನ್ನು ಹಿಡಿದ ದಿನಾಂಕ, ಸ್ಥಳದ ಮಾಹಿತಿಯನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಹ್ಹಾ ಹಾವು ಕಂಡರೆ ಹೆದರಬೇಡಿ, ಡ್ಯಾನಿಯಲ್‌ಗೆ ಕರೆ ಮಾಡಿ. ಸಂಪರ್ಕ ಸಂಖ್ಯೆ 90089–56267.

ಮಹಾಂತೇಶ್ ಮಸಾಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT