ಶನಿವಾರ, ಫೆಬ್ರವರಿ 22, 2020
19 °C

ಫಲಪುಷ್ಪ ಪ್ರದರ್ಶನ: 36 ಸಾವಿರ ಮಂದಿ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ಒಟ್ಟು 36 ಸಾವಿರ ಮಂದಿ ಭೇಟಿ ನೀಡಿದರು. ಮೊದಲೆರಡು ದಿನಗಳಿಗೆ ಹೋಲಿಸಿದರೆ ಫಲಪುಷ್ಪ ಪ್ರದರ್ಶನ ವೀಕ್ಷಿಸಿದವರ ಸಂಖ್ಯೆ ದ್ವಿಗುಣಗೊಂಡಿದೆ. 

ತೋಟಗಾರಿಕೆ ಇಲಾಖೆ ಗಾಜಿನ ಮನೆಯಲ್ಲಿ ಆಯೋಜಿಸಿರುವ ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ, ವಿವೇಕಾನಂದರು ಅಮೆರಿಕದ ಷಿಕಾಗೊದಲ್ಲಿ ಭಾಷಣ ಮಾಡಿದ ಸಂದರ್ಭವನ್ನು ಕಟ್ಟಿಕೊಡಲಾಗಿದೆ.

ಅವರ ಭಾಷಣದ ಧ್ವನಿಮುದ್ರಿಕೆಯನ್ನು ಪ್ರಸಾರ ಮಾಡಲಾಗುತ್ತಿದೆ. ಇದು ಸ್ವತಃ ವಿವೇಕಾನಂದರೇ ಭಾಷಣ ಮಾಡುತ್ತಿದ್ದಾರೇನೋ ಎಂಬ ಭಾವನೆ ಮೂಡಿಸುತ್ತಿದೆ. ಪ್ರದರ್ಶನಕ್ಕೆ ಭೇಟಿ ನೀಡಿದವರು ಕೆಲಕಾಲ ಪ್ರತಿಮೆ ಎದುರು ನಿಂತು ಭಾಷಣ ಆಲಿಸಿದರು.

ಬೇಳೆಕಾಳುಗಳಿಂದ ತಯಾರಿಸಿರುವ ಸ್ವಾಮಿ ವಿವೇಕಾನಂದರ ಪ್ರತಿಕೃತಿ ಎದುರು ಫೋಟೊ ತೆಗೆಸಿಕೊಳ್ಳಲು ಜನ ಮುಗಿಬಿದ್ದರು. ಗಾಜಿನ ಮನೆಯ ಹೊರಭಾಗದಲ್ಲಿ ಕೇಸರಿ ಹಾಗೂ ಕಪ್ಪು ಬಣ್ಣದ ಚೆಂಡುಗಳಿಂದ ಸಿದ್ಧಪಡಿಸಿದ್ದ ವಿವೇಕಾನಂದರ ರೇಖಾಚಿತ್ರ ಜನರನ್ನು ಆಕರ್ಷಿಸಿತು.

ಕೊಪ್ಪಳದ ಮುನಿರಾಬಾದ್‌ನಲ್ಲಿರುವ ಪಂಪಾವನದ ಮಾದರಿಯನ್ನು ಪ್ರದರ್ಶನದಲ್ಲಿ ಇಡಲಾಗಿದೆ. ಕ್ಯಾನ್ಸರ್‌ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕ್ಯಾನ್ಸರ್‌ ಚಿಹ್ನೆಯನ್ನು ಪುಷ್ಪಗಳಿಂದ ಸಿಂಗರಿಸಲಾಗಿದೆ. 

ಆರೋಗ್ಯ ಇಲಾಖೆ ವತಿಯಿಂದ ಪಲ್ಸ್‌ ಪೋಲಿಯೊ ಅಭಿಯಾನದ ಅಂಗವಾಗಿ ಉದ್ಯಾನಕ್ಕೆ ಭೇಟಿ ನೀಡಿದ ಮಕ್ಕಳಿಗೆ ಸ್ವಯಂಸೇವಕರು ಪೋಲಿಯೊ ಹನಿ ಹಾಕಿದರು.

ಅಂಧ ಕಲಾವಿದರ ಸಂಘದವರು ಆಯೋಜಿಸಿದ್ದ ವಾದ್ಯಗೋಷ್ಠಿ ದಿನದ ವಿಶೇಷವಾಗಿತ್ತು. ಅಂಧ ಗಾಯಕರು ವಿವಿಧ ಗೀತೆಗಳನ್ನು ಹಾಡುವ ಮೂಲಕ ರಂಜಿಸಿದರು.

*
ನಾನು ಸ್ವಾಮಿ ವಿವೇಕಾನಂದರ ಅಭಿಮಾನಿ. ಪ್ರದರ್ಶನ ವೀಕ್ಷಿಸಲು ಬೆಂಗಳೂರಿಗೆ ಬಂದೆ. ವಿವೇಕಾನಂದರ ಬೃಹತ್ ಪ್ರತಿಮೆ ಬಹಳ ಇಷ್ಟವಾಯಿತು
-ರಾಜೇಶ್‌, ಉಡುಪಿ

*
ಭಾನುವಾರ ಕ್ರಿಕೆಟ್‌ ಪಂದ್ಯ ಇದ್ದ ಕಾರಣ ಪ್ರದರ್ಶನಕ್ಕೆ ಕಡಿಮೆ ಜನ ಭೇಟಿ ನೀಡಿರಬಹುದು. ಮುಂದಿನ ದಿನಗಳಲ್ಲಿ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.
-ಬಿ.ವೆಂಕಟೇಶ್, ತೋಟಗಾರಿಕೆ ಇಲಾಖೆ ನಿರ್ದೇಶಕ

**

ಅಂಕಿ -ಅಂಶ

ಫಲಪುಷ್ಪ‍ ಪ್ರದರ್ಶನಕ್ಕೆ ಭೇಟಿ ನೀಡಿದವರು (ಭಾನುವಾರ)
ವಯಸ್ಕರು; 30 ಸಾವಿರ
ಮಕ್ಕಳು; 6 ಸಾವಿರ
ಸಂಗ್ರಹವಾದ ಹಣ; ₹16.8 ಲಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು