ಶನಿವಾರ, ಡಿಸೆಂಬರ್ 3, 2022
25 °C

ಲಾಲ್‌ಬಾಗ್ ಸಸ್ಯಕಾಶಿ... ಸಮಸ್ಯೆಗಳ ರಾಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಸ್ಯಕಾಶಿಯಲ್ಲಿ ಸಮಸ್ಯೆಗಳ ರಾಶಿ ಇರುವುದಕ್ಕೆ ಜನರಿಂದ ಬಂದಿರುವ ಪ್ರತಿಕ್ರಿಯೆಗಳೇ ಸಾಕ್ಷಿ. ತೋಟಗಾರಿಕಾ ಸಚಿವ ಮುನಿರತ್ನ ಅವರು ಅಲ್ಲಿ ‘ಜನಸ್ಪಂದನ’ ನಡೆಸಬೇಕೆಂಬ ವಿನಂತಿಗೆ ಒಪ್ಪಿಗೆ ನೀಡಲಿಲ್ಲ. ಇದರಿಂದ ಜನರಿಗೆ ಅಹವಾಲು ಹೇಳಿಕೊಂಡು, ಅಲ್ಲಿಯೇ ಪರಿಹಾರ ಪಡೆಯುವ ಅವಕಾಶವೊಂದನ್ನು ತಪ್ಪಿಸಿದಂತೆ ಆಗಿದೆ. ಅಂತಹ ಜನದನಿಗೆ ‘ಪ್ರಜಾವಾಣಿ’ ಈ ಮೂಲಕ ವೇದಿಕೆ ಒದಗಿಸಿದೆ.

--

ಆಳುವ ವರ್ಗಕ್ಕೆ ಇರಲಿ ಇಚ್ಛಾಶಕ್ತಿ

ಬೆಂಗಳೂರಿಗೆ 'ಗಾರ್ಡನ್ ಸಿಟಿ' ಎಂಬ ಕಿರೀಟ ಹೊರಿಸಿದ್ದು ಈ ಸಸ್ಯ ಕಾಶಿಯೇ. ಇತ್ತೀಚೆಗೆ ನಾನಾ ಕಾರಣಗಳಿಂದಾಗಿ ವಲಸಿಗರ ಪ್ರಮಾಣ ಹೆಚ್ಚಿ, ಕಾಂಕ್ರೀಟು ಕಾಡು, ಗಾರ್ಬೇಜು ಸಿಟಿ, ರಾಕ್ಷಸ ನಗರಿ ಎಂಬೆಲ್ಲ ಕೆಟ್ಟ ಹೆಸರಿಗೆ ಗುರಿಯಾಗುತ್ತಿದ್ದರೂ ಮಹಾನಗರದ ಹೃದಯ ಭಾಗದಲ್ಲಿ ಸದಾ ಹಸಿರು ಉಸಿರಾಡುವ ಶ್ವಾಸಕೋಶ ಇದು. ಉದ್ಯಾನ ನಗರಿಯ ‘ದೇವಾಲಯವೀ ಹೂವಿನ ತೋಟಂ’ ಇನ್ನೂ ಜೀವ ಹಿಡಿದುಕೊಂಡಿರುವುದು ನಮ್ಮ ಹೆಮ್ಮೆ. ಹಾಗೆಯೇ ಇದನ್ನು ಕಾಪಿಟ್ಟುಕೊಳ್ಳಬೇಕಾದದ್ದು ನಮ್ಮ ಧರ್ಮ, ಆಳುವ ವರ್ಗಕ್ಕೆ ಆ ಇಚ್ಛಾಶಕ್ತಿಯಿದೆಯೆ?

-ಈರಪ್ಪ ಎಂ ಕಂಬಳಿ, ಲೇಕ್ ವಿನ್ ಸಂಕ್ರಾಂತಿ ಅಪಾರ್ಟ್‌ಮೆಂಟ್, ರಾಜರಾಜೇಶ್ವರಿನಗರ

ವರ್ಷಕ್ಕೆರಡು ಸಲ ಇಲಾಖೆ ಜನರ ಸಲಹೆ ಪಡೆಯಲಿ

ಸುಮಾರು 50 ವರ್ಷಗಳಿಂದ ಲಾಲ್‌ಬಾಗ್‌ ಉದ್ಯಾನವನ್ನು ನೋಡುತ್ತಾ ಬಂದಿದ್ದೇನೆ. ಈ ಅರ್ಧ ಶತಮಾನದಲ್ಲಿ ಈ ಉದ್ಯಾನ ಯಾವುದೇ ರೀತಿಯಲ್ಲಿ ಹಾಳಾಗಿಲ್ಲ. ಬದಲಾಗಿ ಅದರ ಘನತೆಯನ್ನು, ಸೌಂದರ್ಯವನ್ನು ಕಾಪಾಡುತ್ತ ಬಂದಿರುವುದಲ್ಲದೆ, ಅನೇಕ ರೀತಿಯ ಅಭಿವೃದ್ಧಿ ಕಾರ್ಯಗಳಾಗಿವೆ. ಆದರೆ ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಅಧಿಕವಾಗಿದೆ. ಅದಕ್ಕೆ ತಕ್ಕನಾದ ಕಸದ ಪೆಟ್ಟಿಗೆಗಳು, ಕುಡಿಯುವ ನೀರಿನ ಸೌಲಭ್ಯ ಒದಗಿಸಿಲ್ಲ. ವಿದ್ಯುತ್ ಚಾಲಿತ ವಾಹನಗಳಂತಹ ಪ್ರವಾಸಿಸ್ನೇಹಿ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಇಂತಹ ಸಂದರ್ಭದಲ್ಲಿ ಕೇವಲ ಸರ್ಕಾರ ಇಲಾಖೆಗಳನ್ನು ದೂರದೆ ಪ್ರವಾಸಿಗರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ಲಾಲ್‌ಬಾಗ್‌ ಅನ್ನು ಒಂದು ಉತ್ತಮ ಪ್ರವಾಸಿವನ್ನಾಗಿ ಮಾಡಲು ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಅರಿತು, ಇಲಾಖೆಯ ಜೊತೆ ಸಹಕರಿಸಬೇಕು. ಇಲಾಖೆ ಮತ್ತು ಸರ್ಕಾರ ವರ್ಷಕ್ಕೆರಡು ಬಾರಿ, ಸಾರ್ವಜನಿಕರ, ವಾಯುವಿಹಾರಿ ಸಂಘ–ಸಂಸ್ಥೆಗಳಿಂದ ಸಲಹೆ ಸೂಚನೆ ಪಡೆದು ಉಪಯುಕ್ತವಾದ ಸಲಹೆಗಳನ್ನು ಅನುಷ್ಠಾನಗೊಳಿಸಬೇಕು.

ಟಿ. ವಿ. ಬಿ. ರಾಜನ್, ನಮ್ಮನೆ ಅಪಾರ್ಟ್‌ಮೆಂಟ್, ತಲಘಟ್ಟಪುರ
––

ಹೆಸರಿಗಷ್ಟೆ ಇರುವ ಕ್ಲಿನಿಕ್

ನಾನು ಲಾಲ್‌ಬಾಗ್‌ನಲ್ಲಿ 30 ವರ್ಷದಿಂದ ನಿಯಮಿತವಾಗಿ ವಾಯುವಿಹಾರ ಮಾಡುತ್ತಿದ್ದೇನೆ. ಆದರೆ ಈಗ ಖಾಸಗಿ ವ್ಯಾಪಾರಸ್ಥರ ಹಾವಳಿ ಹೆಚ್ಚಾಗಿದೆ. ನಾಯಿಗಳ ಸಂತತಿ ಹೆಚ್ಚಾಗಿದ್ದು, ಅವುಗಳಿಗೆ ಆಹಾರ ಹಾಕುವವರ ಸಂಖ್ಯೆ ಹೆಚ್ಚಾಗಿದೆ. ಸರಿಯಾದ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಹೆಸರಿಗಷ್ಟೇ ಒಂದು ಕ್ಲಿನಿಕ್ ಇದೆ. ಆದರೆ ಅಲ್ಲಿ ಯಾರೂ ಇರುವುದಿಲ್ಲ. ನಿಯಮಿತವಾಗಿ ಹಳೆಯ ಮತ್ತು ಒಣಗಿದ ರೆಂಬೆ–ಕೊಂಬೆಗಳನ್ನು ತೆರವು ಮಾಡುತ್ತಿಲ್ಲ. ನಿರ್ವಹಣೆಯ ಕೊರತೆಯಿಂದ ಲಾಲ್‌ಬಾಗ್‌ ಸೊರಗುತ್ತಿದೆ.

ಲಕ್ಷ್ಮಿಕಾಂತ್ ಎಲ್, ದೊಡ್ಡ ಮಾವಳ್ಳಿ,

––

ತಿಂಗಳಿಗೆ ಒಮ್ಮೆ ವಿದ್ಯಾರ್ಥಿಗಳಿಗೆ ಸಿಗಲಿ ಉಚಿತ ಪ್ರವೇಶ

ಲಾಲ್‌ಬಾಗ್ ಸಸ್ಯಗಳ ಸುಂದರ ತೋಟವನ್ನು ನೋಡಲು, ಸುತ್ತಾಡಲು ಬೆಳಗಿನ ಸಮಯದಲ್ಲಿ ಉಚಿತ ಪ್ರವೇಶ ಇರುತ್ತದೆ. ಬೆಳಿಗ್ಗೆ ವಾಯುವಿಹಾರಕ್ಕೆ ಹೇಳಿ ಮಾಡಿಸಿದ ಸ್ಥಳ. ನಗರದ ಸರ್ಕಾರಿ ಶಾಲೆ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತಿಂಗಳಲ್ಲಿ ಒಂದು ದಿನ ಉಚಿತ ಪ್ರವೇಶ ಕಲ್ಪಿಸಬೇಕು. ಇದು ಸಚಿವ ಮುನಿರತ್ನ ಅವರಿಗೆ ನಮ್ಮ ಒತ್ತಾಯ.

ಗ.ಮ.ಜಯಪ್ರಕಾಶ್, ಗವೀಪುರ

ವಾಣಿಜ್ಯ ಚಟುವಟಿಕೆಗೆ ಅವಕಾಶ ಬೇಡ

ಲಾಲ್‌ಬಾಗ್‌ ನಮ್ಮೆಲ್ಲರ ಹೆಮ್ಮೆ. ಈ ಉದ್ಯಾನದಲ್ಲಿ ಸಾರ್ವಜನಿಕರು ತೆಗೆದುಕೊಂಡು ಬರುವ ಆಹಾರ ಪದಾರ್ಥಗಳ ಪ್ಲಾಸ್ಟಿಕ್‌ ಕವರ್‌ಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಗಳನ್ನು ಎಲ್ಲರೂ ಪಾಲಿಸಿ ಉದ್ಯಾನದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಇಲ್ಲಿ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡಬಾರದರು. ಅದು ಸಸ್ಯಕಾಶಿಯಾಗಿ ಮುಂದಿನ ಪೀಳಿಗೆಗೆ ಹಸಿರಿನಿಂದ ಕಂಗೊಳಿಸುವ ರೀತಿಯಲ್ಲಿ ಉಳಿಸಲು ಪಣ ತೊಡಬೇಕು.

ಸಂಪತ್ ಎನ್, ಬಿಎಚ್‌ಇಎಲ್ ಲೇಔಟ್, ನಂದಿನಿ ಬಡಾವಣೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.